ಬಾಯಿ ದೇಹದ ಆರೋಗ್ಯ ತಿಳಿಸುವ ಕಿಂಡಿ: ಪ್ರೊ. ಡಾ. ಸಪ್ನಾ

KannadaprabhaNewsNetwork | Published : Nov 13, 2024 12:09 AM

ಸಾರಾಂಶ

ಕಣ್ಣುಗಳು ಮನಸ್ಸಿನ ಭಾವನೆ ತಿಳಿಸುವ ಕನ್ನಡಿಯಾದರೆ, ಬಾಯಿ ದೇಹದ ಆರೋಗ್ಯ ತಿಳಿಸುವ ಕಿಂಡಿಯಾಗಿದೆ ಎಂದು ದಾವಣಗೆರೆ ಬಾಪೂಜಿ ದಂತ ವೈದ್ಯಕೀಯ ಸಂಸ್ಥೆ ಪ್ರೊಫೆಸರ್ ಡಾ. ಸಪ್ಮಾ ಜಗಳೂರಲ್ಲಿ ಹೇಳಿದ್ದಾರೆ.

- ತೋರಣಗಟ್ಟೆ ಸರ್ಕಾರಿ ಶಾಲೆಯಲ್ಲಿ ಉಚಿತ ದಂತ ತಪಾಸಣೆ ಶಿಬಿರ - - - ಕನ್ನಡಪ್ರಭ ವಾರ್ತೆ ಜಗಳೂರು

ಕಣ್ಣುಗಳು ಮನಸ್ಸಿನ ಭಾವನೆ ತಿಳಿಸುವ ಕನ್ನಡಿಯಾದರೆ, ಬಾಯಿ ದೇಹದ ಆರೋಗ್ಯ ತಿಳಿಸುವ ಕಿಂಡಿಯಾಗಿದೆ ಎಂದು ದಾವಣಗೆರೆ ಬಾಪೂಜಿ ದಂತ ವೈದ್ಯಕೀಯ ಸಂಸ್ಥೆ ಪ್ರೊಫೆಸರ್ ಡಾ. ಸಪ್ಮಾ ಹೇಳಿದರು.

ತಾಲೂಕಿನ ತೋರಣಗಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಪ್ರೇರಣಾ ಸಮಾಜ ಸೇವಾ ಸಂಸ್ಥೆ (ಚರ್ಚ್), ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಎಸ್.ಎಸ್. ಕೇರ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ದಂತ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನ ಬಾಯಿಯ ಆರೋಗ್ಯಕ್ಕೂ ದೇಹದ ಆರೋಗ್ಯಕ್ಕೂ ಸಂಬಂಧ ಇದೆ. ದೇಹ ಆರೋಗ್ಯದಿಂದ ಇರಬೇಕಾದರೆ ನಮ್ಮ ಬಾಯಿಯ ಸ್ವಾಸ್ಥ್ಯ ಚೆನ್ನಾಗಿರಬೇಕು. ಆದರೆ, ಬಹಳಷ್ಟು ಜನರು ಬಾಯಿ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಬಾಯಿ ಪರೀಕ್ಷೆ ಮಾಡಿದಾಗ ವ್ಯವಸ್ಥಿತವಾಗಿ ದೇಹದಲ್ಲಿ ಅಡಗಿರುವ ಅನೇಕ ಗುಟ್ಟುಗಳನ್ನು ತಿಳಿದುಕೊಳ್ಳಬಹುದು. ದೇಹದ ಇನ್ನಿತರ ಸಮಸ್ಯೆಗಳನ್ನು ಪತ್ತೆ ಹಚ್ಚಲು ಇದರಿಂದ ಸಾಧ್ಯವಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಬದಲಾವಣೆಗಳಿಂದಾಗಿ ಜನರು ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಒತ್ತಡವು ನಮ್ಮ ದೇಹದ ಪ್ರತಿಯೊಂದು ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಇದು ನಮ್ಮ ಹಲ್ಲುಗಳ ಮೇಲೂ ಪರಿಣಾಮ ಬಿರುತ್ತದೆ. ಒತ್ತಡದಿಂದ ಹಲ್ಲುಗಳ ಮೇಲಾಗುವ ಪರಿಣಾಮಗಳಿಂದ ಜೀವಕ್ಕೂ ಕುತ್ತು ಬರುವ ಸಾಧ್ಯತೆ ಇರುತ್ತದೆ ಎಂದರು.

ಪ್ರೇರಣಾ ಸಮಾಜ ಸೇವಾ ಸಂಸ್ಥೆ ನಿರ್ದೇಶಕ ಫಾದರ್ ರೋನಾಲ್ಡ್ ಮಾತನಾಡಿ, ಹಲ್ಲಿನ ಸಮಸ್ಯೆಗಳನ್ನು ದಂತವೈದ್ಯರೊಂದಿಗೆ ಹಂಚಿಕೊಳ್ಳಿ ಮತ್ತು ಅನಗತ್ಯ ಸ್ವಯಂ ಔಷಧಿಗಳನ್ನು ತಪ್ಪಿಸಿ ವಿಟಮಿನ್ ಭರಿತ ಆಹಾರವನ್ನು ಸೇವಿಸಿದರೆ ಆರೋಗ್ಯವಾಗಿ ಇರಬಹುದು ಎಂದರು.

ಈ ಸಂದರ್ಭ ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ, ಮುಖಂಡರಾದ ಬಾಲಪ್ಪ, ಕೆ.ಟಿ. ತಿಪ್ಪೇಸ್ವಾಮಿ, ಗ್ರಾಪಂ ಸದಸ್ಯ ಟಿ.ಜಿ. ಬಾಲಪ್ಪ, ಶ್ರೀನಿವಾಸ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರಂಗಪ್ಪ ವೆಂಕಪ್ಪ, ಪ್ರೌಢಶಾಲಾ ಮುಖ್ಯಶಿಕ್ಷಕ ಜಗದೀಶ್, ಮುಖಂಡರಾದ ಜಿ.ಬಿ. ಬಡಪ್ಪ, ನಿಂಗಪ್ಪ, ರಕೀಬ್ ಮತ್ತಿತರರು ಇದ್ದರು.

- - - -12ಜೆ.ಜಿ.ಎಲ್.1:

ಜಗಳೂರು ತಾಲೂಕಿನ ತೋರಣಗಟ್ಟೆ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಉಚಿತ ದಂತ ತಪಾಸಣೆ ನಡೆಯಿತು. ಶಿಬಿರದಲ್ಲಿ ದಾವಣಗೆರೆ ಬಾಪೂಜಿ ದಂತ ವೈದ್ಯಕೀಯ ಸಂಸ್ಥೆಯ ಪ್ರೊಫೆಸರ್ ಡಾ. ಸಪ್ಮಾ, ಫಾದರ್ ರೋನಾಲ್ಡ್, ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ,ಗ್ರಾ.ಪಂ. ಸದಸ್ಯ ಶ್ರೀನಿವಾಸ್ ಇದ್ದರು.

Share this article