ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅವರ ಬಗ್ಗೆ ಸುಳ್ಳು ವಿಚಾರಗಳನ್ನು ಸೃಷ್ಟಿಸಿ ಅವರ ವ್ಯಕ್ತಿತ್ವಕ್ಕೆ ಕುಂದು ತರುವ ಪ್ರಯತ್ನದ ಆರೋಪದ ಹಿನ್ನೆಲೆಯಲ್ಲಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿ ಜಿಲ್ಲೆಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಶುಭಾಕಲ್ಯಾಣ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಜಿ.ಪ್ರಭು ಅವರು ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ ಇಡೀ ರಾಜ್ಯದಲ್ಲಿಯೇ ತುಮಕೂರು ಜಿಲ್ಲೆಯನ್ನು ಪ್ರಥಮ ಸ್ಥಾನದಲ್ಲಿರುವಂತೆ ಕರ್ತವ್ಯ ನಿರ್ವಹಿಸಿರುತ್ತಾರೆ. ಇದಕ್ಕಾಗಿ ರಾಜ್ಯ ಸರ್ಕಾರದ ೨೦೨೪-೨೫ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳಿಂದ ಪಡೆದಿದ್ದಾರೆ. ಮಿಷನ್-500ಎಂಬ ವಿನೂತನ ಯೋಜನೆಯಡಿ ಪ್ರತಿಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಬದು ನಿರ್ಮಾಣ, ಕೊಟ್ಟಿಗೆ ನಿರ್ಮಾಣ, ಅರಣ್ಯೀಕರಣ, ತೋಟಗಾರಿಕೆ ಬೆಳೆಗಳನ್ನು ಉತ್ತೇಜಿಸಿ ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ. ಜಿಲ್ಲೆಯ ಗ್ರಾಮೀಣ ಆಡಳಿತದ ಮುಖ್ಯಸ್ಥರಾಗಿ ಎಲ್ಲಾ ಅಧೀನ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳ ನಾಯಕತ್ವ ವಹಿಸಿಕೊಂಡು ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದಾರೆ. ಈ ಕಾರ್ಯನಿರ್ವಹಣೆ ಸಂದರ್ಭದಲ್ಲಿ ಅಧೀನ ನೌಕರರು ತೀವ್ರ ತರವಾದ ಕರ್ತವ್ಯ ಲೋಪ ಎಸಗಿದಾಗ ಎಚ್ಚರಿಕೆಯ ನೋಟೀಸುಗಳನ್ನು ನೀಡಿದಾಗ್ಯೂ ತಿದ್ದಿಕೊಳ್ಳದೇ ಇದ್ದ ಸಂದರ್ಭದಲ್ಲಿ ಅನಿವಾರ್ಯವಾಗಿ ಅವರ ವಿರುದ್ಧ ಅಮಾನತ್ತಿನಂತಹ ಶಿಸ್ತು ಕ್ರಮಕೈಗೊಂಡಿರುತ್ತಾರೆ. ಈ ವೇಳೆ ಅಧಿಕಾರಿ ಅಥವಾ ನೌಕರನ ಧರ್ಮ, ಜಾತಿಯನ್ನು ಪರಿಗಣಿಸದೆ ಕ್ರಮಕೈಗೊಂಡಿರುತ್ತಾರೆ. ಇದೇ ಅವಧಿಯಲ್ಲಿ ಪಂಚಾಯತ್ ರಾಜ್ ಇಲಾಖೆಯ ಒಟ್ಟು 22 ಅಧಿಕಾರಿ ನೌಕರರನ್ನು ಅಮಾನತು ಮಾಡಿದ್ದು ಇವರಲ್ಲಿ ಸಾಮಾನ್ಯ ವರ್ಗದ 14 ಜನ, ಪರಿಶಿಷ್ಟ ಪಂಗಡದ ಒಬ್ಬರು ಹಾಗೂ ಪರಿಶಿಷ್ಟ ಜಾತಿಯ 7 ಜನರನ್ನು ವಿವಿಧ ಕಾರಣಕ್ಕೆ ಅಮಾನತುಗೊಳಿಸಿರುತ್ತಾರೆ. ಇಲಾಖೆಯ ಸಭೆಗಳಲ್ಲಿ ಪ್ರಗತಿ ಕುಂಠಿತವಾಗಿರುವ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಪಿಡಿಓಗಳು ಮತ್ತು ಇತರೆ ಸಿಬ್ಬಂದಿಗೆ ಎಚ್ಚರಿಕೆ ನೀಡಿರುವುದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿರುವ ಸಾಧ್ಯತೆಗಳಿವೆ. ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ದಲಿತ ನೌಕರರನ್ನು ಗುರಿಯಾಗಿಸಿಕೊಂಡು ಶಿಸ್ತು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಹಾಗೂ ದಲಿತ ವಿರೋಧಿ ಎಂಬಂತೆ ಕೆಲವರು ಬಿಂಬಿಸುತ್ತಿದ್ದಾರೆ. ಇದರ ಹಿಂದೆ ಯಾವುದೇ ಪ್ರಭಾವಿಗಳು ಮತ್ತು ನಮ್ಮದೇ ಇಲಾಖೆಯ ಕೆಲ ಹೊರಗುತ್ತಿಗೆ ನೌಕರರ ಕೈವಾಡ ಇರುವ ಗುಮಾನಿ ಇರುತ್ತದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಪರಿಶಿಷ್ಟ ಜಾತಿ, ಪಂಗಡ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ಸುನಿಲ್‌ಕುಮಾರ್, ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಆರ್.ನಾಗರಾಜು, ನೌಕರರ ಸಂಘದ ಜಿಲ್ಲಾಧ್ಯಕ್ಷ ಎ.ಸುರೇಶ್, ಪಿಡಿಒಗಳಾದ ಹನುಮಂತರಾಜು, ಶ್ರೀನಿವಾಸ್, ಶಿವಾನಂದ್ ಸಾತಿಹಾಳ್, ಟಿ.ವಿ.ಶ್ರೀನಿವಾಸಮೂರ್ತಿ, ಚಂದ್ರಹಾಸ್, ತೇಜಸ್, ಯುವರಾಜು ಪದಾಧಿಕಾರಿಗಳು ಈ ವೇಳೆ ಹಾಜರಿದ್ದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.