- ಕೋವಿಡ್ ಟಾಸ್ಕ್ ಪೊರ್ಸ್ ಸಭೆಯಲ್ಲಿ ತಹಸೀಲ್ದಾರ್ ಪಾಟೀಲ ಸೂಚನೆ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಹೊಸ ತಳಿಯ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ವೈದ್ಯಾಧಿಕಾರಿಗಳು ಸನ್ನದ್ಧರಾಗಬೇಕಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಾಧಿಕಾರಿಗಳೊಂದಿಗೆ ತಾಲೂಕು ಆಡಳಿತ ಕೈಜೋಡಿಸುತ್ತಿದೆ ಎಂದು ನಗರ ತಹಸೀಲ್ದಾರ್ ಕಲಗೌಡ್ರ ಪಾಟೀಲ ಹೇಳಿದರು.
ಕೋವಿಡ್‌ನ ರೂಪಾಂತರ ತಳಿ ಹರಡುವಿಕೆ ಮುಂಜಾಗೃತ ಕ್ರಮವಾಗಿ ಬುಧವಾರ ಇಲ್ಲಿನ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಏರ್ಪಡಿಸಲಾದ ಕೋವಿಡ್ ಟಾಸ್ಕ್ ಪೊರ್ಸ್ ಸಭೆಯಲ್ಲಿ ಮಾತನಾಡಿದರು.ಸುಮಾರು 3 ವರ್ಷಗಳಿಂದ ಕೊರೋನಾ ಎಂಬ ಮಹಾಮಾರಿ ಮಾನವ ಸಂಕುಲವನ್ನು ಬಾದಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೋವಿಡ್ ಸೋಂಕು ಪ್ರಪಂಚ ಸೇರಿದಂತೆ ದೇಶಾದ್ಯಂತ ಮತ್ತೆ ವ್ಯಾಪಕವಾಗಿ ಹರಡಲು ಪ್ರಾರಂಭಿಸಿದೆ.
ತಾಲೂಕಿನ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಸ್ಕ್, ಸ್ಯಾನಿಟೈಸರ್, ಪಲ್ಸ್ ಆಕ್ಸಿಮೀಟರ್, ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಕೋವಿಡ್ ಕಿಟ್‌ಗಳಲ್ಲಿ ಕೊರತೆಯಾಗದಂತೆ ಎಲ್ಲ ವೈದ್ಯಾಧಿಕಾರಿಗಳು ಮುಂಜಾಗ್ರತೆ ವಹಿಸಬೇಕು.ನಗರ ಹಾಗೂ ಗ್ರಾಮೀಣ ಸೇರಿದಂತೆ 60 ವರ್ಷ ಮೇಲ್ಪಟ್ಟವರ ಹಾಗೂ ಗರ್ಭಿಣಿಯರ ಹೆಸರನ್ನು ಪ್ರತ್ಯೇಕವಾಗಿ ಪಟ್ಟಿಮಾಡಿ ವರದಿ ಸಲ್ಲಿಸಬೇಕು. ಆಸ್ಪತ್ರೆಗೆ ಬರುವ ರೋಗಿಗಳ ತಪಾಸಣೆ ಮತ್ತು ರೋಗಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಎಚ್ಚರಿಕೆ ವಹಿಸಬೇಕು ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ ಮಾತನಾಡಿ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರಗಳನ್ನು ಹಂಚುವುದು, ಧ್ವನಿ ಮುದ್ರಿಕೆ ಅಳಡಿಕೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಸಂಜೀವಿನಿ ಸಖಿಯರ ಮೂಲಕ ಕೋವಿಡ್ ಮುಂಜಾಗೃತಿಯ ಬಗ್ಗೆ ಅರಿವು ಮೂಡಿಸಬೇಕು ಎಂದರು.ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ ಮಾತನಾಡಿ, ಅವಧಿ ಮೀರಿದ ಸ್ಯಾನಿಟೈಸರ್, ಕೋವಿಡ್ ಕಿಟ್‌ಗಳನ್ನು ಕೂಡಲೆ ತೆರವುಗೊಳಿಸಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಆ್ಯಂಬುಲೆನ್ಸ್ ಸೌಲಭ್ಯ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಾನವ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿಕೊಳ್ಳುವ ಮೂಲಕ ರೋಗಿಗಳಿಗೆ ತೊಂದರೆ ಉಂಟಾಗದಂತೆ ಜವಾಬ್ದಾರಿ ವಹಿಸಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ವಿಜಯಲಕ್ಷ್ಮೀ ಸೊಪ್ಪಿನ್ ಮಾತನಾಡಿ, ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಮುಂಜಾಗೃತಾ ಕ್ರಮಗಳನ್ನು ಅಳವಡಿಸಿಕೊಂಡಿರುವ ಕುರಿತು ಮಾಹಿತಿ ನೀಡಿದರು.ಸಭೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಎಂ.ಡಿ. ಫಾರೇಕ, ಡಾ. ಹುಲಗಣ್ಣ ಇಂಜಗರಿ, ಡಾ. ರೆಬೆಕಾ ಹೊಂಬಳ, ಡಾ. ಸೋಫಿಯಾ ದಾಸರಿ, ಡಾ. ಗೀತಾ ನಾಯ್ಕರ, ವೈದ್ಯಾಧಿಕಾರಿಗಳಾದ ಡಾ. ನೀಲಾ ಹೂಲಿ, ಡಾ. ಪ್ರಕಾಶ ನರಗುಂದ, ಡಾ. ಸತೀಶ ಶಿರಹಟ್ಟಿ, ಡಾ. ಎಸ್. ಕಟ್ಟಿ, ಡಾ. ಟಿ. ಮನಿಯಾರ, ಡಾ. ಬಸವರಾಜ ಕಮಡೊಳ್ಳಿ, ಡಾ. ದಾನಿ, ರೇಖಾ ಬಾಡಗಿ ಮತ್ತು ಸರೋಜಾ ಹಂಪಣ್ಣವರ ಸೇರಿದಂತೆ ಹಲವರು ಹಾಜರಿದ್ದರು.