ಬ್ಯಾಡಗಿ: ಐವರು ಮುಸುಕುಧಾರಿ ಕಳ್ಳರ ಗುಂಪೊಂದು ಮನೆಯೊಂದರಲ್ಲಿ ಕಳ್ಳತನಕ್ಕೆ ಬಂದಿದ್ದಾಗ ಮನೆಯೊಡತಿ ಹಾಗೂ ಅವರ ಕುಟುಂಬದವರು ಧೈರ್ಯದಿಂದ ಕಳ್ಳರನ್ನು ಎದುರಿಸಿ ಒದ್ದು ಓಡಿಸಿದ ಘಟನೆ ಮಂಗಳವಾರ ತಡರಾತ್ರಿ ಸಿನಿಮಯ ರೀತಿಯಲ್ಲಿ ನಡೆದಿದೆ.
ಸ್ಥಳಕ್ಕೆ ಬುಧವಾರ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ.
ಮತ್ತೆ ನಿದ್ದೆಗೆಡೆಸಿದ ಕಳ್ಳರು: ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ಎಲ್ಲೆಂದರಲ್ಲಿ ಮನೆಗಳ್ಳತನ ಪ್ರಕರಣಗಳು ಪಟ್ಟಣದ ಜನರ ನಿದ್ದೆಗೆಡಿಸಿದ್ದವು. ಇದೀಗ ಮತ್ತೊಂದು ಕಳ್ಳತನಕ್ಕೆ ಯತ್ನ ನಡೆದಿರುವುದು ಸಾರ್ವಜನಿಕರನ್ನು ಚಿಂತೆಗೀಡು ಮಾಡಿದೆ. ಕೂಡಲೇ ಕಳ್ಳರ ಸೆರೆ ಹಿಡಿಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಪ್ರಕರಣ ಭೇದಿಸುತ್ತೇವೆ: ಸುತ್ತಮುತ್ತಲ ಪ್ರದೇಶದಲ್ಲಿ ಕಳ್ಳತನ ನಡೆಯದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಪಟ್ಟಣಕ್ಕೆ ಇದೀಗ ಕಳ್ಳರ ಹೊಸ ಗುಂಪೊಂದು ಪ್ರವೇಶ ಪಡೆದಿದ್ದು, ಬಹುತೇಕ ಇವರು ಸ್ಥಳೀಯ ಕಳ್ಳರಾಗಿದ್ದು, ಯಾವುದೇ ಜಿಲ್ಲೆ ಅಥವಾ ರಾಜ್ಯದ ಕಳ್ಳರ ನಂಟು ಇರುವುದಿಲ್ಲ. ಶೀಘ್ರದಲ್ಲೇ ಪ್ರಕರಣ ಭೇದಿಸುತ್ತೇವೆ ಎಂದು ಸಿಪಿಐ ಮಹಾಂತೇಶ ಲಂಬಿ ತಿಳಿಸಿದರು.
125 ಮೆಟ್ರಿಕ್ ಟನ್ ಅಕ್ರಮ ಮರಳು ವಶ
ಗುತ್ತಲ: ಸಮೀಪದ ಹಾವನೂರು ಗ್ರಾಮದಲ್ಲಿ ಅಕ್ರಮ ಮರಳು ಗಣಿಗಾರಿಕೆಯ ಖಚಿತ ಮಾಹಿತಿಯ ಆಧಾರದ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು 4 ಕಬ್ಬಿಣದ ತೆಪ್ಪ ಹಾಗೂ 125 ಮೆಟ್ರಿಕ್ ಟನ್‌ನಷ್ಟು ಮರಳನ್ನು ವಶಕ್ಕೆ ಪಡೆದು ಇಬ್ಬರು ಅಕ್ರಮ ಮರಳು ದಂಧೆಕೋರರ ಮೇಲೆ ದೂರು ದಾಖಲು ಮಾಡಿದ್ದಾರೆ.ತಾಲೂಕಿನ ತುಂಗಭದ್ರಾ ನದಿ ಪಾತ್ರದ ಹಳ್ಳಿಗಳಲ್ಲಿ ಹಾಡಹಗಲೇ ಕಬ್ಬಿಣದ ತೆಪ್ಪಗಳ ಮೂಲಕ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿರುವ ಖಚಿತ ಮಾಹಿತಿಯ ಆಧಾರದ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಅಕ್ರಮ ಮರಳು ಗಣಿಗಾರಿಕೆಗೆ ಬಳಸುವ 4 ತೆಪ್ಪಗಳನ್ನು ಹಾಗೂ ಮರಳನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮ ಮರಳು ತಗೆಯುವ ಕಾರ್ಮಿಕರು ಸ್ಥಳದಿಂದ ಓಡಿ ಹೋಗಿದ್ದಾರೆ ಎಂದು ದಾಳಿಯಲ್ಲಿ ಪಾಲ್ಗೊಂಡಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಶಬ್ಬೀರಅಹ್ಮದ ದಿಡಗೂರ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.ಅಂದಾಜು ₹2.40 ಲಕ್ಷ ಮೌಲ್ಯದ 4 ತೆಪ್ಪ ಹಾಗೂ ಅಂದಾಜು 125 ಮೆಟ್ರಿಕ್ ಟನ್, ಅಂದಾಜು 1 ಲಕ್ಷಕ್ಕೂ ಅಧಿಕ ಮೊತ್ತದ ಮರಳನ್ನು ವಶಪಡಿಸಿಕೊಂಡಿದ್ದಾರೆ. ಗಣಿಗಾರಿಕೆಯ ಪ್ರದೇಶದ ಮಾಹಿತಿಯ ಮೇರೆಗೆ ಹಾವನೂರ ಗ್ರಾಮದ ಸಾದಿಕ್ ಗಾಟೀನ್ ಹಾಗೂ ಭಾಷಾ ಗಾಟೀನ್ ಎಂಬವರ ಮೇಲೆ ದೂರು ದಾಖಲಾಗಿದೆ. ಅಲ್ಲದೇ ಅಕ್ರಮ ನಡೆಸಲು ನದಿ ಪಕ್ಕದಲ್ಲಿ ರಸ್ತೆ ಸಂಪರ್ಕ ನೀಡಿದ ಜಮೀನು ಮಾಲೀಕರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಗಣಿ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದಾರೆ.ದಾಳಿಯಲ್ಲಿ ಗಣಿ ಇಲಾಖೆಯ ಭೂ ವಿಜ್ಞಾನಿ ಅವಿನಾಶ್ ಎಸ್., ಖನಿಜ ರಕ್ಷಣಾ ಪಡೆಯ ಶಿವಪ್ಪ ಸಣ್ಣಬಸಪ್ಪನವರ, ಪಿಎಸ್‌ಐ ಬಸವರಾಜ ಬಿರಾದಾರ, ಗ್ರಾಮ ಲೆಕ್ಕಾಧಿಕಾರಿಗಳಾದ ಪ್ರಶಾಂತ ಲೆಕ್ಕಣ್ಣನವರ ಸೇರಿದಂತೆ ಇತರರಿದ್ದರು. ಈ ಕುರಿತು ಗುತ್ತಲ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.