ಕನ್ನಡಪ್ರಭ ವಾರ್ತೆ ಯಾದಗಿರಿ
ಬೆಂಗಳೂರಿನಿಂದ ಬುಧವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಅವರ ಪಾರ್ಥೀವ ಶರೀರವನ್ನು ಸ್ವಗ್ರಾಮ ಮುದ್ನಾಳಕ್ಕೆ ತಂದು, ಕೆಲ ಸಮಯದ ನಂತರ ಯಾದಗಿರಿ ನಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತದ ಸಮೀಪದ ಮುದ್ನಾಳ್ ಲೇಔಟಿನಲ್ಲಿರುವ ಅವರ ನಿವಾಸದ ಆವರಣದಲ್ಲಿ, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಪೂರೈಸಿದ ನಂತರ, ಸಾರ್ವಜನಿಕರ ದರ್ಶನಕ್ಕೆ ಮಧ್ಯಾಹ್ನದವರೆಗೆ ಇಡಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಜನರು ಸಾಲುಸಾಲಾಗಿ ಬಂದು ತಮ್ಮ ನೆಚ್ಚಿನ ನಾಯಕನಿಗೆ ಅಶ್ರುತರ್ಪಣ ಅರ್ಪಿಸಿದರು.
ಈ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಡಾ.ಅವಿನಾಶ ಜಾಧವ್, ಬಸವರಾಜ್ ಮತ್ತಿಮೂಡ, ಬಿ.ಜಿ.ಪಾಟೀಲ್, ಶಶಿಲ್ ಜಿ.ನಮೋಶಿ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಸಚಿವರಾದ ಡಾ.ಮಾಲಕರೆಡ್ಡಿ, ಗೋವಿಂದ ಕಾರಜೋಳ, ನರಸಿಂಹ ನಾಯಕ (ರಾಜೂಗೌಡ), ಗುರುಮಠಕಲ್ ಶಾಸಕ ಶರಣಗೌಡ ಸಹೋದರ ರಾಜೂಗೌಡ ಕಂದಕೂರ, ಅಮೀನರೆಡ್ಡಿ ಯಾಳಗಿ, ನಿತಿನ್ ಗುತ್ತೇದಾರ್, ರಾಜಕುಮಾರ್ ಪಾಟೀಲ ತೇಲ್ಕೂರ, ಚಂದು ಪಾಟೀಲ್, ಹಾಲಪ್ಪಾ ಆಚಾರ್, ಅಮರನಾಥ್ ಪಾಟೀಲ್, ಡಾ.ಶಿವರಾಜ್ ಪಾಟೀಲ್, ಬಸವರಾಜ್ ಬ್ಯಾಗವಾಟ್, ಹಂಪನಗೌಡ ಬಾದರ್ಲಿ, ಬಸರೆಡ್ಡಿ ಅನಪುರ ಮುಂತಾದವರು ಆಗಮಿಸಿ, ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.ಅಬ್ಬೆತುಮಕೂರು ಶ್ರೀಮಠದ ಡಾ। ಗಂಗಾಧರ ಮಹಾಸ್ವಾಮಿಗಳು, ದೇವಾಪುರ ಶಿವಮೂರ್ತಿ ಶಿವಾಚಾರ್ಯರು, ಗುರುಮಠಕಲ್ ಖಾಸಾಮಠದ ಶಾಂತವೀರ ಮಹಾಸ್ವಾಮೀಜಿ, ಕೋಡಾಲದ ಪಂಚಮಸಿದ್ಧಲಸ್ಗ ಸ್ವಾಮೀಜಿ, ಹೆಡಗಿಮುದ್ರಾದ ಶ್ರೀಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯಾರು, ಶಹಾಪುರ ಶ್ರೀಸೂಗೂರೇಶ್ವರರು, ಶ್ರೀಶೈಲಂನ ಗುರುಪಾದಸ್ವಾಮಿ, ದೋರನಹಳ್ಳಿಯ ಶಿವಲಿಂಗರಾಜೇಂದ್ರ ಶ್ರೀಗಳು, ದಾಸಬಾಳಮಠದ ಶ್ರೀ ವೀರೇಶ್ವರ ಸ್ವಾಮೀಜಿ ಸೇರಿದಂತೆ ಮತ್ತಿತ್ತನೇಕ ಮಠಾಧೀಶರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಡಬೇಕೆಂದು ಆದೇಶದ ಹಿನ್ನೆಲೆಯಲ್ಲಿ, ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪುರ, ಜಿಲ್ಲಾಧಿಕಾರಿ ಡಾ. ಸುಶೀಲಾ, ಸಿಚೊಓ ಲವೀಶ ಒರಡಿಯಾ, ಎಸ್ಪಿ ಜಿ. ಸಂಗೀತಾ, ಹೆಚ್ಚುವರಿ ಎಸ್ಪಿ ಧರಣೀಶ್, ಡಿವೈಎಸ್ಪಿ ಕೋಳೂರು ಮುಂತಾದ ಅಧಿಕಾರಿವರ್ಗ ಪಾಲ್ಗೊಂಡಿದ್ದರು. ಪೊಲೀಸ್ ಪಡೆಗಳಿಂದ ಗಾಳಿಯಲ್ಲಿ ಗುಂಡು ಹಾರಿಸಿ ಅಗಲಿದ ಜನನಾಯಕನಿಗೆ ಸಂತಾಪ ವ್ಯಕ್ತಪಡಿಸಿದರು.