ಹಗರಿಬೊಮ್ಮನಹಳ್ಳಿ: ತಾಲೂಕಿನ ಪಿಂಜಾರ್ ಹೆಗ್ಡಾಳ್ ಗ್ರಾಮದ ರೈತಪರ ಹೋರಾಟಗಾರ ಜೆ.ಎಂ. ವೀರಸಂಗಯ್ಯ ಅವರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ತಾಲೂಕಿನ ಹೆಮ್ಮೆಯಾಗಿದೆ.
೨೦೦೦ನೇ ಇಸ್ವಿಯಲ್ಲಿ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ೧೦ ಸಾವಿರ ರೈತರನ್ನು ಸೇರಿಸಿ, ಸರ್ಕಾರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಬಿಲ್ ನೀಡಿರುವುದನ್ನು ವಿರೋಧಿಸಿ ಪ್ರತಿಭಟಿಸಿ ಪ್ರತಿಭಟನಾ ಸ್ಥಳದಲ್ಲಿಯೇ ವಿದ್ಯುತ್ ಬಿಲ್‌ಗಳನ್ನು ಸುಟ್ಟುಹಾಕಿ ಸರ್ಕಾರಕ್ಕೆ ಅಂದು ಎಚ್ಚರಿಕೆ ನೀಡಿದ್ದು ನಿಜಕ್ಕೂ ರೈತಪರ ಕಾಳಜಿಯಾಗಿದೆ. ಇವರ ಹೋರಾಟದ ಫಲವಾಗಿ ೨೦೦೪ನೇ ಇಸ್ವಿಯಲ್ಲಿ ಅಂದಿನ ಸರ್ಕಾರ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್ ಮನ್ನಾ ಮಾಡಿ ಹೋರಾಟಗಾರರ ಹೋರಾಟಕ್ಕೆ ಮಣಿಯಿತು ಎಂದು ತಾಲೂಕಿನ ರೈತರು ಅತ್ಯಂತ ಹೆಮ್ಮೆಯಿಂದ ಹೇಳುತ್ತಾರೆ. ಗ್ಯಾಟ್ ಒಪ್ಪಂದ ಖಂಡಿಸಿ ಹೋರಾಟ ಮಾಡುವಾಗ ಇವರನ್ನು ಜೈಲಿಗೆ ತಳ್ಳಲಾಗಿತ್ತು. ರೈತರ ದುಸ್ಥಿತಿಗಳನ್ನು ಅತ್ಯಂತ ಹತ್ತಿರದಿಂದ ಗಮನಿಸಿದ್ದ ವೀರಸಂಗಯ್ಯ, ರೈತರಿಗೆ ಅನ್ಯಾಯವಾಗಿದ್ದು ತಿಳಿದಾಗ, ಅತ್ಯಂತ ಕಠೋರವಾಗಿ ತಮ್ಮ ಬಿಚ್ಚು ಮಾತುಗಳಿಂದ ಅಧಿಕಾರಿಗಳನ್ನು ಎಚ್ಚರಿಸುತ್ತಿದ್ದಾರೆ. ಹೋರಾಟದ ಕೆಲ ಸನ್ನಿವೇಶಗಳಲ್ಲಿ ಮಾನಸಿಕವಾಗಿ, ಆರ್ಥಿಕವಾಗಿ, ದೈಹಿಕವಾಗಿ ಜರ್ಜರಿತರಾದರೂ ವ್ಯವಸ್ಥೆಯೊಂದಿಗೆ ಹೊಂದಿಕೊಂಡವರಲ್ಲ. ರೈತನೇ ನನ್ನ ಉಸಿರು ಎನ್ನುತ್ತಿದ್ದ ವೀರಸಂಗಯ್ಯ ಅವರನ್ನು ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಖುಷಿಯ ವಿಚಾರವಾಗಿದೆ.