ಪಿತ್ರಾರ್ಜಿತ ಜಮೀನು ಉಳಿಸಿಕೊಡಲು ರೈತ ಕುಟುಂಬ ಮನವಿ

KannadaprabhaNewsNetwork |  
Published : May 07, 2026, 01:15 AM IST
6ಕೆಆರ್ ಎಂಎನ್ 1.ಜೆಪಿಜಿಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನೊಂದ ರೈತ ಕುಟುಂಬ | Kannada Prabha

ಸಾರಾಂಶ

ರಾಮನಗರ: ಪಿತ್ರಾರ್ಜಿತವಾಗಿ ಬಂದ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳೇ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರಭಾರೆ ಮಾಡಲು ಹೊರಟಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ನಮ್ಮ ಭೂಮಿ ಹಕ್ಕು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ನೊಂದ ರೈತ ಕುಟುಂಬದವರು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು

ರಾಮನಗರ: ಪಿತ್ರಾರ್ಜಿತವಾಗಿ ಬಂದ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳೇ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರಭಾರೆ ಮಾಡಲು ಹೊರಟಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ನಮ್ಮ ಭೂಮಿ ಹಕ್ಕು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ನೊಂದ ರೈತ ಕುಟುಂಬದವರು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಕುಟುಂಬದ ಸುರೇಂದ್ರ, ರಾಮನಗರ ತಾಲೂಕು ಕಸಬಾ ಹೋಬಳಿ ಗ್ರಾಮ ಲೆಕ್ಕಾಧಿಕಾರಿ ಅಜಯ್ ಕುಮಾರ್, ರಾಜಸ್ವ ನಿರೀಕ್ಷಕ ನಾಗರಾಜು, ಸರ್ವೆ ಅಧಿಕಾರಿ ವಿ.ಎಂ.ಮಹೇಶ್ ಹಾಗೂ ಎಡಿಎಲ್ ಆರ್ ಸಚಿನ್ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ನಕಲಿ ದಾಖಲಾತಿ ಸೃಷ್ಟಿಸಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಅವರೆಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಕಸಬಾ-1 ಹೋಬಳಿ ಹಳ್ಳಿಮಾಳ ದಾಖ್ಲೆ ತಿಬ್ಬೇಗೌಡನದೊಡ್ಡಿ ಗ್ರಾಮದ ಸರ್ವೆ ನಂ.178-8 ರಲ್ಲಿ ಖರಾಬು 0.03 ಗುಂಟೆ ಸೇರಿ ಒಟ್ಟು 0.25 ಗುಂಟೆ ಜಮೀನು ಪಿತ್ರಾರ್ಜಿತವಾಗಿ ಬಂದ ಸ್ವತ್ತಾಗಿದೆ. ನಮ್ಮ ತಾತನವರಾದ ತಿಬ್ಬೇಗೌಡರ ಅವರ ಜೀವಿತ ಕಾಲದಲ್ಲಿ 1934ರ ಜುಲೈ 2ರಂದು ನೋಂದಣಿ ಕ್ರಯ ಪತ್ರದ ಸಂಖ್ಯೆ 12/34-35 ರ ಮೂಲಕ ಮೆರವೇಗೌಡ ಬಿನ್ ತಿಬ್ಬೇಗೌಡ ಅವರಿಂದ ನೊಂದಣಿ ಕ್ರಯ ಪತ್ರದ ಮೂಲಕ ಕ್ರಯಕ್ಕೆ ಸ್ವಾಧೀನಾನುಭವದಲ್ಲಿದ್ದು, ನಮ್ಮ ಕುಟುಂಬವೇ ವ್ಯವಸಾಯ ಮಾಡಿಕೊಂಡು ಬರುತ್ತಿದೆ ಎಂದರು.

