ಬಂಟ್ವಾಳ: ಕಂದಾಯ ಇಲಾಖೆಯಲ್ಲಿ ಸುದೀರ್ಘ 32 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಗ್ರಾಮ ಆಡಳಿತಾಧಿಕಾರಿ ಗ್ರೆಟ್ಟಾ ಐರಿನ್ ಮಸ್ಕರೇನಸ್ ಅವರಿಗೆ ತಾಲೂಕು ಆಡಳಿತ ಸೌಧದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು
ತಹಸೀಲ್ದಾರ್ ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂದಾಯ ಇಲಾಖೆಯ ಕೆಲಸವು ವಿವಿಧ ಒತ್ತಡ ಹಾಗೂ ಜಂಜಾಟಗಳ ನಡುವೆ ನಿರ್ವಹಿಸಬೇಕಾದ ಜವಾಬ್ದಾರಿಯುತ ಸೇವೆಯಾಗಿದೆ. ನಿವೃತ್ತಿ ಎಂಬುದು ಸರ್ಕಾರಿ ನೌಕರರ ಜೀವನದಲ್ಲಿ ನಿಶ್ಚಿತ ಹಂತವಾದರೂ, ಸೇವಾವಧಿಯಲ್ಲಿ ಸಲ್ಲಿಸಿದ ಜನಸೇವೆ ಸದಾ ನೆನಪಿನಲ್ಲಿ ಉಳಿಯುತ್ತದೆ ಎಂದರು.
ನಿವೃತ್ತಿಯ ಬಳಿಕವೂ ಆಶಾವಾದದೊಂದಿಗೆ ಜೀವನ ಸಾಗಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಹೊಸ ಜೀವನಶೈಲಿಯೊಂದಿಗೆ ನೆಮ್ಮದಿಯಿಂದ ಬದುಕು ಸಾಗಿಸುವಂತಾಗಲಿ ಎಂದು ಶುಭ ಹಾರೈಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಗ್ರೆಟ್ಟಾ ಐರಿನ್ ಮಸ್ಕರೇನಸ್, 32 ವರ್ಷಗಳ ಸೇವಾವಧಿಯಲ್ಲಿ ಎದುರಾದ ಅನುಭವಗಳು ಹಾಗೂ ಜೀವನದ ಏಳುಬೀಳುಗಳನ್ನು ಸ್ಮರಿಸಿದರು. ಸರ್ಕಾರಿ ಕೆಲಸವನ್ನು ಪ್ರೀತಿಯಿಂದ ನಿರ್ವಹಿಸಿ, ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದಾಗ ನಿವೃತ್ತಿಯ ಬಳಿಕ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂಬುದು ನನ್ನ ನಂಬಿಕೆ ಎಂದರು. ಸರ್ಕಾರಿ ನೌಕರರು ಪ್ರಾಮಾಣಿಕತೆ ಹಾಗೂ ಶಿಸ್ತಿನಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.