ಬಳ್ಳಾರಿ: ಜನಸ್ನೇಹಿ ಆಡಳಿತ, ಪ್ರಕರಣ ವಿಲೇವಾರಿ ಹಾಗೂ ಸ್ಥಳೀಯ ಸೌಕರ್ಯಗಳ ಪರಿಗಣಿಸಿ ಕೇಂದ್ರ ಗೃಹ ಇಲಾಖೆ ಗುರುತಿಸಿದ ರಾಜ್ಯದ ಮೂರು ಠಾಣೆಗಳ ಪೈಕಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಪೊಲೀಸ್ ಠಾಣೆಯೂ ಒಂದಾಗಿದೆ.
ಅತ್ಯುತ್ತಮ ಠಾಣೆ ಪಟ್ಟಿಗೆ ಆಯ್ಕೆ ಸಂಬಂಧ ಕೇಂದ್ರ ಗೃಹ ವ್ಯವಹಾರಗಳ ತಂಡದ ಮೌಲ್ಯಮಾಪನಾಧಿಕಾರಿಗಳು ಸಿರಿಗೇರಿ ಠಾಣೆಗೆ ಭೇಟಿ ನೀಡಿ, ಪರಿಶೀಲಿಸಿದರು. ಠಾಣೆಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಜನರ ಜತೆಗಿನ ವರ್ತನೆ, ವಿವಿಧ ಪ್ರಕರಣಗಳ ವಿಲೇವಾರಿಗೆ ಸಂಬಂಧಿಸಿದಂತೆ ಅನುಸರಿಸುವ ಕ್ರಮಗಳು ಸೇರಿದಂತೆ ಪ್ರಶಸ್ತಿಗಿರುವ ವಿವಿಧ ಮಾನದಂಡಗಳನ್ವಯ ಠಾಣೆ ಕಾರ್ಯ ನಿರ್ವಹಿಸುತ್ತಿದ್ದಂತೆಯೇ ಎಂಬುದನ್ನು ಅಧಿಕಾರಿಗಳ ತಂಡ ಪರಿಶೀಲಿಸಿ, ಮಾಹಿತಿಯನ್ನು ದಾಖಲಿಸಿಕೊಂಡರು.
ಗಮನ ಸೆಳೆವ ಸಿರಿಗೇರಿ ಠಾಣೆ:ಸಿರಿಗೇರಿ ಪೊಲೀಸ್ ಠಾಣೆ ಸೌಲಭ್ಯಗಳ ದೃಷ್ಟಿಯಿಂದ ಜನಾಕರ್ಷಣೀಯ ಕೇಂದ್ರವಾಗಿ ಬದಲಾಗಿದೆ. ವಾಹನ ಚಾಲನೆ ವೇಳೆ ಮೊಬೈಲ್ ಬಳಕೆಯಿಂದಾಗುವ ಅಪಾಯ, ಮದ್ಯಪಾನದಿಂದಾಗುವ ಅನಾಹುತಗಳು, ಹೆಲ್ಮೆಟ್ ಜಾಗೃತಿ, ಬಾಲ್ಯವಿವಾಹ ತಡೆ, ಸೈಬರ್ ವಂಚನೆ, ಮಕ್ಕಳ ಸಹಾಯವಾಣಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಸೇರಿದಂತೆ ಜನರಲ್ಲಿ ಜಾಗೃತಿ ಮೂಡಿಸಲು ಠಾಣೆಯ ಕಂಪೌಂಡ್ ಮೇಲೆ ಬರೆದಿರುವ ಚಿತ್ರಸಹಿತ ಬರಹಗಳು ಗಮನ ಸೆಳೆಯುತ್ತಿವೆ.
ಇದೇ ವೇಳೆ ಭೌತಿಕ ಪರಿಶೀಲನೆ ಜೊತೆಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದರು. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ತಂಡದ ಮೌಲ್ಯಮಾಪನಾಧಿಕಾರಿ ಸೈಯದ್ ಮಹ್ಮದ್ ಹಸನ್, ಕೇಂದ್ರ ಗೃಹ ಸಚಿವಾಲಯವು ದೇಶಾದ್ಯಂತ 15 ಸಾವಿರ ಠಾಣೆಗಳ ಪೈಕಿ 100 ಉತ್ತಮ ಠಾಣೆಗಳನ್ನು ಆಯ್ಕೆ ಮಾಡಲಿದೆ. ಈ ಪೈಕಿ ರಾಜ್ಯದ ಮೂರು ಠಾಣೆಗಳನ್ನು ಗುರುತಿಸಲಾಗಿದ್ದು ಈ ಪೈಕಿ ಬಳ್ಳಾರಿ ಜಿಲ್ಲೆಯ ಸಿರಿಗೇರಿ ಠಾಣೆ ಸಹ ಸೇರಿದೆ ಎಂದು ತಿಳಿಸಿದರು.