ಶುದ್ಧ, ರಾಸಾಯನಿಕ ಮುಕ್ತ ಬೆಳೆ ನೀಡುತ್ತಿರುವ ರೈತ ಉತ್ಪಾದಕ ಕಂಪನಿ: ಮಹೇಶ್ ಚಂದ್ರಗುರು

KannadaprabhaNewsNetwork |  
Published : May 26, 2025, 12:28 AM IST
25ಕೆಎಂಎನ್ ಡಿ14 | Kannada Prabha

ಸಾರಾಂಶ

ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರ ಸಹಕಾರದಲ್ಲಿ ಜನರಿಗೆ ಗುಣಮಟ್ಟದ ಬೆಲ್ಲ ನೀಡುತ್ತಿದೆ. ಕೇವಲ 1000 ರು.ಗಳನ್ನು ಕೊಟ್ಟು ಸದಸ್ಯತ್ವ ಪಡೆಯುವುದು ಮುಖ್ಯವಲ್ಲ. ಆ ಸದಸ್ಯತ್ವದ ಹಣ ಬೆಳೆಯಬೇಕಾದರೆ ಕಂಪನಿಯು ತಯಾರಿಸಿ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ಉತ್ಪನ್ನಗಳನ್ನು ಕೊಂಡು ಬಳಕೆ ಮಾಡಿದಾಗ ಮಾತ್ರ ಕಂಪನಿ ಯಶಸ್ವಿಯಾಗಿ ಮುನ್ನಡೆಯುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಡಿನ ಜನರಿಗೆ ಶುದ್ಧ ಹಾಗೂ ರಾಸಾಯನಿಕ ಮುಕ್ತ ಬೆಲ್ಲ ನೀಡುತ್ತಿರುವ ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿ ಸೇವೆ ಶ್ಲಾಘನೀಯವಾಗಿದೆ ಎಂದು ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರಗುರು ಮೆಚ್ಚುಗೆ ವ್ಯಕ್ತಪಡಿಸಿದರು

ತಾಲೂಕಿನ ಜೀಗುಂಡಿಪಟ್ಟಣ ಗ್ರಾಮದಲ್ಲಿ ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿಯು ನಬಾರ್ಡ್ ಮತ್ತು ವಿಕಸನ ಸಂಸ್ಥೆ ಸಹಕಾರದಲ್ಲಿ ಆರಂಭಿಸಿದ ಕಿರೇಮಡಿ ಬೀಜ ಭಂಡಾರ ಪ್ರಾರಂಭೋತ್ಸವ ಹಾಗೂ ಷೇರುದಾರರ ಜಾಗೃತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರ ಸಹಕಾರದಲ್ಲಿ ಜನರಿಗೆ ಗುಣಮಟ್ಟದ ಬೆಲ್ಲ ನೀಡುತ್ತಿದೆ. ಕೇವಲ 1000 ರು.ಗಳನ್ನು ಕೊಟ್ಟು ಸದಸ್ಯತ್ವ ಪಡೆಯುವುದು ಮುಖ್ಯವಲ್ಲ. ಆ ಸದಸ್ಯತ್ವದ ಹಣ ಬೆಳೆಯಬೇಕಾದರೆ ಕಂಪನಿಯು ತಯಾರಿಸಿ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ಉತ್ಪನ್ನಗಳನ್ನು ಕೊಂಡು ಬಳಕೆ ಮಾಡಿದಾಗ ಮಾತ್ರ ಕಂಪನಿ ಯಶಸ್ವಿಯಾಗಿ ಮುನ್ನಡೆಯುತ್ತದೆ ಎಂದರು.

ಜಾಗತಿಕ ಮಾರುಕಟ್ಟೆಗೆ ಸವಾಲಾಗಿ ಆರಂಭಗೊಂಡಿದ್ದೆ ರೈತ ಉತ್ಪಾದಕ ಕಂಪನಿಗಳು. ಕಂಪನಿಯ ಕಾಯ್ದೆ ಅಡಿ ಷೇರುದಾರರೆ ಇದರ ಮಾಲೀಕರು. ಆ ಮಾಲೀಕರೇ ಕಂಪನಿಯ ಗ್ರಾಹಕರಾದಾಗ ಮಾತ್ರ ಕಂಪನಿಗಳು ಬಹುಕಾಲ ಯಶಸ್ವಿಯಾಗುತ್ತವೆ ಎಂದರು.

