ಕನ್ನಡಪ್ರಭ ವಾರ್ತೆ ಅಥಣಿ
ಪಂಜಾಬ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದ ಅಗ್ನಿವೀರ ಯೋಧ ಕಿರಣರಾಜ ಕೇದಾರಿ ತೆಲಸಂಗ (23) ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ಗುರುವಾರ ಸಂಜೆ ನೆರವೇರಿತು.ಕಳೆದ ಮಂಗಳವಾರ ಪಂಜಾಬ ಮಿಲಟರಿ ಯೂನಿಟ್‌ದಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಗ್ನಿವೀರ ಯೋಧ ಕಿರಣರಾಜ್ ಹೃದಯಾಘಾತದಿಂದ ನಿಧನ ಹೊಂದಿದ್ದರು. ಮೃತರ ಪಾರ್ಥಿವ ಶರೀರವು ಪಂಜಾಬದಿಂದ ದೆಹಲಿ ವಿಮಾನದ ಮೂಲಕ ಗುರುವಾರ ಬೆಳಗ್ಗೆ ಬೆಳಗಾವಿಗೆ ತರಲಾಯಿತು. ಬೆಳಗಾವಿಯಿಂದ ರಸ್ತೆ ಮೂಲಕ ಸೇನಾ ಆ್ಯಂಬುಲೆನ್ಸ್ ವಾಹನದ ಮೂಲಕ ಅಥಣಿ ಪಟ್ಟಣಕ್ಕೆ ಬರಮಾಡಿಕೊಳ್ಳಲಾಯಿತು.
ತಹಸೀಲ್ದಾರ್ ಸಿದ್ದರಾಯ ಬೋಸಗಿ, ಸಿಪಿಐ ಸಂತೋಷ ಹಳ್ಳೂರ, ತಾಲೂಕು ಪಂಚಾಯತಿ ಅಧಿಕಾರಿ ಶಿವಾನಂದ ಕಲ್ಲಾಪುರ ನೇತೃತ್ವದಲ್ಲಿ ಅನೇಕ ಅಧಿಕಾರಿಗಳು, ಮಾಜಿ ಸೈನಿಕರು, ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು ಅಗಲಿದ ಯೋಧನ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವದಿಂದ ಬರಮಾಡಿಕೊಂಡರು. ಅಥಣಿ ಪಟ್ಟಣದ ಹೊರವಲಯದಲ್ಲಿರುವ ಎಲ್ಲಮ್ಮ ದೇವಿ ದೇವಸ್ಥಾನದಿಂದ ಆರಂಭಗೊಂಡ ಅಂತಿಮ ಯಾತ್ರೆ ಪಟ್ಟಣದ ಶಿವಯೋಗಿ, ಡಾ.ಅಂಬೇಡ್ಕರ್ ವೃತ್ತ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಯೋಧನ ಸ್ವಗ್ರಾಮ ಐಗಳಿಗೆ ಬೀಳ್ಕೊಡಲಾಯಿತು.ಐಗಳಿ ಗ್ರಾಮದಲ್ಲಿ ಅಗ್ನಿವೀರನ ಐತಿಹಾಸಿಕ ಮೆರವಣಿಗೆ:
ಅಗ್ನಿವೀರ ಯೋಧನ ಸಾವಿನ ಸುದ್ದಿಯಿಂದ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ 3 ದಿನಗಳಿಂದ ಶೋಕವುಂಟಾಗಿತ್ತು. ಇಡೀ ಗ್ರಾಮದ ಎಲ್ಲ ವ್ಯಾಪಾರಸ್ಥರು, ವಿವಿಧ ಸಂಘ ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳನ್ನು, ವ್ಯಾಪಾರ ವಹಿವಾಟವನ್ನು ಬಂದ್ ಮಾಡಿ ಯೋಧನ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದರು. ಐಗಳಿ ಗ್ರಾಮದ ಮಹತಪಸ್ವಿ ಅಪ್ಪಯ್ಯ ಸ್ವಾಮಿಗಳ ದೇವಸ್ಥಾನದಿಂದ ಭವ್ಯ ಮೆರವಣಿಗೆಯ ಮೂಲಕ ಯೋಧನ ಪಾರ್ಥಿವ ಶರೀರವನ್ನು ಗ್ರಾಮದಲ್ಲಿ ಬರಮಾಡಿಕೊಳ್ಳಲಾಯಿತು. ಗ್ರಾಮ ಪಂಚಾಯತಿ ಆಡಳಿತ ಹಾಗೂ ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು ಯೋಧನ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಿದರು. ತ್ರಿವರ್ಣ ಧ್ವಜಗಳನ್ನು, ಅಗ್ನಿವೀರ ಯೋಧ ಕಿರಣರಾಜ್ ಭಾವಚಿತ್ರ ಹಿಡಿದುಕೊಂಡು ನೂರಾರು ಯುವಕರು ಬೋಲೋ ಭಾರತ್ ಮಾತಾ ಕಿ ಜೈ, ಒಂದೇ ಮಾತರಂ, ಜೈ ಜವಾನ್ ಜೈ ಕಿಸಾನ್ , ಅಗ್ನಿವೀರ ಕಿರಣರಾಜ್‌ಗೆ ಜಯವಾಗಲಿ ಎಂಬ ಘೋಷಣೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿವಿಧ ಖಾಸಗಿ ವಾಹನಗಳು, ಶಾಲಾ ವಾಹನಗಳು, ಗ್ರಾಮದ ಟ್ಯಾಕ್ಟರ್ ಮಾಲೀಕರು ತಮ್ಮ ವಾಹನಗಳಿಗೆ ವೀರ ಯೋಧನ ಭಾವಚಿತ್ರ ಮತ್ತು ರಾಷ್ಟ್ರಧ್ವಜ ಕಟ್ಟಿಕೊಂಡು ಸಾಲಾಗಿ ಮೆರವಣಿಗೆಯಲ್ಲಿ ಸಾಗಿದ್ದು, ವಿದ್ಯಾರ್ಥಿಗಳು ಮತ್ತು ಯುವಕರು ಮೆರಗವಣಿಗೆಯಲ್ಲಿ ಸಾಲಾಗಿ ಸಾಗಿದ್ದು, ರಾಷ್ಟ್ರೀಯ ಹಬ್ಬದ ಸಡಗರದಂತೆ ಸ್ವಾಭಿಮಾನದಿಂದ ಅಗ್ನಿವೀರ ಕಿರಣರಾಜ ಪಾರ್ಥಿವ ಶರೀರವನ್ನು ಭವ್ಯ ಮತ್ತು ಐತಿಹಾಸಿಕ ಮೆರವಣಿಗೆ ಮಾಡಿ ಗೌರವ ನಮನ ಸಲ್ಲಿಸಿದರು.ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನಸೈನಿಕನ ತಂದೆ ಕೇದಾರಿ, ತಾಯಿ ರೇಣುಕಾ, ಅಜ್ಜ ಸತ್ಯಪ್ಪ, ಅಜ್ಜಿ ಯಲ್ಲವ್ವ, ಅಣ್ಣ ರವಿ, ಸಹೋದರಿ ನಿವೇದಿತಾ ಹಾಗೂ ಬಂಧು ಬಳದವರ ರೋಧನ ಮುಗಿಲು ಮುಟ್ಟಿತ್ತು. ಕಿರಣರಾಜ್‌ನ ಮೃತದೇಹ ಹೊತ್ತು ವಾಹನ ಗ್ರಾಮದಲ್ಲಿ ಬರುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ ಜನರ ದುಃಖ, ಆಕ್ರಂದನ ಕರಳು ಚಿರ್ ಎನಿಸುವಂತಿತ್ತು. ತಂದೆ-ತಾಯಿ, ತಮ್ಮ ಮಗನ ಮುಖದರ್ಶನ ಮಾಡುವಾಗ ಬಿಕ್ಕಿ-ಬಿಕ್ಕಿ ಅಳುತ್ತಿದ್ದ ದೃಶ್ಯ ಕರಳು ಕರಗಿ ನೀರಾಗುವಂತಿತ್ತು.ಈ ಘಟನೆಯಿಂದ ಮನೆಯ ಕಳಶವೇ ಮುರಿದಂತಾಗಿದೆ. ಆದರೆ, ದೇಶ ಸೇವೆಯಲ್ಲಿಯೇ ಪ್ರಾಣ ಕಳೆದುಕೊಂಡ ಮಗನನ್ನು ಕಂಡು ಹೆಮ್ಮೆ ಎನಿಸುತ್ತದೆ ಎಂದು ತಂದೆ ಕೇದಾರಿ ತೆಲಸಂಗ ದುಃಖವನ್ನು ನುಂಗಿ ಗಟ್ಟಿಧನಿಯಲ್ಲಿ ತೋಡಿಕೊಂಡರು ಯೋಧನ ಅಗಲಿಕೆಗೆ ಗ್ರಾಮಸ್ಥರು ಕಂಬನಿ ಮಿಡಿದರು.
