ಮಾನಕ್ಕೆ ಹೆದರಿ ವಿಷ ಸೇವಿಸಿದ ಕುಟುಂಬಸ್ಥರು

KannadaprabhaNewsNetwork |  
Published : Jun 09, 2024, 01:37 AM IST
*ಖಾಸಗಿ ವೀಡಿಯೋ ಬ್ಲಾಕ್ ಮೇಲ್: ಮಾನಕ್ಕೆ ಹೆದರಿ ವಿಷ ಸೇವಿಸಿದ ಕುಟುಂಬ | Kannada Prabha

ಸಾರಾಂಶ

ಮೊಮ್ಮಗಳ ಖಾಸಗಿ ವೀಡಿಯೋ ಹರಿ ಬಿಡುತ್ತೇನೆಂಬ ಯುವಕನ ಬ್ಲ್ಯಾಕ್ ಮೇಲ್‌ಗೆ ಹೆದರಿದ ಕುಟುಂಬ ವಿಷ ಸೇವಿಸಿದ ಪರಿಣಾಮ ಒಬ್ಬರು ಮೃತಪಟ್ಟ ದಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಹನೂರು

ಮೊಮ್ಮಗಳ ಖಾಸಗಿ ವೀಡಿಯೋ ಹರಿ ಬಿಡುತ್ತೇನೆಂಬ ಯುವಕನ ಬ್ಲ್ಯಾಕ್ ಮೇಲ್‌ಗೆ ಹೆದರಿದ ಕುಟುಂಬ ವಿಷ ಸೇವಿಸಿದ ಪರಿಣಾಮ ಒಬ್ಬರು ಮೃತಪಟ್ಟ ದಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ.

ಹೇಳಿ-ಕೇಳಿ ಇದು ಮೊಬೈಲ್ ಯುಗ. ಅಪ್ರಾಪ್ತೆ ಜೊತೆ ಸಲುಗೆ ಬೆಳೆಸಿ ಆಕೆಯ ಖಾಸಗಿ ಕ್ಷಣ ಸೆರೆ ಹಿಡಿದ ಯುವಕನ ಕಾಮಚೇಷ್ಟೆಗೆ ಇಡೀ ಕುಟುಂಬವೇ ಈಗ ಕಣ್ಣೀರಲ್ಲಿ ಮುಳುಗಿದೆ. ಪಾಪಿಯ ಕೃತ್ಯಕ್ಕೆ ಹೆದರಿ ಪುಣ್ಯಭೂಮಿಯಲ್ಲಿ ಕ್ರಿಮಿನಾಶಕ ಸೇವಿಸಿ ಕುಟುಂಬದ ಮೂವರು ನರಳಾಡುತ್ತಿದ್ದರೇ ಮನೆ ಯಜಮಾನ ಅಸುನೀಗಿದ್ದಾರೆ.

ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಚಂದಗಾಲು ಗ್ರಾಮದ ಮಹಾದೇವನಾಯಕ ಮೃತಪಟ್ಟರೆ, ಇವರ ಪತ್ನಿ ಗೌರಮ್ಮ, ಮಗಳು ಲೀಲಾವತಿ, ಮೊಮ್ಮಗಳು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹದೇವನಾಯಕರ ಮೊಮ್ಮಗಳು ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದು, ಚೀರನಹಳ್ಳಿ ಗ್ರಾಮದ ಲೋಕೇಶ್ ಜೊತೆ ಸ್ನೇಹವಿತ್ತು. ಸ್ನೇಹವನ್ನೇ ಬಂಡವಾಳ ಮಾಡಿಕೊಂಡು ಸಲುಗೆ ಬೆಳೆಸಿಕೊಂಡ ಯುವಕ ಅಪ್ರಾಪ್ತೆಯನ್ನು ಚುಂಚ‌ನಕಟ್ಟೆಗೆ ಕರೆದೊಯ್ದು ಖಾಸಗಿ ವೀಡಿಯೋ ಸೆರೆ ಹಿಡಿದಿದ್ದ. ಬಳಿಕ, ತಾನು ಹೇಳಿದ್ದಿನ್ನು ಕೇಳದಿದ್ದರೇ ವೀಡಿಯೋ ಹರಿ ಬಿಡುವುದಾಗಿ ಹುಡುಗಿ ಮನೆಗೇ ಬಂದು ಹೆದರಿಸಿದ್ದ. ಯುವಕನ ಆಟಾಟೋಪಕ್ಕೆ ಬೇಸತ್ತ ಮಹಾದೇವನಾಯಕ ಕುಟುಂಬ ಕೆ.ಆರ್.‌ ನಗರ ಪೊಲೀಸರಿಗೆ ದೂರು ಕೊಟ್ಟರೂ ಯಾವುದೇ ಕ್ರಮ ವಹಿಸದ ಆರೋಪ ಕೇಳಿಬಂದಿದೆ.

