ಆರ್‌ಐ, ವಿಎಯಿಂದಲೇ ಸುಳ್ಳು ಮಾಹಿತಿ ಬೆಳಕಿಗೆ

KannadaprabhaNewsNetwork |  
Published : May 06, 2025, 12:22 AM IST
ಕೆಜಿಎಲ್1 | Kannada Prabha

ಸಾರಾಂಶ

ನೌಕರ ನಾಗರಾಜು ಶಾಲಾ ದಾಖಲಾತಿಯಲ್ಲಿನ ಜಾತಿ ಕಾಲಂನಲ್ಲಿನ ಜಾತಿ ಮರೆಮಾಚಿ ಅವು ಎಸ್ಟಿ ನಾಯಕ, ಪರಿವಾರ ಎಂದು ಸರಕಾರಕ್ಕೆ, ತಹಸೀಲ್ದಾರ್‌ಗೆ ಸುಳ್ಳು ವರದಿ ಸಲ್ಲಿಸಿರುವ ಆರ್‌ಐ ಮತ್ತು ವಿಎ ಲಿಖಿತ ವರದಿ ಪ್ರತಿ.

ಎನ್ ನಾಗೇಂದ್ರಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ‌

ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರ ನಾಗರಾಜು ಎಂಬುವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ವಿಚಾರದಲ್ಲಿ ಅವರನ್ನು ರಕ್ಷಿಸಲು ಹೋಗಿ ಇಬ್ಬರು ಕಂದಾಯ ಇಲಾಖೆಯ ಆರ್‌ಐ, ವಿಎಗಳು ಸರ್ಕಾರಕ್ಕೆ ಹಾಗೂ ಹನೂರು ತಹಸೀಲ್ದಾರ್ ಗುರುಪ್ರಸಾದ್‌ಗೆ ನಾಯಕ ಜನಾಂಗ ಎಂದು ತಪ್ಪು ತಪ್ಪು ಮಾಹಿತಿ ನೀಡಿ ದಾಖಲೆ ಸಮೇತ ಸಿಕ್ಕಿಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೌದಳ್ಳಿ ಗ್ರಾಮದ ಕಂದಾಯ ಇಲಾಖೆಯ ನೌಕರ ನಾಗರಾಜು ಪ್ರಸ್ತುತ ಚಾ.ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, 1976 ಮತ್ತು 1979-80ನೇ ಸಾಲಿನ ಶಾಲಾ ದಾಖಲಾತಿ ಜಾತಿ ಕಾಲಂನಲ್ಲಿ ಬೇಸ್ತ ಎಂದು ದಾಖಲೆಗಳಲ್ಲಿ ನಮದಾಗಿದೆ. ಹೀಗಿದ್ದರೂ ನಾಯಕ ಜನಾಂಗ ಎಂದು ಸುಳ್ಳು ಪ್ರಮಾಣ ಪತ್ರ ಪಡೆದು ಸರ್ಕಾರಿ ಹುದ್ದೆ ಗಿಟ್ಟಿಸಿದ್ದಾರೆ, ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಹದೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕ ರಾಮಕೃಷ್ಣಯ್ಯ ಎಂಬುವರ ಸಹಕಾರ ಪಡೆದು ಇತ್ತೀಚೆಗೆ ಶಾಲಾ ದಾಖಲಾತಿಯಲ್ಲಿದ್ದ ಬೇಸ್ತ ಎಂಬ ಜನಾಂಗದ ಕಾಲಂನಲ್ಲಿ ಪರಿವಾರ ಎಂದು ತಿದ್ದಿರುವುದು ಪತ್ತೆಯಾಗಿದ್ದು ಈ ಸಂಬಂಧ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ದಾಖಲೆ ಸಮೇತ ಶ್ರೀನಿವಾಸ್ ಎಂಬುವರು ದೂರು ಸಲ್ಲಿಸಿದ್ದಾರೆ.