ಸಕಲ ಸರ್ಕಾರಿ ಗೌರವ ನಮನಮೃತ ಯೋಧನ ಸ್ವಗ್ರಾಮದ ಐಗಳಿ ಗ್ರಾಮದ ಹೊರವಲಯದ ಆದರ್ಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪಂಜಾಬದ ಪಟಿಯಾಲ್ ರೆಜೀಮೆಂಟ್ ನಾಯಕ ಸುಬೇಧಾರ ಜಾಪರ್, ನಾಯಕ ಪ್ರದೀಪ್, ಹವಾಲ್ದಾರ್ ಚವ್ಹಾಣ, ನಾಯಕ ಸುಭೇದಾರ ಸುರೇಶ ಅಗಲಿದ ಯೋಧನ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜವನ್ನು ಹೊಂದಿಸಿ ಸೇನಾಧಿಕಾರಿಗಳಿಂದ ಪುಷ್ಪ ನಮನ ಸಲ್ಲಿಸಿ ಶಸ್ತ್ರಾಸ್ತ್ರಗಳಿಂದ 5 ಸುತ್ತು ಮದ್ದು ಗುಂಡು ಹಾರಿಸಿ ಗೌರವ ನಮನ ಸಲ್ಲಿಸಿದರು. ನಂತರ ರಾಷ್ಟ್ರಧ್ವಜವನ್ನು ಸೇನಾಧಿಕಾರಿಗಳು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ನಂತರ ಸಾರ್ವಜನಿಕರಿಗೆ ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಗಣ್ಯರ ಕಂಬನಿ:
ಅಥಣಿಯ ಶೆಟ್ಟರ ಮಠದ ಮರಳಸಿದ್ಧ ಸ್ವಾಮೀಜಿ, ತೆಲಸಂಗದ ವೀರೇಶ ದೇವರು, ಗ್ರಾಮ ಪಂಚಾಯತಿ ಅಧ್ಯಕ್ಷ ಶಕುಂತಲಾ ಅಣ್ಣಾಸಾಬ ಪಾಟೀಲ, ಮಾಜಿ ಶಾಸಕ ಶಹಜಾನ ಡೊಂಗರಗಾಂವ, ಮಹೇಶ ಕುಮಟಳ್ಳಿ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಗಿರೀಶ ಬುಠಾಳಿ, ಬಸವರಾಜ ಬೂಟಾಳಿ, ಸಿ.ಎಸ್.ನೇಮಗೌಡ, ಶಿವಾನಂದ ಸಿಂಧೂರ, ಅಪ್ಪಾಸಾಬ ತೆಲಸಂಗ, ಕಲ್ಲಪ್ಪ ಆಸಂಗಿ, ಮಾಜಿ ಸೈನಿಕ ಸಂಘದ ಅಧ್ಯಕ್ಷ ಅಣ್ಣಗೌಡ ಪಾಟೀಲ, ಗುರಪ್ಪ ಮಗದುಮ್, ಸಿದ್ದರಾಜ ಬೋರಡೆ, ಹೊನಗೌಡ ಪಾಟೀಲ, ವಿಜಯಪುರ ಜಿಲ್ಲೆಯ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಲ್.ಕೆ.ರಾಮಪ್ಪ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಐಗಳಿ ಹಾಗೂ ಸುತ್ತ-ಮುತ್ತಲಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ ಅಂತಿಮ ದರ್ಶನದಲ್ಲಿ ಪಾಲ್ಗೊಂಡು ಅಗಲಿದ ಯೋಧನಿಗೆ ಗೌರವ ನಮನ ಸಲ್ಲಿಸಿದರು.