ರಾಣಿಬೆನ್ನೂರು: ಕೃಷಿಯಲ್ಲಿ ರೈತರು ಆದಾಯಕ್ಕಿಂತ ಖರ್ಚು ಹೆಚ್ಚು ಮಾಡುತ್ತಾರೆ. ಹೀಗಾಗಿ ಕೃಷಿಯೇ ಬೇಡ ಅನ್ನುವ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡು ನಷ್ಟ ಅನುಭವಿಸುವ ಜತೆಗೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಅವರಿಗೆಲ್ಲ ಅಪವಾದ ಎನ್ನುವಂತೆ ತಾಲೂಕಿನ ಅಸುಂಡಿ ಗ್ರಾಮದ ರೈತ ಮಹದೇವಪ್ಪ ನೆಗಳೂರು ತಮ್ಮ ಎರಡು ಎಕರೆ ಜಮೀನಿನಲ್ಲಿ ಸಹಜ ಕೃಷಿ ಅಳವಡಿಸಿಕೊಂಡು ಆದಾಯ ದ್ವಿಗುಣ ಮಾಡಿಕೊಂಡಿದ್ದಾರೆ.
ತಮ್ಮ ಎರಡು ಎಕರೆಯಲ್ಲಿ 12 ವಿವಿಧ ಬೆಳೆ ಹಾಗೂ ತರಕಾರಿ ಬೆಳೆದು ಉತ್ತಮ ಇಳುವರಿ ಪಡೆದಿದ್ದಾರೆ. ಮಣ್ಣಿನಲ್ಲಿ ಸಾರಜನಕ, ರಂಜಕ, ಇಂಗಾಲದ ಮೂಲಕ ಭೂಮಿ ಫಲವತ್ತತೆಯನ್ನು ಎರಡು ವರ್ಷದಿಂದ ಹೆಚ್ಚಿಸಿಕೊಂಡಿದ್ದಾರೆ. ಈಗ ಉತ್ತಮ ಆದಾಯ ತರುವ ಬೆಳೆ ಬೆಳೆದು ಮಾದರಿ ರೈತರಾಗಿದ್ದಾರೆ. ಯಾವುದೇ ರಾಸಾಯನಿಕ ಹಾಗೂ ಕ್ರಿಮಿನಾಶಕ ಬಳಸದೆ ಖರ್ಚು ಕಡಿಮೆ ಮಾಡಲು ಎರೆಹುಳು ತೊಟ್ಟಿ ಮಾಡಿ, ಅದರಿಂದ 60- 70 ಚೀಲ ಗೊಬ್ಬರ ಮಾಡಿಕೊಂಡಿದ್ದಾರೆ.
ಕೊಟ್ಟಿಗೆ ಗೊಬ್ಬರ, ಜೀವಾಮೃತ, ಜೈವಿಕ ಕೀಟನಾಶಕಗಳನ್ನು ಬಳಸಿ ಯಾವುದೇ ರೀತಿ ಹೆಚ್ಚಿನ ಖರ್ಚು ಮಾಡದೇ ನೇರ ಮಾರುಕಟ್ಟೆಯಲ್ಲಿ ತಮ್ಮ ಬೆಳೆಗಳನ್ನು ಮಾರಿಕೊಳ್ಳುತ್ತಾರೆ. ಪ್ರತಿ ವಾರ ಅವರು 200 ತೆಂಗು, ಮೂರೂವರೆ ಕ್ವಿಂಟಲ್ ಒಣ ಕೊಬ್ಬರಿ ಮಾರಾಟಕ್ಕೆ ಸಿದ್ಧಪಡಿಸುತ್ತಾರೆ.ಏನಿದು ಸಹಜ ಕೃಷಿ?: ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸದೇ ಮಣ್ಣಿನ ಫಲವತ್ತತೆ ಹೆಚ್ಚಿಸಿ, ಪರಿಸರಕ್ಕೆ ಹಾನಿಯಾಗದಂತೆ ಬೆಳೆಗಳನ್ನು ಬೆಳೆಯುವ ಒಂದು ಪದ್ಧತಿಯಾಗಿದೆ. ಇದು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಮತ್ತು ಆರೋಗ್ಯಕರ ಜೀವನ ನಡೆಸಲು ಸಹಾಯ ಮಾಡುತ್ತದೆ.