ಪೊಲೀಸರು ಯಾವುದೇ ಕ್ರಮ ವಹಿಸದಿದ್ದದ್ದು, ವೀಡಿಯೋ ಹರಿಬಿಡುವ ಆತಂಕ ಎದುರಾಗಿ ಮಾನಕ್ಕೆ ಹೆದರಿದ ಕುಟುಂಬ ಶುಕ್ರವಾರ ಮಧ್ಯಾಹ್ನವೇ ಮಲೆ ಮಹದೇಶ್ವರ ಬೆಟ್ಟದತ್ತ ಬಂದಿದ್ದಾರೆ‌. ಮಾದಪ್ಪನ ಬೆಟ್ಟದ ತಪ್ಪಲಾದ ತಾಳುಬೆಟ್ಟದಲ್ಲಿ ಕಾಡಿನ‌ ಹಾದಿಯಲ್ಲಿ ನಾಲ್ವರು ಕ್ರಿಮಿನಾಶಕ ಸೇವಿಸಿ, ಮಹಾದೇವನಾಯಕ ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿ ಸಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಉಪ ವಿಭಾಗ ಡಿವೈಎಸ್ಪಿ ಧರ್ಮೇಂದರ್ ಇನ್ಸ್‌ಪೆಕ್ಟರ್ ಜಗದೀಶ್ ಭೇಟಿ ನೀಡಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಆರೋಪ: ಶನಿವಾರ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ನಡೆದಿರುವ ಘಟನೆಗೆ ಕೆ.ಆರ್. ನಗರ ಪೊಲೀಸರೇ ಕಾರಣ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಮೃತ ಮಾದೇವ ನಾಯಕನ ಸಂಬಂಧಿ ಚೆಲುವರಾಜ್ ಆರೋಪಿಸಿದ್ದಾರೆ. ಚೀರನಹಳ್ಳಿ ಗ್ರಾಮದ ಘಟನೆಗೆ ಕಾರಣನಾದ ಲೋಕೇಶ್ ನನ್ನು ಪೊಲೀಸರು ಕ್ರಮ ಕೈಗೊಳ್ಳದೆ ಇರುವುದರಿಂದ ಈ ಘಟನೆಗೆ ಕಾರಣವಾಗಿದೆ ಯುವಕನ ಕಾಮಚೇಷ್ಟಗೆ ಈಗಲಾದರೂ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುತ್ತಾರಾ? ಕಾದು ನೋಡಬೇಕಾಗಿದೆ.

ಕ್ರಮಕ್ಕೆ ಒತ್ತಾಯ: ಮೈಸೂರು ಕೆ.ಆರ್.ನಗರ ಚಂದಗಾಲು ಗ್ರಾಮದ ನಾಲ್ವರು ಮರ್ಯಾದೆಗೆ ಅಂಜಿ ವಿಷ ಸೇವಿಸಿ ಕುಟುಂಬದ ಯಜಮಾನ ಸಾವನ್ನಪ್ಪಿದ್ದಾರೆ. ತಾಯಿ ಮಗಳು ಮೊಮ್ಮಗಳು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹೆಣ್ಣು ಮಗಳ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ವ್ಯಕ್ತಿ ಲೋಕೇಶನನ್ನು ಕೆ ಆರ್ ನಗರ ಹಾಗೂ ಮಲೆ ಮಾದೇಶ್ವರ ಬೆಟ್ಟದ ಪೊಲೀಸರು ಜಂಟಿ ತನಿಖೆ ನಡೆಸಿ ಘಟನೆಗೆ ಕಾರಣರಾದ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರಿಕರು ಕ್ರಮಕ್ಕೆ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