ಕನ್ನಡಪ್ರಭ ವಾರ್ತೆ ಐಗಳಿ
ಮುಖ್ಯಮಂತ್ರಿ ಕೃಪಾ ಪೋಷಿತ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಅನ್ನುವ ಹೆಸರಿನ ಕಲಾವಿದರಿಂದ ಕೂಡಿಕೊಂಡಂತಹ ಬಸವ ಸಂಸ್ಕೃತಿ ಅನ್ನುವ ನಾಟಕವನ್ನು ತೆಗೆದುಕೊಂಡು ಇಡೀ ಕರ್ನಾಟಕ ರಾಜ್ಯದ ತುಂಬಾ ತಿರುಗಾಡಿದ್ದು, ಇದು ಸನಾತನ ಸಂಸ್ಕೃತಿ ನಾಶ ಮಾಡುವಂತಹ ಹುನ್ನಾರವಾಗಿದೆ ಎಂದು ಕನ್ನೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳು ಖಾರವಾಗಿ ನುಡಿದರು.ಸಮೀಪದ ಬೀಳೂರ ಗ್ರಾಮದಲ್ಲಿ ಶನಿವಾರ ನಡೆದ ಗುರುಬಸವ ವಿರಕ್ತಮಠದ ಗುರುಚೆನ್ನಬಸವ ಸ್ವಾಮೀಜಿಗಳ 44 ದಿನಗಳ ಮೌನಾನುಷ್ಠಾನ ಮುಕ್ತಾಯ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಒಂದು ಸನ್ಯಾಸಿಗಳ ಗ್ಯಾಂಗ್ ರಾಜ್ಯ ಸುತ್ತುತ್ತಿದೆ ಮತ್ತು ದೇವಸ್ಥಾನಕ್ಕೆ ಹೋಗಬೇಡಿ, ಮೂರ್ತಿಗಳನ್ನು ಕಟ್ಟಿ ಹೊಳೆಗೆಸಿಯಿರಿ ಎಂದು ಪ್ರಚಾರ ಮಾಡುತ್ತಿದೆ. ತೋರಿಕೆಯ ಸನ್ಯಾಸಿಗಳಿಂದ ಧರ್ಮಕ್ಕೆ, ದೇಶಕ್ಕೆ ಅಪಾಯ. ಹಗಲು ಅಭಿಷೇಕ ಕುಡಿಯುವ ನಾಟಕ, ರಾತ್ರಿ ಸರಾಯಿ ಕುಡಿಯುವ, ಸಮಾಜ ಹಾಳುಮಾಡುವ ಸನ್ಯಾಸಿಯನ್ನು ಕಂಬಕ್ಕೆ ಕಟ್ಟಿ ಹೊಡೆಯಿರಿ. ಸ್ವಾಮಿ ಅಂದರೆ ಕೇವಲ ಪೂಜೆ ಮಾಡಿಸಿಕೊಂಡು ರಾಜವೈಭೋಗಜೀವನ ನಡೆಸುವುದಲ್ಲ ಅನ್ನುವ ಅರಿವು ಮಠಾದೀಶರಿಗೆ ಗೊತ್ತುಮಾಡಬೇಕಿದೆ. ದೇಶದಲ್ಲಿ ಕೆಲವರು ಸನ್ಯಾಸದ ಪಾವಿತ್ರ್ಯತೆ ಹಾಳು ಮಾಡುತ್ತಿದ್ದು, ಧರ್ಮದ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿರುವ ಇಂತಹವರನ್ನು ಜನರೇ ಹಿಡಿದು ಶಿಕ್ಷಿಸಬೇಕು ಎಂದು ಕಿಡಿಕಾರಿದರು.ಬೀಳೂರು ಗ್ರಾಮದಲ್ಲಿ ನಿಮ್ಮ ಭಕ್ತಿ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳದ ಮಠಾಧೀಶರು ನಿಮಗೆ ದೊರೆತಿರುವುದು ನಿಮ್ಮ ಪುಣ್ಯ. ಯಾವುದೇ ಒಂದು ಉದ್ದೇಶ ಇಟ್ಟುಕೊಂಡು ಮತ್ತೆ ಮತ್ತೆ ಮಾಡುವುದಕ್ಕೆ ಅನುಷ್ಠಾನ ಅನ್ನುತ್ತಾರೆ. ಅನುಷ್ಠಾನಕ್ಕೆ ಇಡೀ ನಾಡನ್ನೆಲ್ಲ ಬಗ್ಗಿಸುವಂತಹ ಸಾಮರ್ಥ್ಯ ಇದೆ. ಅನುಷ್ಠಾನವು ಶರೀರ ಮತ್ತು ಮನಸ್ಸು ಎಲ್ಲವನ್ನು ಶುದ್ಧಗೊಳಿಸುತ್ತದೆ. ಪಂಚೇಂದ್ರಿಯಗಳು ಭಕ್ತಿಯ ಶಕ್ತಿಯನ್ನು ಹೆಚ್ಚಿಸುತ್ತವೆ. ಪರಿಶ್ರಮ ಪಟ್ಟರೆ ಮಾತ್ರ ಭೂತಾಯಿ ಒಲಿಯುತ್ತಾಳೆ. ರಾಷ್ಟ್ರಧರ್ಮವೇ ಮುಖ್ಯ. ಜಾತಿ ರಾಜಕಾರಣಕ್ಕೆ ಗಡಿ ಹಾಕಿ. ಯಾರೂ ಆತ್ಮವಂಚನೆ ಮಾಡಿಕೊಳ್ಳಬೇಡಿ, ಇನ್ನೊಬ್ಬರಿಗೂ ವಂಚನೆ ಮಾಡಬೇಡಿ. ಜಾತಿ ಮತ ದೂರವಿಡಿ. ದೇಶ ಧರ್ಮ ಅಂತಾ ಬಂದಾಗ ಒಂದುಗೂಡಿ ಎದ್ದು ನಿಲ್ಲಿ. ಎಲೆಕ್ಷನ್‌ಗಳಲ್ಲಿ ಮಾತ್ರ ರಾಜಕಾರಣ ಮಾಡಿ, ಮುಗಿದ ತಕ್ಷಣ ಒಂದಾಗಿ ಬಾಳಿ ಎಂದು ಕರೆ ನೀಡುವ ಮೂಲಕ ಜಾತಿ ಮತ್ತು ರಾಜಕಾರಣವನ್ನು ದೇಶ ಧರ್ಮಕ್ಕಿಂತ ಮಿಗಿಲಾಗಿ ಕಾಣಬಾರದು ಎಂದು ಒತ್ತಿ ಹೇಳಿದರು.
