ಕನ್ನಡಪ್ರಭ ವಾರ್ತೆ ಹರಿಹರ
ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವರು, ಅವರೊಟ್ಟಿಗೆ ಸೇರಿರುವ ಸರ್ಕಾರದ ವಿರುದ್ಧ ಆ.22ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹೇಳಿದರು.ನಗರದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ರಸ್ತೆಯಲ್ಲಿ ಇರುವ ನೀರಾವರಿ ಇಲಾಖೆ ಆವರಣದಿಂದ ಆ.22ರಂದು ಬೆಳಗ್ಗೆ 11ರಿಂದ ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಉದ್ಘೋಷದೊಂದಿಗೆ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಲಾಗುವುದು ಎಂದರು.
ಈ ಪ್ರತಿಭಟನೆ ಯಾವುದೇ ಪಕ್ಷ, ಸಂಘಟನೆ, ಜಾತಿಗಳಿಗೆ ಸೀಮಿತವಾಗಿಲ್ಲ. ಪಕ್ಷ, ಜಾತಿಗಳ ಮೀರಿ ಧರ್ಮಸ್ಥಳದ ಯೋಜನೆಗಳ ಅನುಕೂಲ ಪಡೆದವರು, ಧರ್ಮಸ್ಥಳ ಕ್ಷೇತ್ರದ ಬಗ್ಗೆ ನಂಬಿಕೆ ಇರುವವರು ತಪ್ಪದೇ ಮೆರವಣಿಗೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.ಸತ್ಯಾಸತ್ಯತೆ ಜನತೆಗೆ ತಿಳಿಸಿ:
ದೇಶದ ಹಿಂದೂ ಜನರ ಪವಿತ್ರ ಸ್ಥಳವಾದ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಮಹೇಶ ತಿಮರೋಡಿ, ಗಿರೀಶ ಮಟ್ಟಣ್ಣನವರ್, ಸಮೀರ್ ಎಂಬವರು ಒಳಸಂಚು ರೂಪಿಸಿದ್ದಾರೆ. ನಿರಂತರ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಇದರಲ್ಲಿ ಮಾಸ್ಕ್ ಮ್ಯಾನ್ ಕೂಡ ಸೇರಿದ್ದು, ಕೂಡಲೇ ಅವರನ್ನೆಲ್ಲ ವಶಕ್ಕೆ ಪಡೆದು, ಯಾರ ಕೈವಾಡ ಇದೆ ಎಂಬ ಸತ್ಯಾಸತ್ಯತೆ ನಾಡಿನ ಜನತೆಗೆ ತಿಳಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಿರಿಗೆರೆ ಎಂ.ಜಿ. ಪರಮೇಶ್ವರಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ವಾಮದೇವಪ್ಪ, ರಮೇಶ್ ಮಾನೆ, ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಚಂದಾಪೂರ್, ವಿಶ್ವಬಂಧು ಬ್ಯಾಂಕ್ ಅಧ್ಯಕ್ಷ ನಾಗರಾಜ್ ಅಮರಾವತಿ ಇತರರು ಭಾಗವಹಿಸಿದ್ದರು.
- - --17ಎಚ್ ಆರ್ ಆರ್ 01:
ಹರಿಹರದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿದರು.