ಕೆರೆಯ ಮಣ್ಣಿಗಾಗಿ ವಿಷದ ಬಾಟಲ್ ತಂದ ರೈತ

KannadaprabhaNewsNetwork |  
Published : Jan 07, 2026, 01:15 AM IST
ಫೋಟೋ ಇದೆ  :- 6 ಕೆಜಿಎಲ್ 1 :  ಕಿತ್ನಾ ಮಂಗಲ ಕೆರೆಯಲ್ಲಿ ಮಣ್ಣಿನ ಉಳಿವಿಗಾಗಿ ಪ್ರತಿಭಟನೆ ನಡೆಸುತ್ತಿರುವ ಸ್ಥಳೀಯ ರೈತರು | Kannada Prabha

ಸಾರಾಂಶ

ತಾಲೂಕಿನ ಕಿತ್ನಾಮಂಗಲ ಕೆರೆಯ ಮಣ್ಣನ್ನು ಖಾಸಗಿ ಅವರಿಗೆ ನೀಡದಂತೆ ರೈತರಿಗೆ ನೀಡಬೇಕೆಂದು ಒತ್ತಾಯಿಸಿ ಮುಖಂಡ ಕುಲುಮೇಪಾಳ್ಯ ಶಿವಣ್ಣ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತನೊಬ್ಬ ವಿಷದ ಬಾಟಲ್ ಪ್ರದರ್ಶನ ಮಾಡಿದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಕುಣಿಗಲ್ ತಾಲೂಕಿನ ಕಿತ್ನಾಮಂಗಲ ಕೆರೆಯ ಮಣ್ಣನ್ನು ಖಾಸಗಿ ಅವರಿಗೆ ನೀಡದಂತೆ ರೈತರಿಗೆ ನೀಡಬೇಕೆಂದು ಒತ್ತಾಯಿಸಿ ಮುಖಂಡ ಕುಲುಮೇಪಾಳ್ಯ ಶಿವಣ್ಣ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತನೊಬ್ಬ ವಿಷದ ಬಾಟಲ್ ಪ್ರದರ್ಶನ ಮಾಡಿದ ಘಟನೆ ನಡೆದಿದೆ. ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಶಿವಣ್ಣ, 400 ಎಕರೆ ಪ್ರದೇಶದಲ್ಲಿ ಇರುವಂತಹ ಕಿತ್ತಾಮಂಗಲ ಕೆರೆಯಿಂದ ಖಾಸಗಿ ವಿನ್ನರ್ ಬರ್ಗರ್ ಕಂಪನಿಗೆ ಇಟ್ಟಿಗೆ ತಯಾರಿಸಲು ಮಣ್ಣನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಸ್ಥಳೀಯ ರೈತರು ಮಣ್ಣು ತುಂಬಲು ಹೋದರೆ ಅಧಿಕಾರಿಗಳು ಮತ್ತು ಪೊಲೀಸರು ಅವರನ್ನು ತಡೆದು ದಂಡ ವಿಧಿಸುತ್ತಾರೆ. ಹುತ್ರಿದುರ್ಗ ಹೆಸರಿನಲ್ಲಿ ಮಾಗಡಿಗೆ ನೀರು ತೆಗೆದುಕೊಂಡು ಹೋಗುತ್ತಿರುವ ಶಾಸಕರು ಕಿತ್ನಾಮಂಗಲ ಕೆರೆಗೆ ನೀರು ತುಂಬಿಸದೆ ತಮ್ಮ ಹಿಂಬಾಲಕರಿಗೆ ಮಣ್ಣನ್ನು ಮಾರುವ ದಂಧೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದರ ಬದಲಾಗಿ ರೈತರಿಗೆ ಅವಕಾಶ ನೀಡಿ ವಿನ್ನರ್ ಬರ್ಗರ್ ಕಂಪನಿಗೆ ಮಣ್ಣು ಕೊಡುವುದನ್ನು ನಿಲ್ಲಿಸಿ ಎಂದರು. ಕುಣಿಗಲ್ ತಾಲೂಕಿನಲ್ಲಿ ದೊಡ್ಡಕೆರೆಗಳಲ್ಲಿ ಒಂದಾದ ಕಿತ್ನಾಮಂಗಲ ಕೆರೆ ಸುತ್ತಲೂ ಹತ್ತಾರು ಗ್ರಾಮದ ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಕೆರೆ ಬರಿದಾಗಿದೆ. ಇಂತಹ ಕೆರೆಗೆ ನೀರು ತುಂಬಿಸುವ ಕೆಲಸವನ್ನು ಕುಣಿಗಲ್ ಶಾಸಕರು ಮಾಡದೆ ತಾರತಮ್ಯ ಮಾಡುತ್ತಿದ್ದಾರೆ. ನೀರಿನ ರಾಜಕೀಯವನ್ನು ಮಾಡುವುದಾದರೆ ಕುಣಿಗಲ್ ಜನತೆಗೆ ಮೊದಲು ನೀರು ನೀಡಿ. ತಮ್ಮದೇ ಸರ್ಕಾರವಿದೆ ಉಪಮುಖ್ಯಮಂತ್ರಿ ನೀರಾವರಿ ಸಚಿವರು ಹಾಗೂ ಶಾಸಕರ ಅಧಿಕಾರ ತಮ್ಮಲ್ಲಿದೆ. ಆದ್ದರಿಂದ ಅದನ್ನು ಬಳಸಿಕೊಂಡು ಸಂಪೂರ್ಣವಾದ ನೀರಾವರಿ ಯೋಜನೆಗಳನ್ನು ಸಿದ್ಧಪಡಿಸಬೇಕು. ಸಾವಿರಾರು ಕೋಟಿಗಳನ್ನು ಲಿಂಕ್ ಕೆನಾಲ್ಗೆ ಬಿಡುಗಡೆ ಮಾಡಿಸುವ ಕುಣಿಗಲ್ ಶಾಸಕರು ಹುತ್ರಿದುರ್ಗ ಭಾಗದ ಕೆರೆಗಳ ಅಭಿವೃದ್ಧಿ ಹಾಗೂ ಆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ನೂರಾರು ಕೋಟಿಗಳನ್ನು ಬಿಡುಗಡೆ ಮಾಡುವ ಶಕ್ತಿ ಅವರಿಗಿದೆ ಆದ್ದರಿಂದ ಆ ಕೆಲಸವನ್ನು ಮಾಡಬೇಕೆಂದರು. ವಿನ್ನರ್ ಬರ್ಗರ್ ಕಂಪನಿಗೆ ಸರ್ಕಾರ ಇವರು ನೀಡಿರುವ ಎರಡು ಅಡಿಗಳಷ್ಟು ಮಣ್ಣನ್ನು ಮಾತ್ರ ತೆಗೆಯಬೇಕು ಆದರೆ ಐದು ಅಡಿಗಿಂತ ಹೆಚ್ಚು ಮಣ್ಣನ್ನು ತೆಗೆಯುತ್ತಿದ್ದಾರೆ. ಜೊತೆಗೆ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಅದನ್ನು ಪ್ರಶ್ನಿಸಲು ಹೋದರೆ ಅಧಿಕಾರ ಬಳಸಿಕೊಂಡು ರೈತರ ಮೇಲೆ ಪೊಲೀಸರು ದಂಡ ಮತ್ತು ಪ್ರಕರಣಗಳನ್ನು ಹಾಕುವ ರೀತಿ ಎದುರಿಸುತ್ತಾರೆ ಎಂದರು. ರಾತ್ರಿ ವೇಳೆಯಲ್ಲಿ ಕೆರೆಯಿಂದ ಮಣ್ಣನ್ನು ತುಂಬುತ್ತಾರೆ ಈ ಸಂದರ್ಭದಲ್ಲಿ ಅಕ್ಕಪಕ್ಕದ ರೈತರು ಪ್ರಶ್ನಿಸಿದರೆ ಅವರ ಮೇಲೆ ಲಾರಿ ಹತ್ತಿಸುತ್ತೇವೆ ಎಂದು ಹೆದರಿಸುತ್ತಾರೆ. ಆಡಳಿತ ವ್ಯವಸ್ಥೆ ಯಾವ ಮಟ್ಟಕ್ಕೆ ಹೋಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಲವಾರು ರೈತರು ನಾವು ವಿಷ ಕುಡಿದು ಪ್ರಾಣ ಬಿಡುತ್ತೇವೆ. ಕೆರೆಯ ಒಂದು ಹಿಡಿ ಮಣ್ಣನ್ನು ವಿನ್ನರ್ ಬರ್ಗರ್ ಕಂಪನಿಗೆ ನೀಡುವುದಿಲ್ಲ. ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ತಕ್ಷಣ ಮಣ್ಣು ಸರಬರಾಜನ್ನು ನಿಲ್ಲಿಸದಿದ್ದರೆ ಗಣರಾಜ್ಯೋತ್ಸವದ ದಿನ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಗುಜ್ಜನಹಳ್ಳಿ ಕುಮಾರ್ ಬ್ರಹ್ಮ ಕುಮಾರ್ ಪುಟ್ಟಣ್ಣ ದೊಡ್ಡ ಪಾಪ ಜಯರಾಮ ಕಾಡುಮತ್ತೀಕೆರೆ ಗಂಗಾಧರ್ ಕೃಷ್ಣಪ್ಪ ರವಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