ಚಳ್ಳಕೆರೆ: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದುವರೆಗೂ ರೈತರಿಗೆ ನೀಡಿದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಕೇವಲ ಸುಳ್ಳು ಆಶ್ವಾಸನೆ ಭರವಸೆಗಳ ಮೂಲಕ ರೈತರನ್ನು ನಿರಾಸೆಗೊಳಿತ್ತಿದೆ. ಇನ್ನೂ ಕೆಲವೇ ತಿಂಗಳಲ್ಲಿ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗಳು ನಡೆಯುವ ಸಂಭವವಿದ್ದು, ಭದ್ರಾನೀರು ಹರಿಸುವ ಆಮಿಷವೊಡ್ಡಿ ಮತ್ತೆ ರೈತರನ್ನು ವಂಚಿಸುತ್ತಿದೆ. ಇದರ ವಿರುದ್ಧ ಶ್ರೀಘ್ರದಲ್ಲೇ ಜಿಲ್ಲಾಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ತಿಳಿಸಿದರು.
ರೈತ ಸಂಘ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಬೆಳೆವಿಮೆ, ಬೆಳೆನಷ್ಟ, ತೊಗರಿ ಬೆಳೆಗಾರರಿಗೆ ಪರಿಹಾರ, ವಿದ್ಯುತ್ ಖಾಸಗೀಕರಣ, ಬೆಂಬಲ ಬೆಲೆ, ಭದ್ರಾಮೇಲ್ದಂಡೆ ಯೋಜನೆ ಶೀಘ್ರಜಾರಿ ಮುಂತಾದ ಬೇಡಿಕೆಗಳ ಬಗ್ಗೆ ನಿರಂತರ ಹೋರಾಟ ನಡೆಸಿದರೂ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೃಷಿ ಸಚಿವರು ಸುಳ್ಳು ಭರವಸೆ ನೀಡುವುದಲ್ಲದೆ, ಅಧಿಕಾರಿಗಳ ಮೂಲಕವೂ ಸುಳ್ಳು ಆಶ್ವಾಸನೆಕೊಡಿಸಿ ರೈತರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ದೂರಿದರು.
ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಕರ್ನಾಟಕ ರಾಜ್ಯ ರೈತ ಸಂಘ ರೈತರ ಸಮಸ್ಯೆ ನಿವಾರಣೆಗೆ ರೈತರಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳ ಬಗ್ಗೆ ಹೋರಾಟ ನಡೆಸುತ್ತಲೇ ಬಂದಿದೆ. ಪ್ರತಿಯೊಂದು ಹಂತದಲ್ಲೂ ಸರ್ಕಾರದ ವಿರುದ್ಧ ಹೋರಾಟ ನಡೆಸಿದ ಸಂದರ್ಭದಲ್ಲಿ ಸುಳ್ಳು ಭರವಸೆ ನೀಡಿ ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಆದರೆ, ಈ ಬಾರಿ ಸರ್ಕಾರದ ವಿರುದ್ಧ ರೈತರು ಸಿಡಿದ್ದೆದಿದ್ದು, ಶೀಘ್ರದಲ್ಲೇ ರೈತರ ಬೃಹತ್ ಅಂದೋಲನ ನಡೆಸಲಾಗುವುದು. ರೈತರ ಅಂದೋಲನ ಯಶಸ್ವಿಗೊಳಿಸಲು ಎಲ್ಲಾ ರೈತರು ಸಂಘಟನೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಜಿಲ್ಲಾ ಕಾರ್ಯದರ್ಶಿ ಹಿರೇಹಳ್ಳಿರ‍್ರಿಸ್ವಾಮಿ, ತಾಲೂಕು ಅಧ್ಯಕ್ಷ ರಾಜಣ್ಣ, ಜಯಣ್ಣ, ಓಬಯ್ಯ, ಸಣ್ಣಪಾಲಯ್ಯ, ರಘು, ಈರಣ್ಣ, ಕೆಆರ್‌ಎಸ್ ಪಕ್ಷದ ರಾಜ್ಯ ನಿರ್ವಾಹಕ ನಗರಂಗೆರೆ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.