ಪಿಒಪಿಗೆ ವಿದಾಯ: ಮಣ್ಣಿನ ಗಣೇಶನಿಗೆ ಆದಾಯ!

KannadaprabhaNewsNetwork |  
Published : Aug 20, 2025, 01:30 AM IST
ಮಣ್ಣಿನಿಂದ ತಯಾರಿಸಲಾದ ಪರಿಸರಸ್ನೇಹಿ ಗಣೇಶ ಮೂರ್ತಿಗೆ ಅಂತಿಮ ಸ್ಪರ್ಷ ನೀಡುತ್ತಿರುವ ಕಲಾವಿದರು. | Kannada Prabha

ಸಾರಾಂಶ

ಜಿಲ್ಲಾಡಳಿತದ ಸುಮಾರು ಒಂದು ಡಜನ್ ತಂಡಗಳು ಪಿಒಪಿ ಮೂರ್ತಿ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿವೆ ಮತ್ತು ಪಿಒಪಿಯಿಂದ ಮಾಡಿದ ಸುಮಾರು 100ಕ್ಕೂ ಹೆಚ್ಚು ಮೂರ್ತಿಗಳನ್ನು ಈಗಾಗಲೇ ವಶಪಡಿಸಿಕೊಂಡಿದ್ದು, ಕಾನೂನು ಕ್ರಮಕ್ಕೆ ಹೆದರಿ ಪಿಒಪಿ ಮಾರಾಟಗಾರರು ತಮ್ಮ ಮೊದಲಿನ ವ್ಯಾಪಾರದಿಂದ ಹಿಂದೆ ಸರಿದಿದ್ದಾರೆ.

ಬಸವರಾಜ ಹಿರೇಮಠ

ಧಾರವಾಡ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಬಳಕೆಯ ಮೇಲೆ ನಿಷೇಧ ಹೇರಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿರುವುದು ಈ ವರ್ಷ ಜೇಡಿಮಣ್ಣು ಮತ್ತು ಇತರ ಪರಿಸರ ಸ್ನೇಹಿ ಮೂರ್ತಿಗಳಿಗೆ ಭಾರಿ ಬೇಡಿಕೆ ಬಂದಿದೆ.

ಪಿಒಪಿ ಮೂರ್ತಿಗಳನ್ನು ನಿಷೇಧಿಸಿ ಏಳೆಂಟು ವರ್ಷಗಳಾಗಿದ್ದರೂ ಸಡಿಲ ನಿಯಮಗಳಿಂದ ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯ, ಜಿಲ್ಲೆಗಳಿಂದ ಗಣೇಶ ಹಬ್ಬದ ಸಮಯದಲ್ಲಿ ನೂರಾರು ಪಿಒಪಿ ಮೂರ್ತಿಗಳು ಜಿಲ್ಲೆಯನ್ನು ಪ್ರವೇಶಿಸುತ್ತಿದ್ದವು. ಆದರೆ, ಈ ವರ್ಷ ಮಾತ್ರ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ. ಜಿಲ್ಲಾಡಳಿತದ ಸುಮಾರು ಒಂದು ಡಜನ್ ತಂಡಗಳು ಪಿಒಪಿ ಮೂರ್ತಿ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿವೆ ಮತ್ತು ಪಿಒಪಿಯಿಂದ ಮಾಡಿದ ಸುಮಾರು 100ಕ್ಕೂ ಹೆಚ್ಚು ಮೂರ್ತಿಗಳನ್ನು ಈಗಾಗಲೇ ವಶಪಡಿಸಿಕೊಂಡಿದ್ದು, ಕಾನೂನು ಕ್ರಮಕ್ಕೆ ಹೆದರಿ ಪಿಒಪಿ ಮಾರಾಟಗಾರರು ತಮ್ಮ ಮೊದಲಿನ ವ್ಯಾಪಾರದಿಂದ ಹಿಂದೆ ಸರಿದಿದ್ದಾರೆ.

ಧಾರವಾಡ ಮತ್ತು ಹುಬ್ಬಳ್ಳಿ ಅವಳಿ ನಗರಗಳಲ್ಲಿ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಪ್ರಮುಖ ವೃತ್ತ, ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ದೊಡ್ಡ ಮೂರ್ತಿಗಳನ್ನು ಸ್ಥಾಪಿಸಲಾಗುತ್ತದೆ. ಗಣೇಶನ ಆಗಮನಕ್ಕೆ ಕೇವಲ ಆರೇಳು ದಿನಗಳು ಬಾಕಿ ಇರುವಾಗ, ಪಿಒಪಿ ನಿಷೇಧದ ಹಿನ್ನೆಲೆಯಲ್ಲಿ ಹೆಚ್ಚು ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಬಂದಿದ್ದು, ಅದಕ್ಕೆ ತಕ್ಕಂತೆ ಕುಶಲಕರ್ಮಿಗಳು, ಕಲಾವಿದರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ.