ಕಂಪನಿ ಅಧ್ಯಕ್ಷ ಕಾರಸವಾಡಿ ಮಹದೇವ್ ತಮ್ಮ ಪುತ್ರಿ ಕೆ.ಎಂ.ದೀಕ್ಷಾರ ಜನ್ಮದಿನದ ಅಂಗವಾಗಿ ಎಲ್ಲಾ ಷೇರುದಾರ ರೈತ ಬಾಂಧವರಿಗೆ ಸೀತಾಫಲ, ದಾಳಿಂಬೆ, ಹಲಸು, ಸೀಬೆ ಮತ್ತು ನೇರಳೆ ತಿಳಿಯ ಸಸಿಗಳನ್ನು ವಿತರಿಸಿ, ಕಂಪನಿ ಸ್ಥಾಪನೆಯ ಉದ್ದೇಶ, ಷೇರುದಾರರಿಗೆ ಒದಗಿಸುತ್ತಿರುವ ಸೇವೆಗಳು ಹಾಗೂ ಕಳೆದ ಮೂರು ವರ್ಷಗಳಿಂದ ಈವರೆಗೂ ಕೈಗೊಂಡಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಬಂದಿಗೌಡ ಬಡಾವಣೆಯ ಎಸ್‌ಬಿಐ ಬ್ಯಾಂಕ್‌ನ ಕೃಷಿ ಮತ್ತು ವಾಣಿಜ್ಯ ಶಾಖೆ ವ್ಯವಸ್ಥಾಪಕ ಸುರೇಶ್ ಮಾತನಾಡಿ, ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಪಿಎಂಎಫ್ಎಂಇ ಯೋಜನೆಗಳ ಮಹತ್ವ ಹಾಗೂ ರೈತ ಬಾಂಧವರಿಗೆ ಇದರಿಂದ ಆಗುವ ಪ್ರಯೋಜನ ಬಗ್ಗೆ ಮಾಹಿತಿ ನೀಡಿದರು.

ದೇಶಿ ತಳಿ ಬೀಜಗಳ ಸಂರಕ್ಷಕರಾದ ಘನಿಖಾನ್ ಕಿರುಗಾವಲು ಅವರು, ದೇಸಿ ತಳಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ - ಅವುಗಳ ಮಹತ್ವ ಹಾಗೂ ಇದರಿಂದ ರೈತ ಬಾಂಧವರಿಗೆ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

ಭಾರತೀಯ ಸ್ಟೇಟ್ ಬ್ಯಾಂಕ್ ಜಿಲ್ಲಾ ಪ್ರಾದೇಶಿಕ ವ್ಯವಸ್ಥಾಪಕರಾದ ಸುಮನ ಕೆರಗೋಡು, ಕೆರಗೋಡು ಹೋಬಳಿಯ ಕೃಷಿ ಅಧಿಕಾರಿ ದೇವರಾಜ್ ಗೌಡ, ಎಪಿಎಂಸಿ ಮಾಜಿ ನಿರ್ದೇಶಕರಾದ ಕೀಲಾರ ಕೆ.ಟಿ.ವೀರಪ್ಪ, ಆಡಳಿತ ಮಂಡಳಿ ನಿರ್ದೇಶಕರಾದ ಹಳುವಾಡಿ ಕೃಷ್ಣ, ತಮ್ಮಯ್ಯ, ಮಾರಸಿಂಗನಹಳ್ಳಿ ಪಾಪಣ್ಣ, ಧನಂಜಯ ಪಣಕನಹಳ್ಳಿ, ಮಂಗಲ ಪ್ರಕಾಶ್, ಹೊಳಲು ಸಾಕಮ್ಮ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಮಂಡ್ಯ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಸುನಿತಾ ಅಧ್ಯಕ್ಷತೆ ವಹಿಸಿದ್ದರು. ದೇಸಿ ತಳಿ ಸಂರಕ್ಷಣೆಗಾಗಿ ಕೀರೆಮಡಿ ಬೀಜ ಬ್ಯಾಂಕ್ ಅನ್ನು ಆರಂಭಿಸಲಾಯಿತು. ಎಚ್.ಮಲ್ಲಿಗೆರೆ, ಜೀಗುಂಡಿಪಟ್ಟಣ, ಬಿ.ಹೊಸೂರು, ಕೆ.ಗೌಡಗೆರೆ, ಕೀಲಾರ, ಕೆರಗೋಡು ಗ್ರಾಮಗಳ 200ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