ಸಮೀಕ್ಷೆಯಿಂದ ಹೊರಗುಳಿಯುವ ಭೀತಿಯಲ್ಲಿ ಹಿಂದುಳಿದ ಕುಟುಂಬಗಳು

KannadaprabhaNewsNetwork |  
Published : Oct 11, 2025, 12:03 AM IST
ನವಲಗುಂದ ಪುರಸಭೆ ವ್ಯಾಪ್ತಿಯ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆದಾರರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಾಧಿಕಾರಿ ಎಸ್.ಪಿ. ಪೂಜಾರ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯ ಹಿಂದುಳಿದ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಿಂದ ನವಲಗುಂದ ತಾಲೂಕಿನ ಹಿಂದುಳಿದ ಕುಟುಂಬಗಳು ತಪ್ಪಿಹೋಗುವ ಆತಂಕ ಎದುರಾಗಿದೆ. ಯುಎಚ್‌ಐಡಿ ಅಳವಡಿಸಿರುವ ಮನೆಯ ಒಂದು ಕುಟುಂಬದ ಸಮೀಕ್ಷೆ ಮಾತ್ರ ಮಾಡಲಾಗಿದೆ.

ಫಕೃದ್ದೀನ್ ಎಂ.ಎನ್.

ನವಲಗುಂದ: ರಾಜ್ಯ ಹಿಂದುಳಿದ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯು ಭರದಿಂದ ನಡೆದಿದ್ದು, ಒಂದು ವಾರದಲ್ಲಿ ಸಂಪೂರ್ಣ ಸಮೀಕ್ಷೆ ಪೂರ್ಣಗೊಳಿಸಲಾಗುವುದು ಎಂದು ತಹಸೀಲ್ದಾರ್‌ ಕಾರ್ಯಾಲಯ ಮಾಹಿತಿ ನೀಡಿದೆ.

ಆಹಾರ ಇಲಾಖೆಯ ಪಡಿತರ ಚೀಟಿ ಅಂಕಿ-ಸಂಖ್ಯೆಗಳನ್ವಯ ತಾಲೂಕಿನಾದ್ಯಂತ ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ 31,274 ಕುಟುಂಬಗಳಿವೆ. ಅದರ ಅಂದಾಜಿನಂತೆ ಶೈಕ್ಷಣಿಕ ಹಾಗೂ ಆರ್ಥಿಕ ಗಣತಿ ನಡೆಸಿದಲ್ಲಿ ಇನ್ನೂ ಎರಡು ಸಾವಿರಕ್ಕೂ ಹೆಚ್ಚು ಕುಟುಂಬಗಳು ಸಮೀಕ್ಷೆಗೆ ಒಳಪಡಬೇಕಾಗಿದೆ. ಆದರೆ, ಈಗ ಹೆಸ್ಕಾಂ ಅಳವಡಿಸಿರುವ ಯುಎಚ್‌ಐಡಿ ಆಧಾರದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಒಂದೇ ಯುಎಚ್‍ಐಡಿ ನಂಬರಿನಲ್ಲಿ ಕೆಲವೆಡೆ ಮೂರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಹಲವೆಡೆ ಗಣತಿದಾರರು ಒಂದೇ ಯುಎಚ್‍ಐಡಿ ನಂಬರಿನಡಿ ಒಂದು ಕುಟುಂಬದ ಸಮೀಕ್ಷೆ ನಡೆಸಿ, ಉಳಿದೆರಡು ಕುಟುಂಬಗಳನ್ನು ಸಮೀಕ್ಷೆಯಿಂದ ಕೈಬಿಟ್ಟ ಪ್ರಕರಣಗಳು ನಡೆಯುತ್ತಿವೆ. ಅದರಲ್ಲೂ ಹಿಂದುಳಿದ ವರ್ಗಗಳ ಕುಟುಂಬಗಳೇ ಹೆಚ್ಚಾಗಿ ಸಮೀಕ್ಷೆಯಿಂದ ಹೊರಗುಳಿಯುವ ಭೀತಿಯಲ್ಲಿವೆ ಎಂದು ಹೇಳಲಾಗುತ್ತಿದೆ.

