ಕನ್ನಡಪ್ರಭ ವಾರ್ತೆ ಮದ್ದೂರು
ರಾಜ್ಯ ರೈತ ಸಂಘದ ಸಮೂಹ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ಸೇರಿದ ರೈತ ಕಾರ್ಯಕರ್ತರು ಸಚಿವ ಪಾಟೀಲ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಕಾರ್ಯಕರ್ತರ ದಿಢೀರ್ ಪ್ರತಿಭಟನೆಯಿಂದಾಗಿ ಬೆಂಗಳೂರು- ಮೈಸೂರು ಹೆದ್ದಾರಿ ಹಾಗೂ ಮದ್ದೂರು- ಮಳವಳ್ಳಿ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಂಸದೆ ಸುಮಲತಾ ಅಂಬರೀಶ್ ಹಾಗೂ ಜಿಲ್ಲೆಯ ಶಾಸಕರ ವಿರುದ್ಧ ಘೋಷಣೆ ಕೂಗಿದರು.ಇದೇ ವೇಳೆ ರೈತರ ರಸ್ತೆ ತಡೆಯನ್ನು ಭೇದಿಸಿ ಬೈಕ್ ಚಾಲನೆ ಮಾಡುತ್ತಿದ್ದ ಸವಾರನಿಗೆ ರೈತರ ಗುಂಪೊಂದು ತರಾಟೆಗೆ ತೆಗೆದುಕೊಂಡು ಹಲ್ಲೆ ನಡೆಸಿದ ಪ್ರಸಂಗವೂ ಜರುಗಿತು.
ರೈತರು ಈ ದೇಶದ ಜನರಿಗೆ ಅನ್ನ ಹಾಕುವ ಪ್ರವೃತ್ತಿ ಉಳ್ಳವರು ಹೊರತು ಬೇಡುವವರಲ್ಲ. ಇಂತಹ ರೈತ ಕುಲವನ್ನು ಟೀಕಿಸಿರುವ ಪಾಟೀಲ್ ಜನಪ್ರತಿ ನಿಧಿಯಾಗಲು ಯೋಗ್ಯರಲ್ಲ. ಇವರನ್ನು ಸಚಿವ ಸಂಪುಟದಿಂದ ಕಿತ್ತೊಗೆಯಬೇಕು ಎಂದು ಧರಣಿ ನಿರತ ರೈತ ಮುಖಂಡರು ಒತ್ತಾಯಿಸಿದರು.
ಸಚಿವರನ್ನು ಸಂಪುಟದಿಂದ ವಜಾ ಮಾಡಿದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ರೈತ ಮುಖಂಡ ಸೋಶಿ ಪ್ರಕಾಶ್ ಎಚ್ಚರಿಕೆ ನೀಡಿದರು. ನಂತರ ತಹಸೀಲ್ದಾರ್ ಸೋಮಶೇಖರ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡ ಪ್ರತಿಭಟನಾ ರೈತರು ಬೇಡಿಕೆಗಳ ಕುರಿತಂತೆ ಮನವಿ ಸಲ್ಲಿಸಿದರು.
----------ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯ
ತಹಸೀಲ್ದಾರ್‌ಗೆ ಮನವಿ, ರೈತರು ಬ್ಯಾಂಕ್‌ಗಳಿಂದ ಪಡೆದಿರುವ ಎಲ್ಲ ಸಾಲಮನ್ನಾ ಮಾಡಬೇಕು. ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ 25 ಸಾವಿರ ರು. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಹೈನುಗಾರರಿಂದ ಖರೀದಿ ಮಾಡುವ ಪ್ರತಿ ಲೀಟರ್ ಹಾಲಿನ ದರವನ್ನು ಕಡಿತ ಮಾಡಿರುವ ಮನ್ ಮುಲ್ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ಹೂಡುವಂತೆ ಪ್ರಕಾಶ್ ಆಗ್ರಹ ಪಡಿಸಿದರು.