ಕನ್ನಡಪ್ರಭ ವಾರ್ತೆ ಹಾಸನ

ಯಗಚಿ ಜಲಾಶಯ ಯೋಜನೆ ಕಾಮಗಾರಿಗಾಗಿ ಭೂಮಿ ಸ್ವಾಧೀನಪಡಿಸಿಕೊಂಡು ಆದರೆ ಪರಿಹಾರವನ್ನು ಅಕ್ರಮವಾಗಿ ಬೇರೆಯವರು ಪಡೆದುಕೊಳ್ಳುತ್ತಿದ್ದು, ಕೂಡಲೇ ರದ್ದುಪಡಿಸಿ ಮೂಲ ವಾರಸುದಾರರಿಗೆ ಪ್ರತ್ಯೇಕ ಅವಾರ್ಡ್ ಆದೇಶ ಮಾಡಿ ಪರಿಹಾರ ನೀಡಲು ಆಗ್ರಹಿಸಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಘಟನೆಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಇದೇ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಎಸ್. ಪ್ರದೀಪ್ ಮಾಧ್ಯಮದೊಂದಿಗೆ ಮಾತನಾಡಿ, ತಾಲೂಕಿನ ಕಟ್ಟಾಯ ಹೋಬಳಿಯ ಕಟ್ಟಾಯ ಗ್ರಾಮದ ಸರ್ವೇ ನಂ.128/1ಎರಲ್ಲಿ ಯಗಚಿ ಜಲಾಶಯ ಯೋಜನೆ ಕಾಮಗಾರಿಗಾಗಿ ಭೂಮಿಯನ್ನು 2009-10ನೇ ಸಾಲಿನಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಒಟ್ಟು 1 ಎಕರೆ 25 ಗುಂಟೆ ಜಮೀನನ್ನು ಹೇಮಾವತಿ ಜಲಾಶಯ ಯೋಜನೆ (2) ಅಡಿ ಯಗಚಿ ನಾಲೆ ನಿರ್ಮಾಣಕ್ಕಾಗಿ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮ ನಡೆದಿದೆ ಎಂಬ ಆರೋಪ ಇದೀಗ ಬೆಳಕಿಗೆ ಬಂದಿದೆ.ಸರ್ವೇ ನಂ.128/1ಎ ಪೈಕಿ 2.09.04 ಎಕರೆ ವಿಸ್ತೀರ್ಣದ ಜಮೀನಿನ ಹಕ್ಕುದಾರರು ಪ್ರೇಮ ಕೋಂ ಲೇಟ್ ಜವರೇಗೌಡರಾಗಿದ್ದು, ಇದು ಅವರ ಪಿತ್ರಾರ್ಜಿತ ಸ್ವತ್ತಾಗಿರುತ್ತದೆ. ಆದರೆ ಅಧಿಸೂಚನೆಯಲ್ಲಿ ಅವರ ಹೆಸರನ್ನು ಕೈಬಿಟ್ಟು ಇತರರ ಹೆಸರುಗಳನ್ನು ಸೇರಿಸಲಾಗಿದೆ ಎಂದು ದೂರಿದರು. ಭೂಸ್ವಾಧೀನಕ್ಕೆ ಒಳಪಟ್ಟ 1 ಎಕರೆ 25 ಗುಂಟೆ ಜಮೀನಿನಲ್ಲಿ 37 ಗುಂಟೆ ಕೆ. ಶ್ಯಾಮಣ್ಣ ಬಿನ್ ನಿರ್ವಾಣೇಗೌಡರ ಭಾಗವಾಗಿದ್ದು, 28 ಗುಂಟೆ ಜವರೇಗೌಡ ಬಿನ್ ಲೇಟ್ ಅಣ್ಣೆಗೌಡರ ಸ್ವಾಧೀನದಲ್ಲಿತ್ತು ಎನ್ನಲಾಗಿದೆ. ಹೀಗಿರುವಾಗ 28 ಗುಂಟೆ ವಿವಾದಿತ ಜಮೀನಿಗೆ ಸಂಬಂಧಿಸಿದ ಪರಿಹಾರ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇಡುವ ಬದಲು, ಸ್ವತ್ತಿನ ಮಾಲೀಕನೂ ಅಲ್ಲದ ಮಂಜುನಾಥ ಬಿನ್ ನಿರ್ವಾಣೇಗೌಡರ ಹೆಸರಿಗೆ 16/08/2014ರಂದು ವೈಯಕ್ತಿಕ ಅವಾರ್ಡ್ ಮಾಡಿ ಪರಿಹಾರ ಹಣ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಭೂಸ್ವಾಧೀನಾಧಿಕಾರಿ ಕಚೇರಿ ಸಿಬ್ಬಂದಿಯೊಂದಿಗೆ ಸಂಧಿ ಮಾಡಿಕೊಂಡು ಅಕ್ರಮವಾಗಿ ಪರಿಹಾರ ಹಣ ಪಡೆದುಕೊಳ್ಳಲಾಗಿದೆ ಎಂದು ದೂರಲಾಗಿದೆ.ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ವಿವಾದಿತ ಜಮೀನಿನ ಹಕ್ಕು ಮತ್ತು ಸ್ವಾಧೀನ ಅನುಭವವನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಮಂಜುನಾಥ ಬಿನ್ ನಿರ್ವಾಣೇಗೌಡರ ಹೆಸರಿಗೆ ನೀಡಿರುವ ವೈಯಕ್ತಿಕ ಅವಾರ್ಡ್ ರದ್ದುಪಡಿಸಿ, ಅಕ್ರಮವಾಗಿ ಪಡೆದ ಪರಿಹಾರ ಹಣವನ್ನು ಬಡ್ಡಿ ಸಮೇತ ವಸೂಲು ಮಾಡಬೇಕು. ನಂತರ ಮೂಲ ಹಕ್ಕುದಾರರ ಪರವಾಗಿ ಪ್ರತ್ಯೇಕ ಅವಾರ್ಡ್‌ ಆದೇಶ ಹೊರಡಿಸಿ ಅವರಿಗೆ ನ್ಯಾಯಸಮ್ಮತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. “ಬಡ ರೈತರ ಹಕ್ಕು ಕಸಿದುಕೊಳ್ಳುವಂತಹ ಅಕ್ರಮಗಳು ನಡೆಯಬಾರದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ನವೀನ್ ಸಾಲಗಾಮೆ, ತಾಲೂಕು ಅಧ್ಯಕ್ಷ ರವಿ ಎಂ.ಎಚ್, ಹರ್ಷ, ತೋಫಿಕ್ ಪಾಷ, ಕೃಷ್ಣಯ್ಯ, ಪ್ರೇಮಾ, ಪ್ರತಾಪ್, ರವಿಕುಮಾರ್‌, ಮಂಜೇಗೌಡ, ನಂಜೇಗೌಡ, ದೇವೇಗೌಡ, ಲಕ್ಷ್ಮಮ್ಮ, ಮಲ್ಲೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.