ವಿಚಾರ ಸಂಕಿರಣದ ಎರಡನೇ ದಿನದ ಗೋಷ್ಠಿ
ಸಾಹಿತ್ಯಕ್ಕೆ ಗೊತ್ತಿರುವುದು ಜೀವಕಾರುಣ್ಯ. ಇದು ಸಾಹಿತ್ಯದ ಧಾತುವು ಹೌದು. ನವೋದಯ ಕಾಲಘಟ್ಟದಲ್ಲಿ ಹೊಸ ಆವಿಷ್ಕಾರಗಳಾದವು. ಸೃಜನಶೀಲ ಮನಸ್ಸುಗಳು ಜೀವಕಾರುಣ್ಯವನ್ನು ನೀಡುತ್ತದೆ ಎಂದು ಹಂಪಿ ಕನ್ನಡ ವಿವಿಯ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ ಅಭಿಪ್ರಾಯಪಟ್ಟರು.
ಪಟ್ಟಣದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಎಸ್.ಡಿ.ಎಂ. ಕಾಲೇಜಿನ ಆರ್.ಎಸ್. ಹೆಗಡೆ ಸಭಾಭವನದಲ್ಲಿ ನಡೆದ ಜೀವ ಕಾರುಣ್ಯ ಪರಂಪರೆ ಮತ್ತು ವಿ.ಸೀತಾರಾಮಯ್ಯ ಎಂಬ ವಿಚಾರ ಸಂಕಿರಣದ ಎರಡನೇ ದಿನದ ಗೋಷ್ಠಿಯಲ್ಲಿ ಮಾತನಾಡಿದರು.ವಿ.ಸೀತಾರಾಮಯ್ಯನವರ ಬರಹಗಳು ವಾಸ್ತವ ಮತ್ತು ನಿಲುವುಗಳನ್ನು ತೋರಿಸುತ್ತದೆ. ಸಾಹಿತ್ಯಕ್ಕೆ ಒಂದು ಐಡಿಯಾಲಜಿ ಇರಬೇಕು. ವಿ.ಸೀ.ಅವರು ಬದುಕನ್ನು ವಿಸ್ತಾರವಾಗಿ ನೋಡಿದರು. ಧರ್ಮವನ್ನು ಧರ್ಮವನ್ನಾಗಿಸುವುದು ದಯೆ ಎಂದು ಸಾರಿದರು ಎನ್ನುತ್ತಾ ವಿ.ಸೀ.ಕಂಡ ಸಮಾಜದ ಆಶಯವನ್ನು ಅರ್ಥವತ್ತಾಗಿ ಕಟ್ಟಿಕೊಟ್ಟರು.
ಬೆಂಗಳೂರಿನ ಎನ್.ಎಂ.ಕೆ.ಆರ್.ವಿ. ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಶ್ರೀಮತಿ ವೀಣಾದೇವಿ ವಿ.ಸೀ. ಚಿತ್ರಿಸಿದ ವ್ಯಕ್ತಿಗಳು ಮತ್ತು ವ್ಯಕ್ತಿತ್ವ ಕುರಿತಾಗಿ ತಮ್ಮ ಅಭಿಪ್ರಾಯ ಮಂಡಿಸಿದರು. ಬೆಂಗಳೂರಿನ ಎನ್.ಎಂ.ಕೆ.ಆರ್.ವಿ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸಂಧ್ಯಾ ಹೆಗಡೆ ಯುಗಧರ್ಮ ಮತ್ತು ವಿ.ಸೀ.ಅವರ ಸಾಹಿತ್ಯ ಅನ್ನುವ ವಿಷಯ ಮಂಡಿಸಿದರು.
ಗೋಷ್ಠಿಯ ನಂತರ ಕನ್ನಡ ಕಾವ್ಯ ಗಾಯನ ಕಾರ್ಯಕ್ರಮ ನಾಡಿನ ಖ್ಯಾತ ಸಾಹಿತಿಗಳು ಮತ್ತು ಕಲಾವಿದರಿಂದ ನಡೆಯಿತು. ಭಾಗ್ಯಶ್ರೀ ಭಟ್ ಪ್ರಾರ್ಥಿಸಿದರು. ಉಪನ್ಯಾಸಕ ವಿದ್ಯಾಧರ ಕಡತೋಕ ನಿರೂಪಿಸಿದರು.