ಬೀಳೂರು ಗುರುಬಸವ ವಿರಕ್ತ ಮಠದ ಗುರುಚೆನ್ನಬಸವ ಸ್ವಾಮೀಜಿ ಮಾತನಾಡಿ, ಭಾರತೀಯರಾದ ನಾವು ಭವ್ಯ ಪರಂಪರೆ ಮತ್ತು ಶ್ರೇಷ್ಠ ವಚನಗಳ ವಾರಸ್ದಾರರು. ಕೇವಲ ಅಜ್ಜ-ಅಪ್ಪ ಗಳಿಸಿದ ಆಸ್ತಿಗೆ ಮಾತ್ರ ನಾವು ವಾರಸ್ದಾರರು ಎಂಬ ಭಾವನೆ ತಪ್ಪು. ಕಳಬೇಡ, ಕೊಲಬೇಡ, ಇವನಾರವ ಎನ್ನಬೇಡ ಎಂಬಂತಹ ಶ್ರೇಷ್ಠ ವಚನಗಳ ಜೊತೆಗೆ ನಮ್ಮ ದೇಶದ ಋಷಿ-ಸಂತರ ಜ್ಞಾನ ಸಂಪತ್ತು ನಮ್ಮೆಲ್ಲರ ಆಸ್ತಿ. ನಾವು ಹಗಲು ರಾತ್ರಿ ಅನ್ನದೆ ಈ ಪರಂಪರೆಯನ್ನು ಗಟ್ಟಿಗೊಳಿಸಿ, ನಾವು ಜನ್ಮ ಪಡೆದ ಈ ಭೂಮಿ ಮತ್ತು ಅದರ ಸಂಸ್ಕೃತಿ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ಏಕೆಂದರೆ, ಸಂತರ ಜೀವನ ಸಂತನಿಗಲ್ಲ, ಲೋಕದ ಹಿತಕ್ಕಾಗಿ ಮೀಸಲಾಗಿರುತ್ತದೆ. ಸಿದ್ದೇಶ್ವರ ಶ್ರೀಗಳ ಅಪಾರ ಜ್ಞಾನ ಸಂಪತ್ತನ್ನು ವರ್ಣಿಸಲು ಸರಸ್ವತಿಯಿಂದಲೂ ಸಾಧ್ಯವಿಲ್ಲ ಎಂದು ನುಡಿದರು.ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಸದಲಗಾದ ಡಾ.ಶ್ರದ್ಧಾನಂದ ಸ್ವಾಮೀಜಿ, ಕಾಗವಾಡದ ಯತಿಶ್ವರಾನಂದ ಸ್ವಾಮೀಜಿ, ಕಕಮರಿಯ ಆತ್ಮಾರಾಮ ಶ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಗಣ್ಯರು ಇದ್ದರು.
ಮಠಗಳಿಗೆ ಯೋಗ್ಯ ಹೊಸ ಸನ್ಯಾಸಿಗಳು ಸಿಗುವುದು ಬಹಳ ಕಷ್ಟವಾಗಿದೆ. ಮಠಾಧೀಶನೆಂದರೆ ದೇಶ, ಧರ್ಮ, ಸಮಾಜದ ಒಳತಿಗಿ ತನ್ನ ಇಡಿ ಜೀವನವನ್ನು ಮೀಸಲಿಡಬೇಕು. ಇಡೀ ದೇಶದಲ್ಲಿ ನಾವು ನೋಡುತ್ತಿದ್ದೇವೆ ಸನ್ಯಾಸಿಗಳು ಹೊರಗೆ ಚಂದ ಕಾಣುತ್ತಾರೆ. ಒಳಗೆ ಹೊಲಸು ನಾರುತ್ತಿದ್ದಾರೆ. ಕೇವಲ ತೋರಿಕೆಯ ಸನ್ಯಾಸಿಗಳೇ ಹೆಚ್ಚಿದ್ದಾರೆ. ಮುಠಾಧೀಶರನ್ನು ಜನರು ದೇವರ ಪ್ರತಿನಿಧಿ ಎಂದು ನಂಬಿ, ಅವರ ಪಾದ ತೊಳಿದು ಕುಡಿಯುವಷ್ಟು ಭಕ್ತಿ ಇಟ್ಟಿದ್ದಾರೆ. ಆಶ್ಚರ್ಯವೆಂದರೆ, ರಾತ್ರಿ ಹೊತ್ತು ಸಾರಾಯಿ ಕುಡಿಯುವ ಸ್ವಾಮೀಜಿಗಳನ್ನು ಸನ್ಯಾಸಿ ಅಂತ ಹೇಗೆ ಕರೆಯುವುದು ಇಂತಹವರು ಜನರ ನಂಬಿಕೆಗೆ ದ್ರೋಹ ಮಾಡುತ್ತಿದ್ದಾರೆ.- ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಕನ್ನೇರಿ ಮಠ