ರೈತನಿಗೆ ಕಾರು ಡಿಕ್ಕಿ ಹೊಡೆಸಿ ಅಮಾನವೀತೆ: ಹೆದ್ದಾರಿ ಬಂದ್‌

KannadaprabhaNewsNetwork |  
Published : Jun 19, 2025, 12:35 AM IST

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೃದ್ಧನಿಗೆ ಅಪರಿಚಿತ ಕಾರು ಡಿಕ್ಕಿ ಹೊಡೆದು, ಸುಮಾರು ದೂರ ವೃದ್ಧನನ್ನು ಎಳೆದೊಯ್ದರೂ ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಸುಮಾರು ಗಂಟೆಗಳ ಕಾಲ ಹೆದ್ದಾರಿ ತಡೆ ನಡೆಸಿದ ಘಟನೆ ತಾಲೂಕಿನ ಎಚ್.ಕಲ್ಪನಹಳ್ಳಿ ಬಳಿ ಬುಧವಾರ ಬೆಳಗ್ಗೆ ನಡೆದಿದೆ.

- ಎನ್ಎಚ್‌-48ರಲ್ಲಿ ಕಿ.ಮೀ.ಗಟ್ಟಲೇ ಸಾಲುಗಟ್ಟಿ ನಿಂತಿದ್ದ ವಾಹನಗಳು - ಎಚ್.ಕಲ್ಪನಹಳ್ಳಿ ಗ್ರಾಮಕ್ಕೆ ಕೆಳಸೇತುವೆ, ಸ್ಕೈವಾಕ್‌ಗೆ ಜನರ ಪಟ್ಟು

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೃದ್ಧನಿಗೆ ಅಪರಿಚಿತ ಕಾರು ಡಿಕ್ಕಿ ಹೊಡೆದು, ಸುಮಾರು ದೂರ ವೃದ್ಧನನ್ನು ಎಳೆದೊಯ್ದರೂ ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಸುಮಾರು ಗಂಟೆಗಳ ಕಾಲ ಹೆದ್ದಾರಿ ತಡೆ ನಡೆಸಿದ ಘಟನೆ ತಾಲೂಕಿನ ಎಚ್.ಕಲ್ಪನಹಳ್ಳಿ ಬಳಿ ಬುಧವಾರ ಬೆಳಗ್ಗೆ ನಡೆದಿದೆ.

ತಾಲೂಕಿನ ಎಚ್.ಕಲ್ಪನಹಳ್ಳಿ ನಿವಾಸಿ, ಹಿರಿಯ ರೈತರ ಶೇಷಣ್ಣ (60) ಮೃತಪಟ್ಟ ದುರ್ದೈವಿ. ಹೊಲದಿಂದ ಮನೆಗೆ ಹೊರಟಿದ್ದ ವೇಳೆ ಹೆದ್ದಾರಿಯಲ್ಲಿ ಅಪರಿಚಿತ ಕಾರು ಡಿಕ್ಕಿಯಾದಾಗ ರೈತ ಶೇಷಣ್ಣ ಕಾರಿನ ಮೇಲೆಯೇ ಬಿದ್ದಿದ್ದಾರೆ. ಆದರೂ ಚಾಲಕ ಕಾರು ನಿಲ್ಲಿಸಿ, ನೆರವಿಗೆ ಧಾವಿಸಿಲ್ಲ. ಬದಲಿಗೆ ಸುಮಾರು ದೂರಕ್ಕೆ ಕಾರು ಚಾಲನೆ ಮಾಡಿದ್ದರಿಂದಾಗಿ ಕಾರಿನ ಮೇಲಿದ್ದ ಶೇಷಣ್ಣ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದಾರೆ.

ವಿಷಯ ತಿಳಿದ ಶೇಷಣ್ಣ ಕುಟುಂಬ ವರ್ಗ, ಬಂಧು-ಬಳಗ, ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದರು. ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿ, ಸಿಬ್ಬಂದಿ ಸಹ ಸ್ಥಳಕ್ಕೆ ಆಗಮಿಸಿದರು. ಇಡೀ ಗ್ರಾಮಸ್ಥರು ಘಟನೆ ಖಂಡಿಸಿ, ರಾಷ್ಟ್ರೀಯ ಹೆದ್ದಾರಿ-48ನ್ನು ಬಂದ್ ಮಾಡಿ, ವಾಹನ ಸಂಚಾರ ತಡೆದು ಪ್ರತಿಭಟಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರಂತರವಾಗಿ ನಮ್ಮ ಊರಿಗೊಂದು ಕೆಳಸೇತುವೆ ಮಾಡಿಸುವಂತೆ ಕೇಳುತ್ತಿದ್ದರೂ ಕಿವಿಗೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಜನ-ಜಾನುವಾರುಗಳ ಸಂಚಾರಕ್ಕೆ ಅನುವಾಗುವಂತೆ ಕೆಳಸೇತುವೆ, ಸ್ಕೈ ವಾಕ್‌ ನಿರ್ಮಿಸಬೇಕು ಎಂದು ಪಟ್ಟುಹಿಡಿದರು.

ಪ್ರತಿಭಟನೆಯಿಂದಾಗಿ ಸುಮಾರು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯ ಎರಡೂ ಕಡೆ ವಾಹನಗಳು ಕಿ.ಮೀ.ಗಟ್ಟಲೇ ಸಾಲುಗಟ್ಟಿ ನಿಂತಿದ್ದರಿಂದ ಸಂಚಾರಕ್ಕೆ ವ್ಯತ್ಯಯವಾಗಿತ್ತು. ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಬದಲಿಗೆ ಗ್ರಾಮಸ್ಥರು, ಪೊಲೀಸ್ ಅಧಿಕಾರಿಗಳ ಮಧ್ಯೆ ತೀವ್ರ ಮಾತಿನ ಚಕಮಕಿಯೂ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕೆಲ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ವಾಹನಗಳ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಮುಕ್ತ ಮಾಡಿಕೊಟ್ಟರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- - -

-18ಕೆಡಿವಿಜಿ2, 3, 4. 5.ಜೆಪಿಜಿ: ದಾವಣಗೆರೆ ತಾಲೂಕಿನ ಎಚ್.ಕಲ್ಪನಹಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ-48 ದಾಟುತ್ತಿದ್ದ ಹಿರಿಯ ರೈತ ಶೇಷಣ್ಣ ಅಪರಿಚಿತ ಕಾರಿಗೆ ಬಲಿಯಾದ ಹಿನ್ನೆಲೆಯಲ್ಲಿ ಕೆಳ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟಿಸಿದರು. ವಾಹನಗಳು ಹೆದ್ದಾರಿ ಎರಡೂ ಬದಿ ಸಾಲುಗಟ್ಟಿ ನಿಂತಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!