ಕನ್ನಡಪ್ರಭ ವಾರ್ತೆ ಮಳವಳ್ಳಿ
ಗ್ರಾಮದ ಯುವ ರೈತ ಮನು ಅವರು ನಾಗಮಂಗಲದ ಹೂವಿನಹಳ್ಳಿಯ ಜಿಪಂ ಮಾಜಿ ಸದಸ್ಯ ಚಂದ್ರಣ್ಣ ಅವರಿಗೆ 9.01 ಲಕ್ಷ ರು.ಗೆ ಒಂದು ಜೊತೆ ಹಳ್ಳಿಕಾರ್ ಎತ್ತುಗಳನ್ನು ಮಾರಾಟ ಮಾಡಿದ್ದಾರೆ.
ಮನು ಕಳೆದ ಐದು ತಿಂಗಳ ಹಿಂದೆ ಕನಕಪುರದ ಹಾರೋಹಳ್ಳಿ ತಾಲೂಕಿನ ಸೋಮನಹಳ್ಳಿ ಶ್ರೀನಿವಾಸ್ ಅವರಿಂದ 5.90 ಲಕ್ಷ ರು.ಗೆ ಖರೀದಿಸಿದ್ದರು. ಹಳ್ಳಿಕಾರ್ ರಾಸುಗಳ ಸಾಕಾಣಿಕೆಯನ್ನು ರೂಢಿಸಿಕೊಂಡಿದ್ದ ಮನು ಅವರು ಎತ್ತುಗಳನ್ನು ಹೂವಿನಹಳ್ಳಿ ಚಂದ್ರಣ್ಣರಿಗೆ 9.01 ಲಕ್ಷ ರು.ಗೆ ಮಾರಾಟ ಮಾಡಿದ್ದಾರೆ.ಸುತ್ತಮುತ್ತಲಿನ ಗ್ರಾಮಗಳಲ್ಲೇ ಅತಿಹೆಚ್ಚು ಬೆಲೆಗೆ ಮಾರಾಟವಾದ ಹಳ್ಳಿಕಾರ್ ಎತ್ತುಗಳಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ ಮನು ಕುಟುಂಬಸ್ಥರು ನಂತರ ಚಂದ್ರಣ್ಣ ಅವರಿಗೆ ಹಸ್ತಾಂತರ ಮಾಡಿದರು. ಬಳಿಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ನಾಗಮಂಗಲದ ಚಂದ್ರಣ್ಣ ಮಾತನಾಡಿ, ಹಳ್ಳಿಕಾರ್ ಎತ್ತುಗಳು ಸಾಕಾಣಿಕೆಯಲ್ಲಿ ನಮ್ಮ ಕುಟುಂಬ ಹಿಂದಿನಿಂದಲೂ ತೊಡಗಿಸಿಕೊಂಡಿದೆ. ಮಗಳ ಮದುವೆ ಸಂದರ್ಭದಲ್ಲಿ ಮನೆಯಲ್ಲಿ ಹಳ್ಳಿಕಾರ್ ಎತ್ತುಗಳನ್ನು ಕಟ್ಟಬೇಕು ಎನ್ನುವ ದೃಷ್ಟಿಯಿಂದ ಖರೀದಿಸಿದ್ದೇವೆ. ರೈತರ ಪ್ರಗತಿಗೆ ಹಳ್ಳಿಕಾರ್ ತಳಿ ಸಹಕಾರಿಯಾಗಿದೆ ಎಂದರು.