ಶಿವಮೊಗ್ಗ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಯ್ತು. ಯುಗಾದಿ, ದಸರಾ, ದೀಪಾವಳಿ ಹೀಗೆ ಒಂದೊಂದು ಹಬ್ಬಕ್ಕೂ ಒಂದೊಂದು ಹಗರಣ ಹೊರಗೆ ಬರುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಜನರು ಸಂಪೂರ್ಣ ಬಹುಮತ ಕೊಟ್ಟರು. ಆದರೆ, ಅವರು ಅಧಿಕಾರಕ್ಕೆ ಬಂದು ವರ್ಷದಲ್ಲೇ ವಾಲ್ಮೀಕಿ ಹಗರಣ ಹೊರಗೆ ಬಂತು. ಈಗ ವಕ್ಫ್ ಹಗರಣ ಹೊರಗೆ ಬರುತ್ತಿದೆ. ದಕ್ಷ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಡವರು ಸೈಟು ಇಲ್ಲ ಅಂತಿದ್ದಾರೆ. ಆದರೆ, ಸಿಎಂ ಅವರ ಕುಟುಂಬಕ್ಕೆ 14 ಸೈಟು ಮಾಡಿಕೊಂಡಿದ್ದಾರೆ. ಸಿಎಂ, ಡಿಸಿಎಂ ಲೂಟಿ ಸರ್ಕಾರ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.ಕೋವಿಡ್ ಸಂದರ್ಭದಲ್ಲಿ ಕೆಲವು ಎಮರ್ಜೆನ್ಸಿ ನಿರ್ಧಾರ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಹೀಗಾಗಿ ಯಡಿಯೂರಪ್ಪ ಅವರು ಕೆಲ ನಿರ್ಧಾರ ಕೈಗೊಂಡಿದ್ದಾರೆ. ಈಗ ಸರ್ಕಾರ ಕೋವಿಡ್ ಹಗರಣ ನಡೆದಿದೆ. ತನಿಖೆ ಮಾಡುತ್ತೇವೆ ಎನ್ನುತ್ತಿದ್ದಾರೆ. ವಿಜಯೇಂದ್ರ ಬೆಳೆಯುತ್ತಿದ್ದಾರೆ. ಅವರನ್ನು ಕಟ್ಟಿ ಹಾಕಲು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಯಡಿಯೂರಪ್ಪ ಕುಟುಂಬಕ್ಕೆ ಇದೆಲ್ಲಾ ಹೊಸದಲ್ಲ. ಕಾನೂನು ಹೋರಾಟ ಮಾಡಿ ಎದುರಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಿವಮೊಗ್ಗ ತಹಸಿಲ್ದಾರ್ ಗಿರೀಶ್ ವರ್ಗಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಾದ್ಯಂತ ಸರ್ಕಾರಿ ನೌಕರರ ಚುನಾವಣೆ ನಡೆಯುತ್ತಿದೆ. ಶಿವಮೊಗ್ಗದಲ್ಲಿ ದಕ್ಷ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ, ಸರ್ಕಾರಿ ನೌಕರರು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ ಅಂತಾ ವರ್ಗಾವಣೆ ಮಾಡ್ತಿದ್ದಾರೆ. ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ದೂರಿದರು.
ಅಧಿಕಾರಿಗಳ ಸ್ವಾತಂತ್ರ್ಯ ಕಿತ್ತುಕೊಳ್ಳುವ ಕೆಲಸ ಮಾಡ್ತಿದ್ದಾರೆ. ಮಧು ಬಂಗಾರಪ್ಪ ಇಂತಹ ಕೆಲಸ ಮಾಡುತ್ತಿದ್ದಾರೆ. ಗಿರೀಶ್ ತಹಸೀಲ್ದಾರ್ ಶಿವಮೊಗ್ಗಕ್ಕೆ ಬಂದು 9 ತಿಂಗಳು ಆಗಿದೆ. 9 ತಿಂಗಳಿಗೆ ವರ್ಗಾವಣೆ ಮಾಡಿದ್ದಾರೆ. ತಹಸೀಲ್ದಾರ್ ಅವರಿಗೆ ಚುನಾವಣೆಗೆ ಸ್ಪರ್ಧಿಸದಂತೆ ಉಸ್ತುವಾರಿ ಸಚಿವರು ತಿಳಿಸಿದ್ದರು. ನಾನೂ ಹೇಳಿದ್ದರೂ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ ಅಂತಾ ಏಕಾಏಕಿ ವರ್ಗಾವಣೆ ಮಾಡಿದ್ದಾರೆ. ಅಧಿಕಾರಿಗಳು ಯಾರು ಇಂತಹ ಗೊಡ್ಡು ಬೆದರಿಕೆಗೆ ಹೆದರಬಾರದು ಎಂದರು.