ಕನ್ನಡಪ್ರಭ ವಾರ್ತೆ ಸೊರಬ
ಸಕ್ಕರೆ ಸಚಿವ ಶಿವಾನಂದ ಪಾಟೀಲ್ ನಿಜವಾಗಿಯೂ ರೈತನ ಮಗನಾಗಿದ್ದರೆ ರೈತವಿರೋಧಿ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ಇಂಥ ಬೇಜವಾಬ್ದಾರಿ ಸಚಿವರನ್ನು ರಾಜ್ಯ ಸರ್ಕಾರ ಸಂಪುಟದಲ್ಲಿ ಇಟ್ಟುಕೊಂಡಿದೆ. ಇದು ನಾಚಿಕೆಗೇಡಿನ ವಿಷಯ. ಇಂಥ ಸಚಿವರನ್ನು ತಕ್ಷಣ ವಜಾಗೊಳಿಸಬೇಕು ಎಂದು ರೈತ ಸಂಘ ರಾಜ್ಯ ಸಂಚಾಲಕ ಉಮೇಶ್ ಎನ್. ಪಾಟೀಲ್ ಆಗ್ರಹಿಸಿದರು.ಬುಧವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸಚಿವ ಶಿವಾನಂದ ಪಾಟೀಲ್ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡಿದರು.
ಬರಗಾಲ ಪರಿಹಾರಕ್ಕಾಗಿ ರೈತರು ಕಾಯುತ್ತಿದ್ದಾರೆ ಎಂಬ ಹೇಳಿಕೆ ನೀಡುವ ಮೂಲಕ ಸಕ್ಕರೆ ಮಂತ್ರಿ ಶಿವಾನಂದ ಪಾಟೀಲ್ ಇಡೀ ರೈತಸಮೂಹವನ್ನು ಕೆಣಕಿದ್ದಾರೆ. ಆ ಮೂಲಕ ರೈತವಿರೋಧಿತನ ಪ್ರಚುರಪಡಿಸಿದ್ದಾರೆ. ಬರಗಾಲ ಪರಿಸ್ಥಿತಿಯ ಲಾಭ ಪಡೆಯಲು ಶಿವಾನಂದ ಪಾಟೀಲ್ ಅವರಂಥ ಅಸಮರ್ಥ ಸಚಿವರು ಎಷ್ಟೆಷ್ಟು ಗಳಿಸಬಹುದು ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಸಚಿವ ಶಿವಾನಂದ ಪಾಟೀಲ್ ತಕ್ಷಣ ರಾಜಿನಾಮೆ ನೀಡಬೇಕು. ಇಲ್ಲವಾದಲ್ಲಿ ಸಚಿವ ಸಂಪುಟದಿಂದ ಮುಖ್ಯಮಂತ್ರಿ ಅವರು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.ಸಂಘದ ಕಾರ್ಯಾಧ್ಯಕ್ಷ ಎನ್.ಕೆ. ಮಂಜುನಾಥಗೌಡ ಮಾತನಾಡಿ, ರೈತರಿಗೆ ಬಿತ್ತನೆಬೀಜ, ರಸಗೊಬ್ಬರ, ನೀರು, ವಿದ್ಯುತ್ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇದನ್ನು ಶಿವಾನಂದ ಪಾಟೀಲ್ ತಮ್ಮ ವೈಯಕ್ತಿಕ ಹಣದಿಂದ ನೀಡುವುದಿಲ್ಲ. ಆದ್ದರಿಂದ ಶಿವಾನಂದ ಪಾಟೀಲ್ ರೈತರಿಗೆ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮೊದಲು ಪ್ರತಿಭಟನಾಕಾರರು ತಾಲೂಕು ಕಚೇರಿ ಎದುರು ಸಚಿವ ಶಿವಾನಂದ ಪಾಟೀಲ್ ಅವರ ವಿರುದ್ಧ ಘೋಷಣೆ ಕೂಗಿ, ಪ್ರತಿಕೃತಿ ದಹನ ಮಾಡಿದರು. ಅನಂತರ ತಹಸೀಲ್ದಾರ್ ಹುಸೇನ್ ಸರಕಾವಸ್ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಆರೇಕೊಪ್ಪ, ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಮುಖಂಡರಾದ ಯೋಗೇಶ್ ಕುಂದಗಸವಿ, ನಾಗರಾಜ ಬೆಣ್ಣಿಗೇರೆ, ಹನುಮಂತಪ್ಪ ಬಾವಿಕಟ್ಟೆ ಆನವಟ್ಟಿ ಮೊದಲಾದವರಿದ್ದರು.
- - - -27ಕೆಪಿಸೊರಬ01:ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಖಂಡಿಸಿ ಸೊರಬ ತಾಲೂಕು ಕಚೇರಿ ಎದುರು ರೈತ ಸಂಘ- ಹಸಿರು ಸೇನೆಯಿಂದ ಪ್ರತಿಕೃತಿ ದಹಿಸಿ, ಪ್ರತಿಭಟಿಸಲಾಯಿತು.