ಅಮರೇಶ್ವರಸ್ವಾಮಿ ಕಂದಗಲ್ಲಮಠ
ಓಡುವ ನೀರನ್ನು ನಿಲ್ಲುವಂತೆ ಮಾಡಿ, ನಿಂತ ನೀರನ್ನು ಭೂಮಿಯಲ್ಲಿ ಇಂಗಿಸುವಂತೆ ಮಾಡಿ-ಎಂಬ ಧ್ಯೇಯವಾಕ್ಯದಡಿ ಕೈಗೊಂಡಿರುವ ಕೃಷಿ ಹೊಂಡಗಳು ಇತ್ತೀಚೆಗೆ ಸುರಿದ ಮಳೆ ನೀರಿನಿಂದ ತುಂಬಿವೆ. ಇದರಿಂದ ಬರಗಾಲದಲ್ಲಿ ಕೂಲಿ ಕೆಲಸಗಾರರ ಕೈಗಳಿಗೆ ಹಣ ಹಾಗೂ ಅಲ್ಪ ಮಳೆಗಾಲದ ಈ ದಿನದಲ್ಲಿ ಜಾನುವಾರುಗಳಿಗೆ ನೀರಿನ ಅನುಕೂಲ ಆಗುತ್ತಿದೆ.
ವಿಕಸಿತ ಭಾರತ ಗ್ಯಾರಂಟಿ ರೋಜಗಾರ ಮತ್ತು ಆಜೀವಿಕ ಮಿಷನ್ ಯೋಜನೆಯಡಿ ಜಲ ಸಂರಕ್ಷಣಾ ಕಾಮಗಾರಿಯಲ್ಲಿ ರೈತರ ಜಮೀನುಗಳಲ್ಲಿ ನಿರ್ಮಿಸಲಾಗುತ್ತಿರುವ ಕೃಷಿಹೊಂಡ, ನಾಲಾ, ಕೆರೆ, ಬದು ಹಾಗೂ ಬೋಲ್ಡರ್ ಚೆಕ್‌ಗಳಂತಹ ಕಾಮಗಾರಿಗಳು ಮಳೆನೀರನ್ನು ಸಂಗ್ರಹಿಸುವ ಜತೆಗೆ ಅಂತರ್ಜಲ ಮಟ್ಟ ಹೆಚ್ಚಳಕ್ಕೂ, ಕುರಿಗಳಿಗೆ ಹಾಗೂ ಜಾನುವಾರುಗಳಿಗೆ ಸಹಕಾರಿಯಾಗುತ್ತಿವೆ.ಈಗಾಗಲೇ ತಾಲೂಕಿನಲ್ಲಿ 13 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನೂ ಕೆಲವು ಕಡೆ ಆರಂಭಿಸಲಾಗುತ್ತಿದೆ. ಜಮೀನಿನಲ್ಲಿ 12×12×3 ಮೀಟರ್ ಅಳತೆಯ ಕೃಷಿಹೊಂಡ ನಿರ್ಮಿಸಿಕೊಂಡರೆ, 289 ಮಾನವ ದಿನಗಳ ಉದ್ಯೋಗ ಸೃಜನೆಯಾಗುತ್ತಿದ್ದು, ಕೂಲಿಕಾರರಿಗೆ ₹1.13 ಲಕ್ಷ ಕೂಲಿ ಮೊತ್ತ ದೊರೆಯಲಿದೆ.
ಕೃಷಿಹೊಂಡ ನಿರ್ಮಿಸಿಕೊಳ್ಳಿ: ಕುಕನೂರು ತಾಲೂಕಿನಲ್ಲಿ ಈಗ ವಿಬ್ ಜಿ ರಾಮ್ ಜೀ ಯೋಜನೆಯಲ್ಲಿ 13 ಕೃಷಿಹೊಂಡ ನಿರ್ಮಾಣ ಆಗಿವೆ. ಬರಗಾಲದಲ್ಲಿ ಕೃಷಿ ಹೊಂಡ ನಿರ್ಮಾಣದಿಂದ ಜನರಿಗೆ ಕೆಲಸ ಸಿಗುತ್ತದೆ. ರೈತ ವರ್ಗಕ್ಕೂ ಕೃಷಿ ಹೊಂಡಗಳು ಅನುಕೂಲ ಆಗಲಿವೆ. ಎಲ್ಲಿಯಾದರೂ ದುಡಿಯಲು ಹೋಗದೆ ಗ್ರಾಪಂನಿಂದ ವಿಬ್ ಜಿ ರಾಮ್ ಜೀ ಯೋಜನೆಯಲ್ಲಿ ಜನರು ಕೂಲಿ ಕೆಲಸ ಪಡೆಯಬಹುದು. ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳಬೇಕು ಎಂದು ಕುಕನೂರು ತಾಪಂ ಇಒ ಬೆಟದಪ್ಪ ಮಾಳೆಕೊಪ್ಪ ಹೇಳುತ್ತಾರೆ.