ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಭಾರತೀ ಕಾಲೇಜಿನಲ್ಲಿ 37 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್.ರೇವಣ್ಣರನ್ನು ಕಾಲೇಜಿನ ಅಧ್ಯಾಪಕರ ಸಂಘದಿಂದ ಅಭಿನಂದಿಸಿ ಬೀಳ್ಕೊಡಲಾಯಿತು.ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ.ಎಸ್.ರೇವಣ್ಣರ ಸಾಧನೆ ವಿವರಿಸಿ 2010ರಲ್ಲಿ ಆರಂಭವಾದ ಭಾರತೀ ಉತ್ಸವವು ಸಾಂಸ್ಕೃತಿ ಸಂಭ್ರಮದ ಸಂಚಾಲಕರಾಗಿದ್ದಾಗ ನಡೆದ ಅಪರೂಪದ ನೆನಪುಗಳನ್ನು ಮೆಲುಕುಹಾಕಿದರು.ಹಿರಿಯ- ಕಿರಿಯ ಸಹೋದ್ಯೋಗಿಗಳು ಕಾಲೇಜಿನ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಯನ್ನು ನೆನಪಿಸಿಕೊಂಡರು. ವಿದ್ಯಾರ್ಥಿಗಳ ಓದಿನ ಬಗ್ಗೆ ಅವರಿಗಿದ್ದ ಕಾಳಜಿ ಮೆಚ್ಚಿಕೊಂಡರು. ಸಹೋದ್ಯೋಗಿಗಳ ಜತೆ ಒಡನಾಟವನ್ನು ಹಲವರು ಕೃತಜ್ಞತೆಯಿಂದ ನೆನಪಿಸಿಕೊಂಡು ಭಾವುಕರಾದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ, ಸಂಸ್ಥೆ ಅಧ್ಯಕ್ಷ ಮಧು ಜಿ.ಮಾದೇಗೌಡರು ಪ್ರೊ.ಎಸ್.ರೇವಣ್ಣರನ್ನು ಅಭಿನಂದಿಸಿ ಮಾತನಾಡಿ, ಭಾರತೀ ಉತ್ಸವವನ್ನು ಉತ್ತಮವಾಗಿ ನಡೆಸಿದ ರೇವಣ್ಣರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ ಮಾತನಾಡಿ, ಪ್ರೊ.ಎಸ್.ರೇವಣ್ಣರ ತಾಳ್ಮೆ ಏಕಾಗ್ರತೆ ಬುದ್ಧಿವಂತಿಕೆ, ಕ್ರಿಯಾಶೀಲ ಚಟುವಟಿಕೆ, ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದು ನೆನಪಿಸಿಕೊಂಡರು. ಭಾರತೀ ಉತ್ಸವ, ಸುವರ್ಣ ಭಾರತಿ ಉತ್ಸವ, ವಜ್ರ ಮಹೋತ್ಸವ ಕಾರಣರಾಗಿ, ಬೆಸ್ಟ್ ಎನ್‌ಎಸ್‌ಎಸ್ ಆಫೀಸರ್ ಅವಾರ್ಡ್ ತಂದು ಕಾಲೇಜಿಗೆ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಪ್ರೊ.ರೇವಣ್ಣ ಮಾತನಾಡಿ, ಕೆಎಎಸ್, ಐಎಎಸ್ ಅಧ್ಯಾಪಕರಿಗೆ ಬೋಧನೆ ಮಾಡಿದ್ದೇನೆ. ಇದು ನನಗೆ ತೃಪ್ತಿ ನೀಡಿದೆ. ಸಹಕಾರದೊಂದಿಗೆ ಉದ್ಯೋಗ ಅನ್ನ ನೀಡಿದ ಸಂಸ್ಥೆ ಸಂಸ್ಥಾಪಕ ದಿ.ಜಿ.ಮಾದೇಗೌಡರಿಗೆ ನಾನು ಚಿರಋಣಿ ಎಂದು ಭಾವುಕರಾದರು.ಈ ವೇಳೆ ಅಧ್ಯಾಪಕರು ಮತ್ತು ಅಧ್ಯಾಪಕೇತರರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅ.9ರಂದು ಬಿಎಸ್ಪಿ ಸಮಾವೇಶಮಂಡ್ಯ: ಬಹುಜನ ಸಮಾಜ ಪಕ್ಷದ ಸಂಸ್ಥಾಪಕ, ದಾದಾಸಾಹೇಬ್ ಕಾನ್ಶೀರಾಂ ಅವರ 19ನೇ ವರ್ಷದ ಪರಿನಿಬ್ಬಾಣ ದಿನ ಪ್ರಯುಕ್ತ ಅ.9 ರಂದು ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಬಹುಜನ ಸಮಾವೇಶ ಜರುಗಲಿದೆ ಎಂದು ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಎಂ.ಎಸ್.ವೆಂಕಟೇಶ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶಾದ್ಯಂತ ಕಾನ್ಶೀರಾಂ ಅವರ 19ನೇ ವರ್ಷದ ಪರಿನಿಬ್ಬಾಣ ದಿನ ಪ್ರಯುಕ್ತ ಬಹುಜನ ದಿವಸ್ ಸಮಾವೇಶಗಳು ಜರುಗುತ್ತಿವೆ. ಅದೇ ರೀತಿ ರಾಜ್ಯದಲ್ಲಿ 4 ವಿಭಾಗ ಮಟ್ಟದಲ್ಲಿ ಸಮಾವೇಶಗಳು ಆಯೋಜನೆಗೊಂಡಿವೆ ಎಂದು ಹೇಳಿದ್ದಾರೆ.ಮೈಸೂರು ವಿಭಾಗೀಯ ಮಟ್ಟದ ಬಹುಜನ ಸಮಾವೇಶವು ಹಾಸನ ಜಿಲ್ಲೆಯ ಅರಕಲುಗೂಡಿನಲ್ಲಿ ಆಯೋಜನೆಗೊಂಡಿದೆ. ಮಂಡ್ಯ, ಮೈಸೂರು, ಹಾಸನ ಹಾಗು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಹುಜನ ಚಳುವಳಿಗಾರರು, ಬಿಎಸ್ಪಿ ಕಾರ್ಯಕರ್ತರು, ಅಂಬೇಡ್ಕರ್ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಬೇಕು ಎಂದು ಕೋರಿದ್ದಾರೆ.