ಹುಬ್ಬಳ್ಳಿ: ಧರ್ಮಸ್ಥಳ ಪ್ರಕರಣದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಸತ್ಯ, ನ್ಯಾಯ, ನೀತಿಯಿಂದ ಸರಳವಾಗಿ ಬದುಕುತ್ತಿರುವ ವ್ಯಕ್ತಿಯ ಸಾಮಾಜಿಕ ಬೆಳವಣಿಗೆ ಸಹಿಸದ ಜನರು ಆರೋಪ ಮಾಡುತ್ತಿದ್ದಾರೆ ಎಂದು ವರೂರಿನ ನವಗ್ರಹ ತೀರ್ಥ ಕ್ಷೇತ್ರದ ಜೈನಮುನಿ ಗುಣಧರ ನಂದಿ ಮಹಾರಾಜ ಆಕ್ರೋಶ ವ್ಯಕ್ತಪಡಿಸಿದರು. ವೀರೇಂದ್ರ ಹೆಗ್ಗಡೆ ಅವರು ಯಾವುದೇ ಕೊಲೆ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಅವರು ಭಾಗಿಯಾಗಿದ್ದಾರೆ ಎಂದು ಸಾಬೀತಾದರೆ ತಾವು ಸನ್ಯಾಸತ್ವ ತ್ಯಜಿಸುವುದಾಗಿ ಸವಾಲೆಸೆದರು.
ಹುಬ್ಬಳ್ಳಿಯ ವರೂರಿನಲ್ಲಿ ಸೋಮವಾರ ಹೊಂಬುಜ, ವರೂರ, ಮೂಡಬಿದ್ರೆ, ಚಿತ್ತಾಭೂರ ಕಂಬದಹಳ್ಳಿ, ಅರಿಹಂತಗಿರಿ, ಕನಕಗಿರಿ ಹಾಗೂ ಕಾರ್ಕಳ ಕ್ಷೇತ್ರದ ಜೈನ ಭಟ್ಟಾರಕರನ್ನು ಒಳಗೊಂಡ ಕರ್ನಾಟಕ ಸಮಸ್ತ ಭಟ್ಟಾರಕ ಪರಿಷತ್ ಪರವಾಗಿ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.ಕಳೆದ 23 ವರ್ಷದಿಂದ ಅವರನ್ನು ವೈಯಕ್ತಿಕವಾಗಿ ಬಲ್ಲವನು. ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆ ಎಂದೂ ಜೈನ್ ಧರ್ಮ ಹೆಸರಲ್ಲಿ ಯಾವುದೇ ಶೈಕ್ಷಣಿಕ ಸಂಸ್ಥೆ ಕಟ್ಟಿಲ್ಲ. ಅವರು ಕಟ್ಟಿದ ಎಲ್ಲ ಸಂಸ್ಥೆಗಳು ಮಂಜುನಾಥನ ಹೆಸರಲ್ಲಿವೆ. ಅಲ್ಲಿನ ಧಾರ್ಮಿಕ ಕೇಂದ್ರಕ್ಕೆ ಎಲ್ಲ ಧರ್ಮದವರೂ ನಡೆದುಕೊಳ್ಳುತ್ತಾರೆ. ಇಂತಹ ಅಪವಾದಗಳಿಂದ ಭಕ್ತರಿಗೆ ತೀವ್ರ ನೋವುಂಟಾಗಿದೆ ಎಂದರು.
ಧರ್ಮಸ್ಥಳದಲ್ಲಿ 300 ಕೊಲೆಗಳಾಗಿವೆ ಎಂದು ಕೆಲವರು ಆರೋಪಿಸಿದ್ದಾರೆ. ಒಂದೇ ಒಂದು ಕೊಲೆ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರು ಭಾಗಿಯಾಗಿದ್ದರೆ. ನಾನು ಸನ್ಯಾಸತ್ವ ತ್ಯಜಿಸುತ್ತೇನೆ. ಅವರು ಯಾವುದೇ ತಪ್ಪು ಮಾಡಿಲ್ಲ, ಸುಳ್ಳು ಆರೋಪ ಮಾಡಲಾಗುತ್ತಿದೆ. ಹರ್ಷೇಂದ್ರ ಜೈನ್ ಕೊಲೆ ಮಾಡಿಲ್ಲ. ಅಪಪ್ರಚಾರ ಮಾಡಿದವರನ್ನು ನಾವು ಬಿಡುವುದಿಲ್ಲ ಎಂದರು.ಈಗ ಎಸ್ಐಟಿ ತನಿಖೆ ನಡೆದಿದೆ. ತನಿಖಾ ವರದಿ ಬರಲಿ. ವರದಿ ಬಂದ ಬಳಿಕ ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆ ಅವರನ್ನು ಬೆಂಬಲಿಸಿ ಹೋರಾಟ ಮಾಡುತ್ತೇವೆ. ಎಲ್ಲ ಮಂಜುನಾಥ ಭಕ್ತರು ಸೇರಿ ಹೋರಾಟ ರೂಪಿಸುತ್ತೇವೆ. ಒಂದು ವೇಳೆ ತನಿಖೆಯಲ್ಲಿ ಆರೋಪ ಸಾಬೀತಾದರೆ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆಯೂ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಕೆಲ ಕಿಡಿಗೇಡಿಗಳು, ದೇಶದ್ರೋಹಿಗಳು ಜೈನ ಧರ್ಮದ ರಾಜರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಮ್ಮ ಧರ್ಮದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಇದನ್ನು ರಾಜ್ಯ ಸರ್ಕಾರ ತಡೆಯಬೇಕು. ಇನ್ಮುಂದೆ ನಾವು ಇದನ್ನು ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ನಾವು ಉಗ್ರ ಹೋರಾಟ ಮಾಡುತ್ತೇವೆ. ಸದ್ಯ ನಡೆದಿರುವ ಸಭೆಯಲ್ಲಿ ರಾಜ್ಯದ ಎಲ್ಲ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಆ. 5 ರಂದು ವರೂರಿನಲ್ಲಿ ಹುಬ್ಬಳ್ಳಿ ತಾಲೂಕಿನ ಸಮಾಜದವರ ಸಭೆ ನಡೆಸಲಾಗುವುದು. ಆ. 9ರಂದು ರಾಜ್ಯದ ನಮ್ಮ ಸಮಾಜದ ಮುಖಂಡರ ಸಭೆ ನಡೆಸಿ ಹೋರಾಟದ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.