ನರಗುಂದ: ವ್ಯಕ್ತಿಯೊಬ್ಬ ಯಾವುದೇ ಹುದ್ದೆಯಲ್ಲಿರಲಿ ಸಂಸ್ಕೃತಿ, ಆಚಾರ-ವಿಚಾರ ಮತ್ತು ಸಂಪ್ರದಾಯ ಬಿಡಬಾರದು. ಜೀವನಕ್ಕೆ ಶ್ರದ್ಧೆ, ಭಕ್ತಿ ಮತ್ತು ಪ್ರಾಮಾಣಿಕತೆ ಅತೀ ಅವಶ್ಯ ಎಂದು ಪತ್ರೀವನ ಮಠದ ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು ಹೇಳಿದರು.
ಗುರುವಿನ ಮಾರ್ಗದರ್ಶನದಲ್ಲಿ ನಡೆಯುವ ವ್ಯಕ್ತಿ ಎಂದಿಗೂ ಕೆಳಗೆ ಬೀಳಲಾರ. ಶ್ರೀಮಠದಲ್ಲಿ ಪತ್ರಿಗಿಡಗಳು ಹೆಚ್ಚು ಇರುವುದರಿಂದಲೇ ಪತ್ರೀವನಮಠವೆಂದು ಹೆಸರು ಬಂದಿದೆ. ಮಠದ ಆವರಣದಲ್ಲಿ 108 ಪತ್ರಿ ಗಿಡಗಳನ್ನು ಬೆಳೆಸುವ ಉದ್ದೇಶದಿಂದ ಮಠಕ್ಕೆ ಬರುವ ಭಕ್ತಾದಿಗಳಿಗೆ ಕುಟುಂಬಕ್ಕೊಂದು ಗಿಡ ನೆಡುವ ಅವಕಾಶ ನೀಡಲಾಗಿದೆ. ಕುಟುಂಬದವರು ಪತ್ರಿ ಗಿಡವನ್ನು ನೆಟ್ಟು ಅದರ ಸಂರಕ್ಷಣೆಗಾಗಿ ₹ 7500 ವಂತಿಗೆ ನೀಡಿದರೆ, ಅವರ ಹೆಸರ ಮೇಲೆ ಆ ಗಿಡವನ್ನು ಬೆಳೆಸಲಾಗುವುದು. ನೀವು ನೆಟ್ಟು ಬೆಳೆಸಿದ ಗಿಡದ ಪತ್ರಿದಳವನ್ನೇ ಶಂಭುಲಿಂಗನಿಗೆ ಅರ್ಪಿಸಲಾಗುವುದು. ಶಂಭುಲಿಂಗನ ಪೂಜೆಯ ನೀರನ್ನೇ ಗಿಡಗಳಿಗೆ ಹಾಕಿ ಬೆಳೆಸಲಾಗುವುದು ಎಂದರು.
ಬಿಡಿಸಿಸಿ ನಿರ್ದೇಶಕ ಪಂಚನಗೌಡ ದ್ಯಾವನಗೌಡ ಮಾತನಾಡಿ, ಶ್ರೀಗಳು ಪೀಠಾಧೀಶರಾದ ನಂತರ ಜಪ, ತಪ ಹಾಗೂ ಅವರ ಜ್ಞಾನ ಸಂಪಾದನೆ ಜತೆಗೆ ಭಕ್ತರ ಏಳ್ಗೆಗಾಗಿ ಅವರು ಪಡುತ್ತಿರುವ ಕಷ್ಟ ಹೇಳತೀರದಾಗಿದೆ. ಹೀಗಾಗಿಯೇ ಅವರ ಹತ್ತಿರ ಭಕ್ತ ಸಾಗರ ಹರಿದು ಬರುತ್ತಿದೆ. 2016ರಲ್ಲಿ ಮಹದಾಯಿ ಹೋರಾಟಕ್ಕೆ ಶಕ್ತಿ ತುಂಬಿದ್ದೇ ಶ್ರೀಗಳು. ಸುತ್ತಲಿನ ಗ್ರಾಮದ ಭಕ್ತರಿಗೆ ಶ್ರೀಗಳೆಂದರೆ ಪಂಚಪ್ರಾಣ ಎಂದು ಹೇಳಿದರು.ವೇದಿಕೆಯಲ್ಲಿ ಶಿರೋಳ ಗ್ರಾಮದ ಪ್ರಭಾಕರ ಉಳ್ಳಾಗಡ್ಡಿ ಹಾಗೂ ಹೊಳೆಆಲೂರಿನ ಸಹಶಿಕ್ಷಕ ಹೊಳೆಬಸಪ್ಪ ಬ್ಯಾಡಗಿ ಅವರನ್ನು ಶ್ರೀಮಠದಿಂದ ಬಿಲ್ವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.