ಸಮೀಕ್ಷೆ ಸಂದರ್ಭದಲ್ಲಿ ಮನೆಗಳನ್ನು ಗುರುತಿಸಲು ಹೆಸ್ಕಾಂ ವತಿಯಿಂದ ಯುಎಚ್‍ಐಡಿ ಸ್ಟಿಕರ್‌ ಅಂಟಿಸಲಾಗಿದೆ. ಅದರನ್ವಯ ಗಣತಿದಾರರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಯುಎಚ್‌ಐಡಿ ಇಲ್ಲದ ಕುಟುಂಬಗಳನ್ನು ನೊ-ಯುಎಚ್‌ಐಡಿ ಎಂದು ಗುರುತಿಸಿ ಗಣತಿ ಮಾಡಲಾಗುತ್ತಿದೆ. ಸರ್ಕಾರ ಇದುವರೆಗೆ 26,400 ಕುಟುಂಬಗಳನ್ನು ಗುರುತಿಸಿ ಸಮೀಕ್ಷೆದಾರರಿಗೆ ಗಣತಿ ಮಾಡಲು ಸೂಚನೆ ನೀಡಿದೆ. ಸಮೀಕ್ಷೆದಾರರು ಈಗಾಗಲೇ ಯುಎಚ್‍ಐಡಿ ಇಲ್ಲದ ಕುಟುಂಬಗಳನ್ನು ಸೇರಿಸಿ ಒಟ್ಟು 28,519 ಕುಟುಂಬಗಳ ಸಮೀಕ್ಷೆ ಪೂರೈಸಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಇನ್ನೂ ಶೇ. 10ರಷ್ಟು ಸಮೀಕ್ಷೆ ಬಾಕಿ ಇರುವುದಾಗಿ ತಿಳಿದು ಬಂದಿದೆ. ಪಡಿತರ ಚೀಟಿ ಹೊಂದಿರದ ಹಾಗೂ ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರ ಸಂಖ್ಯೆಗಳನ್ನು ಸಮೀಕ್ಷೆ ಸಂದರ್ಭದಲ್ಲಿ ಹೇಗೆ ಗುರುತಿಸುತ್ತಾರೆ ಎಂಬುದು ಪಡಿತರ ಚೀಟಿ ಹೊಂದಿರದ ನಾಗರಿಕರ ಅಳಲಾಗಿದೆ.

ಯುಎಚ್‍ಐಡಿ ನಂಬರಿನಡಿ ಒಂದೇ ಕುಟುಂಬದಲ್ಲಿ ಮೂರು ಕುಟುಂಬಗಳಿದ್ದರೂ ಕೇವಲ ಒಂದೇ ಕುಟುಂಬವನ್ನು ಮಾತ್ರ ಗಣತಿದಾರರು ಕೆಲವೆಡೆ ಗಣತಿ ಮಾಡಿದ್ದು ಇನ್ನುಳಿದ ಎರಡು ಕುಟುಂಬಗಳ ಗಣತಿಗೆ ಮತ್ತೆ ಬರುತ್ತೇವೆಂಬ ಆಶ್ವಾಸನೆ ಮಾತ್ರ ಗಣತಿದಾರರಿಂದ ದೊರೆತಿದ್ದು, ವಾರವಾದರೂ ಇನ್ನೂ ಗಣತಿ ಮಾಡಿಲ್ಲವೇಕೆ ಎಂಬ ಸಂಶಯವು ಹಲವರಲ್ಲಿ ಮೂಡಿದೆ.

ಒಂದೇ ಯುಎಚ್‍ಐಡಿ ನಂಬರಿನಲ್ಲಿರುವ ಎಲ್ಲ ಕುಟುಂಬಗಳನ್ನು ಗಣತಿಗೆ ಪರಿಗಣಿಸಲಾಗುವುದು. ಒಂದು ವೇಳೆ ಬಿಟ್ಟು ಹೋದಲ್ಲಿ ಆ ಕುಟುಂಬಗಳನ್ನು ನೋ ಯುಎಚ್‍ಐಡಿ ಎಂದು ಪರಿಗಣಿಸಿ ಪುನಃ ಗಣತಿ ಮಾಡುವಂತೆ ಸಮೀಕ್ಷೆದಾರರಿಗೆ ಸೂಚಿಸಲಾಗುವುದು ಎಂದು ನವಲಗುಂದ ತಹಸೀಲ್ದಾರ್ ಸುಧೀರ ಸಾಹುಕಾರ ಹೇಳಿದರು.

ನಮ್ಮ ಮನೆಗೆ ಒಂದೇ ವಿದ್ಯುತ್ ಮೀಟರ್ ಇದ್ದು ಒಂದೇ ಯುಎಚ್‍ಐಡಿ ನಂಬರ್ ನೀಡಲಾಗಿದೆ. ನಮ್ಮ ಮನೆಯಲ್ಲಿ ಒಟ್ಟು ನಾಲ್ಕು ಕುಟುಂಬಗಳು ಬೇರೆ, ಬೇರೆ ವಾಸವಿದ್ದೇವೆ. ಇದುವರೆಗೂ ಯಾವ ಗಣತಿದಾರರು ನಮ್ಮ ಮನೆಗೆ ಬಂದಿಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಾಗಿಲ್ಲ ಎಂದು ಪುರಸಭೆ ಮಾಜಿ ಸದಸ್ಯ ಫಕ್ಕೀರೇಶ ಹೂಗಾರ ಹೇಳಿದರು.

ಜಾತಿ ಗಣತಿ ದಿನದಿಂದ ದಿನಕ್ಕೆ ಗೊಂದಲಮಯವಾಗುತ್ತಿದೆ. ಹಿಂದುಳಿದ ವರ್ಗಗಳ ಆಯೋಗ ಪೂರ್ವ ತಯಾರಿ ಇಲ್ಲದೇ ಯಾರದೋ ಒತ್ತಡಕ್ಕೆ ಮಣಿದು ಆತುರಾತುರವಾಗಿ ಸಮೀಕ್ಷೆ ಮಾಡುತ್ತಿದೆ. ಈ ಸಮೀಕ್ಷೆಯಿಂದ ಹಿಂದುಳಿದ ವರ್ಗಗಳ ಕುಟುಂಬಗಳನ್ನು ಟಾರ್ಗೆಟ್ ಮಾಡಿ ಹೊರಗಿಡಲಾಗುತ್ತಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