ಕನ್ನಡಪ್ರಭ ವಾರ್ತೆ ಪಾಂಡವಪುರ
ಆಕಸ್ಮಿಕ ಬೆಂಕಿ ತಗುಲಿ ಮೂರೂವರೆ ಎಕರೆ ಕಬ್ಬು ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಚಂದ್ರೆ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.ಗ್ರಾಮದ ಸ್ವಾಮೀಗೌಡರ ಅರ್ಧ ಎಕರೆ, ಚಿಕ್ಕಮರೀಗೌಡರ ಒಂದು ಎಕರೆ, ಲೋಕೇಶ್ ಅವರ ಅರ್ಧ ಎಕರೆ, ದಾಳೇಗೌಡರ ಒಂದು ಎಕರೆ ಹಾಗೂ ಸತೀಶ್ ಎಂಬುವರಿಗೆ ಸೇರಿದ ಅರ್ಧ ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗೆ ಸುಟ್ಟುಭಸ್ಮವಾಗಿದೆ. ಇದರ ಜತೆಗೆ ಕಬ್ಬಿನ ಗದ್ದೆಯೊಳಗೆ ಹಾಕಿದ್ದ 100ಕ್ಕೂ ಅಧಿಕ ತೆಂಗಿನ ಸಸಿ, ಹನಿ ನೀರಾವರಿ ಪೈಪ್‌ಗಳು ಸಂಪೂರ್ಣ ನಾಶವಾಗಿ ಲಕ್ಷಾಂತರ ರು. ನಷ್ಟ ಸಂಭವಿಸಿದೆ.
ಬುಧವಾರ ಬೆಳಗ್ಗೆ 11ರ ಸುಮಾರಿಗೆ ಕಬ್ಬಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಬೆಂಕಿ ತಗುಲಿರುವ ವಿಷಯವನ್ನು ಅಕ್ಕ- ಪಕ್ಕದ ರೈತರು ಕಬ್ಬಿನ ಗದ್ದೆ ಮಾಲೀಕರಿಗೆ ಮುಟ್ಟಿಸಿದ್ದಾರೆ. ತಕ್ಷಣ ರೈತರು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.ಅಗ್ನಿ ಶಾಮಕ ದಳದ ಸಿಬ್ಬಂದಿ ಸರಿಯಾದ ಸಮಯಕ್ಕೆ ಬೆಂಕಿ ನಂದಿಸದಿದ್ದರೆ ಅಕ್ಕ- ಪಕ್ಕದ ಇನ್ನೂ ನಾಲ್ಕೈದು ಎಕರೆಯಷ್ಟು ಕಬ್ಬಿನ ಬೆಳೆ, ಪಕ್ಕದಲ್ಲೇ ಕೋಳಿ ಫಾರಂಗಳು ಸಹ ಸುಟ್ಟು ಹೋಗುತ್ತಿದ್ದವು ಎನ್ನಲಾಗಿದೆ.
ಸ್ಥಳಕ್ಕೆ ಕಂದಾಯ ಇಲಾಖೆ ರೆವಿನ್ಯು ಇನ್ಸ್‌ಪೆಕ್ಟರ್, ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸುಟ್ಟುಹೋಗಿರುವ ಕಬ್ಬಿನ ಗದ್ದೆಯ ಮಾಹಿತಿ ಪಡೆದುಕೊಂಡರು.ರೈತ ದಾಳೇಗೌಡ ಮಾತನಾಡಿ, ಕಬ್ಬಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟುಭಸ್ಮವಾಗಿದೆ. ಜೊತೆಗೆ ತೆಂಗಿನ ಸಸಿ ಹಾಗೂ ಹನಿನೀರಾವರಿ ಪೈಪ್ ಗಳು ಸಂಪೂರ್ಣ ಹಾಳಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.