ಕುಂದಗೋಳ: ತಾಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬೆಳೆ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಚಿವರ ಭರವಸೆ: ನಂತರ ಮಾತನಾಡಿದ ಲಾಡ್, ಹಾನಿಯಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ. ಅವರಿಗೆ ಕೈ ಮುಗಿದು ಬೇಡಿ, ರೈತರಿಗೆ ನೆರವಾಗಲು ಸಹಕರಿಸುತ್ತೇನೆ ಎಂದು ಹೇಳಿದರು.
ನಂತರ ಶಾಸಕ ಎಂ.ಆರ್. ಪಾಟೀಲ್ ಮಾತನಾಡಿ, ತಾಲೂಕಿನಲ್ಲಿ ಸುಮಾರು 15,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಇದರಲ್ಲಿ 12,500 ಹೆಕ್ಟೇರ್‌ಗಿಂತಲೂ ಹೆಚ್ಚು ಹೆಸರು ಬೆಳೆ ಸಂಪೂರ್ಣ ನಾಶವಾಗಿದೆ. ರೈತರು ಎರಡನೇ ಬಾರಿ ಬಿತ್ತನೆ ಮಾಡಲು ಹಣವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಸರ್ಕಾರ ತಕ್ಷಣವೇ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಕೈಗೆ ಬಂದ ಬೆಳೆ ಮಳೆಗೆ ಹಾಳಾಗಿದ್ದು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೊಬ್ಬರ ಖರೀದಿಸುವಾಗ ಬೇರೆ ಕೃಷಿ ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಡ ಹೇರುತ್ತಿರುವ ವಿಷಯವನ್ನು ಸಚಿವರ ಗಮನಕ್ಕೆ ತರಲಾಗಿದೆ. ಇದಕ್ಕೆ ಸಚಿವರು ಇದೇ ತಿಂಗಳ 29ರಂದು ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ಪಾಟೀಲ್ ತಿಳಿಸಿದರು.
ಈ ವೇಳೆ ರತ್ನ ಭಾರತ ಸಮಾಜ ನವದೆಹಲಿ ಸಂಘಟನೆ ಪದಾಧಿಕಾರಿಗಳು ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ನೀಡಿದರು. ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭು, ತಹಸೀಲ್ದಾರ್ ರಾಜು ಮಾವರಕರ, ಇಒ ಜಗದೀಶ ಕಮ್ಮಾರ, ಕೆಪಿಸಿಸಿ ಸದಸ್ಯರಾದ ಚಂದ್ರಶೇಖರ ಜುಟ್ಟಲ್, ಯರಗುಪ್ಪಿ ಗ್ರಾಪಂ ಅಧ್ಯಕ್ಷ, ಭೀಮಪ್ಪ ಮಾಯಣ್ಣವರ, ಸದಸ್ಯ ಶ್ರೀಕಾಂತ ಯಕ್ಕಣ್ಣವರ, ರವಿ ಕುಂಬಾರ, ಸಲೀಂ ಕ್ಯಾಲಕೊಂಡ, ಹನುಮಂತಪ್ಪ ವಡ್ಡರ, ನಾರಾಯಣ ಸುಕಂದ, ದೇವೇಂದ್ರಪ್ಪ ಶಂಬವನಮಠ, ಮಾಬುಸಾಬ ಭದ್ರಾಪೂರ, ಹನುಮಂತಗೌಡ ಪಾಟೀಲ, ಸಲೀಂ ಕಡ್ಲಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.