ಜಮೀನು ಮೆರವೇಗೌಡ ಬಿನ್‌ ತಿಬ್ಬೇಗೌಡರವರು 1934ರ ಜುಲೈ 29ರಲ್ಲಿ ನೋಂದಣಿ ಕ್ರಯ ಪತ್ರ ಸಂಖ್ಯೆ 181/1934ರಲ್ಲಿ ಹೊನ್ನಕಂಬ, ಚಿಕ್ಕ ಹೊನ್ನಕಂಬ ಅಲಿಯಾಸ್ ಗೋವಿಂದ ಹರಿ, ಚಿಕ್ಕ ಅವರಿಂದ ಕ್ರಯಕ್ಕೆ ಪಡೆದ ಸ್ವತ್ತಾಗಿದೆ. ಈಗ ಅವರ ಮೊಮ್ಮಗನಾದ ನಾರಾಯಣ, ಆತನ ಪತ್ನಿ ಪದ್ಮಾ ಎಂಬುವರು ಕಂದಾಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಲಪಟಾಯಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಜಮೀನಿನ ಮೇಲೆ ಹಕ್ಕು ಬಾಧ್ಯತೆ ಇಲ್ಲದಿದ್ದರೂ ನಾರಾಯಣ ಮತ್ತು ಪದ್ಮಾಗ್ರಾಮ ಲೆಕ್ಕಾಧಿಕಾರಿ ಮತ್ತು ರಾಜಸ್ವ ನಿರೀಕ್ಷಕರ ಜೊತೆ ಶಾಮೀಲಾಗಿ ಸುಳ್ಳು ಪಹಣಿ ಸೃಷ್ಟಿಸಿದ್ದಾರೆ. ಅದರ ಆಧಾರದ ಮೇಲೆ ಸಂಬಂಧಪಟ್ಟ ತಾಲೂಕು ಸರ್ವೆ ಅಧಿಕಾರಿಗಳಿಗೆ ಹದ್ದುಬಸ್ತು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರ ತಿಳಿದು ನಮ್ಮ ಕುಟುಂಬ ತಕರಾರು ಅರ್ಜಿ ಸಲ್ಲಿಸಿದೆ.

ಅಲ್ಲದೆ, ಖಾತಾ ವರ್ಗಾವಣೆ ಮಾಡಿಸಿಕೊಂಡು ಜಮೀನನ್ನು ಕಾನೂನು ಬಾಹಿರವಾಗಿ ಅಕ್ರಮವಾಗಿ ಮಾರಾಟ ಮಾಡಲೂ ಪ್ರಯತ್ನಿಸಿದ ಹಿನ್ನೆಲೆಯಲ್ಲಿ ರಾಮನಗರದ ಹಿರಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಶಾಶ್ವತ ತಡೆಯಾಜ್ಞೆ ಹಾಗೂ ಇನ್ನಿತರ ಪರಿಹಾರ ಕೋರಿ ದಾವೆ ಹೂಡಿರುವುದಾಗಿ ಸುರೇಂದ್ರ ಹೇಳಿದರು.

ನಮ್ಮ ಜಮೀನಿನಲ್ಲಿ ಸೀಮೆ ಹುಲ್ಲುಕಡ್ಡಿ ನೆಡುತ್ತಿರುವಾಗಿ ಅಕ್ರಮವಾಗಿ ಪ್ರವೇಶಿಸಿದ ನಾರಾಯಣ ಮತ್ತು ಪದ್ಮಾ ಅವಾಚ್ಯ ಶಬ್ಧಗಳಿಂದ ನಿಂದಿಸಿದರಲ್ಲಗೆ, ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರೂ ಸ್ವೀಕರಿಸುತ್ತಿಲ್ಲ. ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳೆಲ್ಲರು ಈ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆಯಿದೆ ಎಂದರು.

ಪಿತ್ರಾರ್ಜಿತ ಜಮೀನನ್ನು ಲಪಟಾಯಿಸಲು ಹುನ್ನಾರ ನಡೆಸಿ ಅಕ್ರಮದಲ್ಲಿ ಭಾಗಿಯಾಗಿರುವ ನಾರಾಯಣ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ನಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕೆಂದು ಸುರೇಂದ್ರ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅರುಣ್ ಕುಮಾರ್, ಉಮಾ, ಶಿವಮ್ಮ, ಹರ್ಷವರ್ಧನ್ ಮತ್ತಿತರರು ಹಾಜರಿದ್ದರು.

6ಕೆಆರ್ ಎಂಎನ್ 1.ಜೆಪಿಜಿ

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನೊಂದ ರೈತ ಕುಟುಂಬ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಸೃಜನಶೀಲತೆ, ಪರಿಶ್ರಮದಲ್ಲಿ ದೇಶದ ಭವಿಷ್ಯ
ಮನುಷ್ಯನಿಗೆ ಹೃದಯ ಎಷ್ಟು ಮುಖ್ಯವೋ ಕಣ್ಣು ಅಷ್ಟೇ ಮುಖ್ಯ