ಮಳೆಯಿಂದ ಒಣಗುತ್ತಿಲ್ಲ ಮೂರ್ತಿಗಳು: ವಿಶೇಷವಾಗಿ ಈ ಬಾರಿ ಬೇಡಿಕೆಯನ್ನು ಪೂರೈಸಲು ನಾನೂ ಸೇರಿದಂತೆ ತಯಾರಕರು ಹೆಣಗಾಡುವಂತಾಗಿದೆ. ಪಿಒಪಿ ನಿಷೇಧದೊಂದಿಗೆ ಮಳೆ ಹಾಗೂ ತಂಪಿನ ವಾತಾವರಣದಿಂದ ಮೂರ್ತಿಗಳು ಒಣಗುತ್ತಿಲ್ಲ. ಪಿಒಪಿ ವಿಗ್ರಹಗಳಿಗಿಂತ ಭಿನ್ನವಾಗಿ, ಜೇಡಿಮಣ್ಣಿನ ವಿಗ್ರಹಗಳನ್ನು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸ್ಥಳೀಯವಾಗಿ ಲಭ್ಯವಿರುವ ಜೇಡಿಮಣ್ಣಿನ ಕೊರತೆಯು ನಮಗೆ ಸವಾಲಾಗಿದೆ. ಇದಲ್ಲದೆ, ಜೇಡಿಮಣ್ಣಿನ ವಿಗ್ರಹಗಳನ್ನು ತಯಾರಿಸಲು ಕೌಶಲ್ಯ ಮತ್ತು ಸಮಯ ಎರಡೂ ಬೇಕಾಗುತ್ತದೆ. ಜತೆಗೆ ಹೆಚ್ಚಿನ ಕುಶಲಕರ್ಮಿಗಳು ಈ ಬಗ್ಗೆ ಪರಿಣಿತಿ ಹೊಂದಿಲ್ಲ ಎಂದು ಪರಿಸರ ಸ್ನೇಹಿ ವಿಗ್ರಹ ತಯಾರಕ ಕೆಲಗೇರಿಯ ಮಂಜುನಾಥ ಹಿರೇಮಠ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಮುಂದಿನ ವರ್ಷದ ಗಣೇಶ ಹಬ್ಬಕ್ಕಾಗಿ ದೀಪಾವಳಿಯ ನಂತರವೇ ಗಣೇಶ ಮೂರ್ತಿಗಳನ್ನು ತಯಾರಿಸಲು ಪ್ರಾರಂಭಿಸುವ ನಾವು, ಈಗ ಆರ್ಡರ್‌ಗಳನ್ನು ಪೂರೈಸಲು ದಿನಕ್ಕೆ 16 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದೇವೆ. ಮನೆಗಳಿಗೆ 1,000 ಸಣ್ಣ ವಿಗ್ರಹಗಳು ಮತ್ತು ಗಣೇಶ ಮಹಾಮಂಡಲಗಳಿಂದ ಸಾರ್ವಜನಿಕ ಪ್ರತಿಷ್ಠಾಪನೆಗಾಗಿ 100ಕ್ಕೂ ಹೆಚ್ಚು ದೊಡ್ಡ ವಿಗ್ರಹಗಳ ತಯಾರಿಕೆ ಕೊನೆ ಹಂತದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಬೇಡಿಕೆ ಶೇ. 30 ರಷ್ಟು ಹೆಚ್ಚಾಗಿದೆ ಎಂದವರು ಮಾಹಿತಿ ನೀಡಿದರು.

ಕೋವಿಡ್‌ ಸಮಯದಲ್ಲಿ ವಿಗ್ರಹದ ಗಾತ್ರದ ಮೇಲೆ ನಿರ್ಬಂಧ ವಿಧಿಸಲಾಗಿತ್ತು, ಆದರೆ, ಈ ವರ್ಷ ಅಂತಹ ಯಾವುದೇ ಮಿತಿಗಳಿಲ್ಲ. ಸಾರ್ವಜನಿಕ ಗಣೇಶೋತ್ಸವ ಮಂಡಳಗಳು ಎಂಟು ಅಡಿಗಿಂತ ಹೆಚ್ಚಿನ ಎತ್ತರದ ವಿಗ್ರಹಗಳಿಗೆ ಆರ್ಡರ್‌ ನೀಡಿವೆ. ಮಣ್ಣಿನ ಮೂರ್ತಿಗಳ ಕೊರತೆ ಬರದಂತೆ ನೋಡಿಕೊಳ್ಳಲು ಕಲಾವಿದ ಕಾಂತೇಶ್ ಎಂಬುವರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜೇಡಿಮಣ್ಣಿನ ವಿಗ್ರಹ ತಯಾರಿಕೆ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಅವರ ಮನೆಗಳಲ್ಲಿ ವಿಗ್ರಹಗಳನ್ನು ಅವರೇ ತಯಾರಿಸಲು ಮತ್ತು ಸ್ಥಾಪಿಸಲು ಪ್ರೋತ್ಸಾಹಿಸುತ್ತಿದ್ದಾರೆ. ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಸುಮಾರು 40 ತರಬೇತಿ ಕಾರ್ಯಕ್ರಮಗಳನ್ನು ಈಗಾಗಲೇ ನಡೆಸಲಾಗಿದೆ ಎಂದು ಮಂಜುನಾಥ ತಿಳಿಸಿದರು.

ಧಾರವಾಡ ಜಿಲ್ಲೆಯನ್ನು ಪಿಒಪಿ ನಿರ್ಮಿತ ಮೂರ್ತಿಗಳಿಂದ ಮುಕ್ತಗೊಳಿಸುವುದು ನಮ್ಮ ಉದ್ದೇಶ. ಹೀಗಾಗಿ ಪಿಒಪಿ ಗಣೇಶ ಮೂರ್ತಿ ತಯಾರಿಕೆ, ಮಾರಾಟ ಸಂಪೂರ್ಣ ನಿಷೇಧಿಸಿದೆ. ನಮ್ಮ ಭಕ್ತಿಯು ಪರಿಸರಕ್ಕೆ ಹಾನಿ ಮಾಡಬಾರದು. ಪೂಜೆ ಭವಿಷ್ಯದ ಪೀಳಿಗೆಗೆ ಶಾಪವಾಗಬಾರದು. ಈ ವಿಷಯದಲ್ಲಿ ನಾಗರಿಕರು ಸಹ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