ಕನ್ನಡಪ್ರಭ ವಾರ್ತೆ ಕೊರಟಗೆರೆ
ಮಾಜಿ ಸಚಿವ ಹಾಗೂ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣನವರು ಸಹಕಾರ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ಮತ್ತೆ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಸರ್ಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್‌ರನ್ನು ಒತ್ತಾಯಿಸಿ ಕೆ.ಎನ್.ಆರ್. ಅಭಿಮಾನಿ ಬಳಗದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.ಕೊರಟಗೆರೆ ಪಟ್ಟಣದ ಪಪಂನಿಂದ ತಾಲೂಕು ಕಚೇರಿಯವರೆಗೆ ನೂರಾರು ಕೆ.ಎನ್.ಆರ್ ಅಭಿಮಾನಿಗಳು ಅವರ ಭಾವ ಚಿತ್ರ ಹಿಡಿದು ಪ್ರತಿಭಟಿಸಿ, ತಹಸೀಲ್ದಾರ್ ಮಂಜುನಾಥ್ ರವರಿಗೆ ಮನವಿ ಸಲ್ಲಿಸಿದರು.
ತುಮಕೂರು ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್ ಮಾತನಾಡಿ, ಕೆ.ಎನ್.ರಾಜಣ್ಣರವರು ಸಹಕಾರ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಅವರು ಎಲ್ಲಾ ವರ್ಗದ ರೈತರು, ಮಹಿಳೆಯರು, ಬೀದಿ ವ್ಯಾಪಾರಿಗಳು, ಶಾಲಾ ಮಕ್ಕಳಿಗೆ ವಿವಿಧ ಯೋಜನೆಗಳಲ್ಲಿ ನೆರವು ನೀಡಿ ಮುನ್ನೆಲೆಗೆ ಬರುವಂತೆ ಮಾಡಿದ ಧೀಮಂತ ನಾಯಕ, ಇಂತಹ ಜನಪರ ಸೇವೆ ಮಾಡುವ ನಾಯಕನನ್ನು ಸಚಿವ ಸಂಪುಟದಿಂದ ತೆಗೆದು ಹಾಕಿರುವುದರ ಹಿಂದೆ ಷಡ್ಯಂತ್ರ ನಡೆದಿದೆ. ಕೂಡಲೇ ಅವರಿಗೆ ಕಾಂಗ್ರೆಸ್ ಸರ್ಕಾರ ಸಹಕಾರ ಸಚಿವ ಸ್ಥಾನ ನೀಡಬೇಕು, ಇಲ್ಲದಿದ್ದರೆ ರಾಜ್ಯದ್ಯಂತ ಉಗ್ರ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು.ಬರಕ ವಿಎಸ್‌ಎಸ್‌ಎನ್ ಅಧ್ಯಕ್ಷ ಗಟ್ಲಹಳ್ಳಿಕುಮಾರ್ ಮಾತನಾಡಿ, ಕೆ.ಎನ್,ರಾಜಣ್ಣನವರು ತುಮಕೂರು ಜಿಲ್ಲಾ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ, ಅವರನ್ನು ಸಚಿವ ಸಂಪುಟದಿಂದ ತೆಗೆದಿರುವದು ನೋವಿನ ಸಂಗತಿ, ಅವರು ಈ ನಾಡು ಕಂಡಂತಹ ಹಿಂದುಳಿದ ವರ್ಗಗಳ ಹಾಗೂ ದೀನ- ದಲಿತರ ನಾಯಕರಾಗಿದ್ದಾರೆ, ಸಹಕಾರ ಕ್ಷೇತ್ರದಲ್ಲಿ ಅವರು ಬಡವರಿಗೆ ಕೊಟ್ಟಂಥ ಸೇವೆ ರಾಜ್ಯದಲ್ಲಿ ಯಾರೂ ಕೊಡಲು ಸಾಧ್ಯವಿಲ್ಲ, ಸತ್ಯವನ್ನು, ನೈಜತೆಯನ್ನು ನೇರವಾಗಿ ಹೇಳುವ ಅವರ ಸ್ವಭಾವವನ್ನು ಹೈಕಮಾಂಡ್ ಗೆ ತಪ್ಪಾಗಿ ಅರ್ಥೈಸಿ ಕೆಲವು ಷಡ್ಯಂತ್ರ ಮಾಡಲಾಗಿದೆ, ತುಮಕೂರು ಜಿಲ್ಲೆಯಲ್ಲಿ ಪ್ರತಿ ಕ್ಷೇತ್ರದಲ್ಲಿ ಕೆ.ಎನ್.ಆರ್.ರವರ ಅಬಿಮಾನಿಗಳ ೧೫ ಸಾವಿರ ಮತಗಳಿವೆ, ಇದನ್ನು ಸರಿಪಡಿಸದಿದ್ದರೆ ಕಾಂಗ್ರೆಸ್ ಪಕ್ಷವು ಬೆಲೆ ತೆರಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ವಿಎಸ್‌ಎಸ್‌ಎನ್ ಅಧ್ಯಕ್ಷರಾದ ವಿನಯ್‌ಕುಮಾರ್, ಕೇಶವಮೂರ್ತಿ, ಮಧುಸೂದನ್, ರಾಜಣ್ಣ, ನಾರಾಯಣ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಶಿವಾನಂದ್, ಮಾಜಿ ಅಧ್ಯಕ್ಷ ಈಶಪ್ರಸಾದ್, ಉಪಾಧ್ಯಕ್ಷ ರಾಘವೇಂದ್ರ, ಯೂನಿಯನ್‌ಬ್ಯಾಂಕ್ ಕಾಂತರಾಜು, ಮುಖಂಡ ಅಳಾಲಸಂದ್ರ ಜಯರಾಮ್, ಗಣೇಶ್, ಟಿ.ಸಿ.ರಾಮಯ್ಯ, ಹೊಳವನಹಳ್ಳಿ ಜಯರಾಮ್ ಅಶ್ವತ್ಥ ನಾರಾಯಣ ರಾಜು, ಶಶಿಕುಮಾರ್, ಹನುಮಂತರಾಯಪ್ಪ, ಚಿನ್ನವೆಂಟಕಶೆಟ್ಟಿ, ವಿಜಯ್‌ಕುಮಾರ್, ಆಟೋಕುಮಾರ್, ಮಂಜುನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.