ತನಿಖೆ ಪ್ರಗತಿಯಲ್ಲಿರುವಾಗಲೇ ರಾಮಾಪುರ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ತಿಕ್, ಶಿವಕುಮಾರ್ ಎಂಬ ಆರ್‌ಐ, ವಿಎಗಳು ಶಾಲಾ ದಾಖಲಾತಿ ಪರಿಶೀಲಿಸದೆ ನಾಯಕ ಜನಾಂಗ ಎಂದು ಸುಳ್ಳು ವರದಿ ನೀಡಿರುವುದು ಈಗ ನಾನಾ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ವರದಿಯಲ್ಲಿ ಏನಿದೆ?:

ರಾಮಾಪುರ ವೃತ್ತದಲ್ಲಿ ಕೆಲಸ ನಿರ್ವಹಿಸುತ್ತಿರುವ ಆರ್‌ಐ ಶಿವಕುಮಾರ್ ಮತ್ತು ವಿಎ ಕಾರ್ತಿಕ್ ಎಂಬುವರು ಪ್ರಭಾವ ಹಾಗೂ ಆಮಿಶಕ್ಕೊಳಗಾಗಿ ನೌಕರ ನಾಗರಾಜು ರಕ್ಷಣೆಗಾಗಿ ಸರಕಾರಕ್ಕೆ ಸಲ್ಲಿಸುವ ಮಹಜರ್ ವರದಿಯಲ್ಲಿ ತಪ್ಪು ತಪ್ಪಾಗಿ ಪ್ರತ್ಯೇಕ ಮಾಹಿತಿ ನೀಡಿ ದಾಖಲೆ ಸಮೇತ ಸಿಕ್ಕಿಬಿದ್ದಿದ್ದಾರೆ. ಕಾರ್ತಿಕ್ ನಾಗರಾಜು ಶಾಲಾ ದಾಖಲಾತಿಯಲ್ಲಿ ಬೆಸ್ತ ಎಂದಿದ್ದರೂ ಪರಿಶೀಲಿಸದೆ ನಾಯಕ ಹಾಗೂ ಪರಿವಾರ ನಾಯಕ ಎಂದಿದೆ ಎಂದು ಸುಳ್ಳು ಮಾಹಿತಿ ಮಹಜರು ವರದಿಯಲ್ಲಿ ನಮೂದಿಸಿ, ಮುತ್ತು ಹಾಗೂ ಸಿದ್ದಪ್ಪ ಎಂಬ ಗ್ರಾಮಸ್ಥರಿಂದ ಸುಳ್ಳು ವರದಿಗೆ ಸಹಿ ಮಾಡಿಸಿ ಸಿಕ್ಕಿಬಿದ್ದಿದ್ದಾರೆ.

ಆರ್‌ಐ ಶಿವಕುಮಾರ್ ಸಹಾ ತಹಸೀಲ್ದಾರ್‌ಗೆ ಸೆ.24, 2024ರಲ್ಲಿ ವರದಿ ಸಲ್ಲಿಸಿದ್ದು ವರದಿಯಲ್ಲಿ ಕೌದಳ್ಳಿ ಮುಖ್ಯ ಶಿಕ್ಷಕರಿಂದ ಶಾಲಾ ದಾಖಲಾತಿ ಪಡೆದು ಪರಿಶೀಲಿಸಲಾಯಿತು. ಶಾಲಾ ದಾಖಲಾತಿಯಂತೆ ಸದರಿ(ನೌಕರ ನಾಗರಾಜು) ನಾಯಕ ಜಾತಿಗೆ ಸೇರಿದವರಾಗಿದ್ದಾರೆಂದು ಶಾಲಾ ದಾಖಲೆಯಲ್ಲಿ ಪರಿವಾರ, ಪರಿವಾರ ನಾಯಕ ಎಂದಿದೆ. ಮೇಲ್ಕಂಡವರು ಎಸ್ಟಿ ಜಾತಿಗೆ ಸೇರಿದವರಾಗಿದ್ದಾರೆಂದು ಕೌದಳ್ಳಿ ಪ್ರೌಡ ಹಾಗೂ ಪ್ರಾಥಮಿಕ ಶಾಲೆಯ ಶಾಲಾ ದಾಖಲಾತಿ ಪರಿಶೀಲಿಸದೆ ಸುಳ್ಳು ವರದಿ ನೀಡಿ ಸಿಕ್ಕಿಬಿದ್ದಿದ್ದು ಈ ಪ್ರಕರಣ ಹಲವು ರೀತಿಯ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ಸೇವಾ ವಹಿ ಪುಸ್ತಕದಲ್ಲಿ ಜಾತಿ ನಮೂದಿಸಿಲ್ವಂತೆ:

