ಮುಂಡಗೋಡದ ಸರ್ಕಾರಿ ಆಸ್ಪತ್ರೆಗೆ ದಿಢೀರ್ ನ್ಯಾಯಾಧೀಶರ ಭೇಟಿ

KannadaprabhaNewsNetwork |  
Published : Sep 27, 2026, 02:30 AM IST
ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಶಿವರಾಜ್ ಎಚ್.ಎಸ್. ಅವರು ಮುಂಡಗೋಡದ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಅವರಿಗೆ ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಚಿಕಿತ್ಸೆ ಹಾಗೂ ಅಗತ್ಯ ವೈದ್ಯಕೀಯ ಸೇವೆಗಳು ದೊರೆಯುತ್ತಿವೆಯೇ ಎಂಬುದರ ಕುರಿತು ನ್ಯಾಯಾಧೀಶ ಶಿವರಾಜ್ ಎಚ್.ಎಸ್. ಅವರು ಮಾಹಿತಿ ಪಡೆದುಕೊಂಡರು.

ಮುಂಡಗೋಡ: ಇಲ್ಲಿನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಶಿವರಾಜ್ ಎಚ್.ಎಸ್. ಅವರು ಶನಿವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯಲ್ಲಿನ ವಿವಿಧ ವ್ಯವಸ್ಥೆಗಳು ಹಾಗೂ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಆರೋಗ್ಯ ಸೇವೆಗಳ ಕುರಿತು ಪರಿಶೀಲಿಸಿದರು.

ಭೇಟಿಯ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಅವರಿಗೆ ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಚಿಕಿತ್ಸೆ ಹಾಗೂ ಅಗತ್ಯ ವೈದ್ಯಕೀಯ ಸೇವೆಗಳು ದೊರೆಯುತ್ತಿವೆಯೇ ಎಂಬುದರ ಕುರಿತು ಮಾಹಿತಿ ಪಡೆದುಕೊಂಡರು. ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಯಾವುದೇ ತೊಂದರೆಗಳು, ಕೊರತೆಗಳು ಅಥವಾ ಕುಂದುಕೊರತೆಗಳು ಎದುರಾಗುತ್ತಿವೆಯೇ ಎಂಬುದರ ಬಗ್ಗೆಯೂ ವಿಚಾರಿಸಿದರು.

ನಂತರ ಆಸ್ಪತ್ರೆಯ ವಿವಿಧ ವಿಭಾಗಗಳು, ವಾರ್ಡ್‌ಗಳು, ರೋಗಿಗಳ ಕೊಠಡಿಗಳು ಹಾಗೂ ಇತರೆ ಮೂಲ ಸೌಲಭ್ಯಗಳನ್ನು ಪರಿಶೀಲಿಸಿದರು. ಆಸ್ಪತ್ರೆಯ ಆವರಣ ಹಾಗೂ ವಿವಿಧ ಕೊಠಡಿಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಸಮರ್ಪಕವಾಗಿ ಕಾಪಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ರೋಗಿಗಳಿಗೆ ಸ್ವಚ್ಛ, ಸುರಕ್ಷಿತ ಹಾಗೂ ಆರೋಗ್ಯಕರ ವಾತಾವರಣವನ್ನು ಒದಗಿಸುವುದು ಆಸ್ಪತ್ರೆಯ ಆಡಳಿತದ ಪ್ರಮುಖ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ನಿರಂತರ ಗಮನಹರಿಸುವಂತೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ನರೇಂದ್ರ ಪವಾರ್ ಅವರು ಆಸ್ಪತ್ರೆಯಲ್ಲಿ ಕಳೆದ ಸುಮಾರು ಎರಡು ವರ್ಷಗಳಿಂದ ಅಗತ್ಯ ಔಷಧಿಗಳ ಸಮರ್ಪಕ ಹಾಗೂ ನಿಯಮಿತ ಸರಬರಾಜಿನಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂದು ನ್ಯಾಯಾಧೀಶರಿಗೆ ತಿಳಿಸಿದರು. ಅಲ್ಲದೆ, ಆಸ್ಪತ್ರೆಯಲ್ಲಿ ಅಗತ್ಯವಿರುವಷ್ಟು ವೈದ್ಯಕೀಯ ಹಾಗೂ ಇತರೆ ಸಿಬ್ಬಂದಿ ಲಭ್ಯವಿಲ್ಲದಿರುವುದರಿಂದ ಸಿಬ್ಬಂದಿ ಕೊರತೆಯ ಸಮಸ್ಯೆಯೂ ಇದೆ ಎಂದು ತಿಳಿಸಿದರು.

ಬಳಿಕ ಸಾರ್ವಜನಿಕರಿಗೆ ಗುಣಮಟ್ಟದ ಹಾಗೂ ನಿರಂತರ ಆರೋಗ್ಯ ಸೇವೆ ದೊರೆಯುವುದು ಅತ್ಯಂತ ಅವಶ್ಯಕವಾಗಿರುವ ಹಿನ್ನೆಲೆ ಸಮಸ್ಯೆಗಳನ್ನು ಸಂಬಂಧಪಟ್ಟ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ, ಆಸ್ಪತ್ರೆ ಪರಿಶೀಲನೆಯ ಸಂದರ್ಭದಲ್ಲಿ ಗಮನಕ್ಕೆ ಬಂದ ಅಂಶಗಳು ಹಾಗೂ ಅಧಿಕಾರಿಗಳಿಂದ ನೀಡಲಾದ ಮಾಹಿತಿಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರವಾರ ಇವರಿಗೆ ವರದಿ ಸಲ್ಲಿಸುವ ಮೂಲಕ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸ್ವರೂಪರಾಣಿ ಪಾಟೀಲ, ವೈದ್ಯಕೀಯ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯ
ಜಾನುವಾರುಗಳಿಗೆ ಮೇವಿನ ಕೊರತೆ ಭೀತಿ!