ರೋಣ: ಬಿತ್ತನೆ ಬೀಜ, ಗೊಬ್ಬರ ಹಾಗೂ ಕೃಷಿ ಪರಿಕರಣಗಳ ದಾಸ್ತಾನು ಮಾಡಲು ರೋಣದಲ್ಲಿ ₹2.25 ಕೋಟಿ ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರ(ಆರ್‌ಎಸ್‌ಕೆ) ಉಗ್ರಾಣ ನಿರ್ಮಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
ಭಾನುವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಿಪಂ, ತಾಪಂ ಕೃಷಿ ಇಲಾಖೆ ವತಿಯಿಂದ 2025- 26ನೇ ಸಾಲಿನ ಹಿಂಗಾರು ಹಂಗಾಮಿನ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆಯಡಿ ಜರುಗಿದ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅತಿವೃಷ್ಟಿಯಿಂದಾದ ಬೆಳೆಹಾನಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸರ್ಕಾರ ಮುಂದಾಗಿದೆ. ಈ ಕುರಿತು ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷ ರೋಣ ಕ್ಷೇತ್ರಕ್ಕೆ 125 ಕೃಷಿಹೊಂಡ ಮಂಜೂರು ಮಾಡಲಾಗಿತ್ತು. ಅದೇ ರೀತಿ ಪ್ರಸಕ್ತ ಸಾಲಿನಲ್ಲೂ 125 ಕೃಷಿಹೊಂಡ ಮಂಜೂರು ಮಾಡಲಾಗಿದೆ. ರೈತರು ಇದರ ಸದುಪಯೋಗ ಪಡೆಯಬೇಕು. 2 ದಿನದಲ್ಲಿ ಬೆಂಬಲ ಬೆಲೆಯಲ್ಲಿ ಹೆಸರು ಖರೀದಿ ಕೇಂದ್ರ ಪ್ರಾರಂಭ ಮಾಡಲಾಗುವುದು. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.
ಕಳೆದ ವರ್ಷದಂತೆಯೇ ಆಯಾ ಕೇಂದ್ರಗಳ ಮೂಲಕವೇ ಹೆಸರು ಖರೀದಿ ಮಾಡಲಾಗುವುದು. ಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಕೆಲ ಅಂಗಡಿಕಾರರು ನಿಗದಿತ ದರಕ್ಕಿಂತ ಹಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು, ಹಾಗೇನಾದರೂ ಕಂಡುಬಂದಲ್ಲಿ ಅಂತಹ ಅಂಗಡಿಕಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್ ತಹಶೀಲ್ದಾರ ಮಾತನಾಡಿ, ರೋಣ ತಾಲೂಕು ಒಟ್ಟು 1,20,000 ಹೆಕ್ಟೇರ್ ಬಿತ್ತನೆ ಪ್ರದೇಶ ಹೊಂದಿದ್ದು, ಪ್ರಸಕ್ತ ಹಿಂಗಾರು ಬಿತ್ತನೆ 60 ಸಾವಿರ ಹೆಕ್ಟೇರ್ ಗುರಿ ಹೊಂದಲಾಗಿದ್ದು, ಅತಿವೃಷ್ಟಿಯಿಂದಾಗಿ ತಾಲೂಕಿನ 27 ಸಾವಿರದ 500 ಹೆಕ್ಟೇರ್ ಬೆಳೆಹಾನಿಯಾಗಿದ್ದು, ಗಜೇಂದ್ರಗಡ ತಾಲೂಕಿನ 13 ಸಾವಿರದ 700 ಹೆಕ್ಟೇರ್ ಬೆಳೆಹಾನಿಯಾಗಿದೆ. ಹೆಚ್ಚುವರಿ 950 ಹೆಕ್ಟೇರ್ ಬಿತ್ತನೆ ಭೂಮಿಯನ್ನು ಕೂಡ ಹಾನಿಗೆ ಒಳಗಾದ ಪಟ್ಟಿಗೆ ಸೇರಿಸಲಾಗಿದೆ. ಪ್ರಸಕ್ತ ಹಂಗಾಮಿನಲ್ಲಿ ಬಿತ್ತನೆಗೆ ಬೇಕಾದ ಕಡಲೆ, ಜೋಳ ಮುಂತಾದ ಬೀಜ, ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಶೆಟ್ಟರ್, ಕೃಷಿ ಸಮಾಜ ಜಿಲ್ಲಾ ಉಪಾಧ್ಯಕ್ಷ ಸಂಗನಬಸಪ್ಪ ಪರಡ್ಡಿ, ಶಿವನಗೌಡ ಪಾಟೀಲ, ಮಹೇಶ ದಾನರಡ್ಡಿ, ಕುಮಾರ ಯಂಡಿಗೇರಿ, ಶಂಕರ ಕಳಿಗಣ್ಣವರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಮೇಶ ಪಲ್ಲೇದ, ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ, ವಸಂತ ಹುಲ್ಲೂರ, ಶರಣಪ್ಪ ಮೇಟಿ, ಪರಶುರಾಮ ಅಳಗವಾಡಿ, ಮೇಘರಾಜ ಬಾವಿ, ಯುಸೂಫ್ ಇಟಗಿ, ಬಸವರಾಜ ಉಮಚಗಿ, ಪ್ರಮೋದ ಕುಲಕರ್ಣಿ, ಸಹಾಯಕ ಕೃಷಿ ನಿರ್ದೇಶಕ, ಎಸ್.ಎಫ್. ತಹಶೀಲ್ದಾರ, ಮುತ್ತಣ್ಣಗೌಡ ಚೌಡರಡ್ಡಿ, ಮಲ್ಲಣ್ಣ ಮೇಟಿ, ಮೀನಾಕ್ಷಿ ಬಾವಿ ಉಪಸ್ಥಿತರಿದ್ದರು. ಶಿವಪುತ್ರಪ್ಪ ದೊಡ್ಡಮನಿ ಸ್ವಾಗತಿಸಿದರು. ಬಸವರಾಜ ಗದಗಿನ ನಿರೂಪಿಸಿದರು.