ನೌಕರ ನಾಗರಾಜು ಸೇವಾ ಅವಧಿಯಲ್ಲಿ ಜಾತಿ ಕಾಲಂನಲ್ಲಿ ಯಾವ ಜನಾಂಗಕ್ಕೆ ಸೇರಿವರು ಎಂಬುದನ್ನೆ ನಮೂದಿಲ್ಲ ಎಂಬುದು ಜಿಲ್ಲಾಧಿಕಾರಿ ಪರಿಶೀಲನೆ ಹಂತದಲ್ಲಿ ತಿಳಿದು ಬಂದಿದೆ. ನಾಗರಾಜು ಸರಕಾರಿ ನೌಕರಿಗೆ ಸೇರಿದ ಬಳಿಕ ಯಾವ ಜನಾಂಗ ಎಂದು ನಮೂದಿಸಬೇಕು, ಆದರೆ ನಮೂದಿಸದಿರುವುದು ವಿಪರ್ಯಾಸದ ಸಂಗತಿ. ಈ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ್ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಜ.9, 2025ರಲ್ಲಿ ಬರೆದಿರುವ ಪತ್ರದಲ್ಲಿ ವಿವರಿಸಿದ್ದು ಈ ಸಂಬಂಧ ಕೂಲಂಕುಷವಾಗಿ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುವಂತೆ ಉಲ್ಲೇಖಿಸಿದ್ದಾರೆ.

3 ನೋಟಿಸ್ ಗಂಭೀರವಾಗಿ ಪರಿಗಣಿಸದ ನೌಕರ:

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಈ ಸಂಬಂಧ ನೌಕರ ನಾಗರಾಜುಗೆ ಮೂರು ನೋಟಿಸ್ ನೀಡಿದ್ದು ಜಾತಿ ಪ್ರಮಾಣ ಪತ್ರ, ತಂದೆಯ ಜಾತಿ ಪ್ರಮಾಣ ಪತ್ರ, ಜಾತಿ ನಮೂದಾಗಿರುವ ಸೇವಾ ವಹಿ ಪುಸ್ತಕ, ಜಾತಿ ಉಲ್ಲೇಖವಾಗಿರುವ ಪ್ರಾಥಮಿಕ ಶಾಲೆಯ 1ನೇ ತರಗತಿ ಶಾಲಾ ದಾಖಲಾತಿಯ ಕುರಿತು ದಾಖಲೆಗಳನ್ನು ಸಲ್ಲಿಸುವಂತೆ 15-7-2024, 18-2-2025 ಹಾಗೂ 24-2-2025ರಲ್ಲಿ ಕ್ರಮವಾಗಿ 3 ಬಾರಿ ನೋಟಸ್ ನೀಡಿದ್ದರೂ ಸಹಾ ನೌಕರ ನಾಗರಾಜು ದಾಖಲಾತಿ ಹಾಜರು ಪಡಿಸಿಲ್ಲ, ಈ ಹಿನ್ನೆಲೆ ಉಪನಿರ್ದೇಶಕರು ಏಕ ಪಕ್ಷೀಯವಾಗಿ ಏಕೆ ತೀರ್ಮಾನ ಕೈಗೊಳ್ಳಬಾರದೆಂದು ಅಂತಿಮವಾಗಿ ಮತ್ತೊಂದು ನೋಟಿಸ್‌ನಲ್ಲೂ ಉಲ್ಲೇಖಿಸಿದ್ದರೂ ನೌಕರ ಉತ್ತರ ನೀಡಿಲ್ಲ ಎಂದ ಹೇಳಲಾಗಿದೆ.

ಕೋಟ್.........

ಜಿಲ್ಲಾಧಿಕಾರಿಗಳಿಂದ ನೌಕರ ನಾಗರಾಜುಗೆ ಸಂಬಂಧಿಸಿದಂತೆ ತನಿಖೆ ನಡೆಸುವ ಕುರಿತ ಪತ್ರ ಕಚೇರಿಗೆ ತಲುಪಿರಬಹುದು, ಕೆಲಸದ ನಿಮಿತ್ತ ನಾನು ವೀಕ್ಷಿಸಿಲ್ಲ, ಅದನ್ನು ಕೂಡಲೆ ಪರಿಶೀಲಿಸಿ ಪ್ರಮಾಣಿಕ ವರದಿ ನೀಡುವೆ. ಶಾಲಾ ದಾಖಲಾತಿಯಲ್ಲಿ ನಮೂದನೆಯಾದ ಜಾತಿಯನ್ನೆ ಕಂದಾಯ ಇಲಾಖೆಯ ನೌಕರರು ನಮೂದಿಸಿ ವರದಿ ನೀಡಬೇಕು, ಅದನ್ನ ಮರೆಮಾಚಿ ತಪ್ಪು ವರದಿ ನೀಡಿದ್ದರೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು

- ಮಹೇಶ್, ಉಪವಿಭಾಗಾಧಿಕಾರಿ, ಕೊಳ್ಳೇಗಾಲ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!