ಕನ್ನಡಪ್ರಭ ವಾರ್ತೆ ನಾಗಮಂಗಲ
ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ತನಕ ತಾಲೂಕಿನ ಯಾವೊಂದು ಹಳ್ಳಿಯಲ್ಲಿಯೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಾಲೂಕಿನ ಎಲ್ಲಾ ಗ್ರಾಪಂ ಪಿಡಿಒಗಳಿಗೆ ಖಡಕ್ ಸೂಚನೆ ನೀಡಿದರು.ಪಟ್ಟಣದ ಕೃಷಿ ಭವನದ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ತಾಲೂಕಿನ ಎಲ್ಲಾ ಗ್ರಾಪಂಗಳ ಪಿಡಿಒ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನ ಬಹುತೇಕ ಕೆರೆ-ಕಟ್ಟೆಗಳಲ್ಲಿ ನೀರು ತುಂಬಿರುವುದರಿಂದ ಮುಂದಿನ ಮೂರ್ನಾಲ್ಕು ತಿಂಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಆದರೂ ಕೂಡ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಲ್ಲ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು ಎಂದರು.ಸಕಾಲದಲ್ಲಿ ಹಣ ಪಾವತಿಸಿ:
ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಬೋರ್‌ವೆಲ್‌ಗಳಲ್ಲಿ ನೀರು ಬಾರದಿದ್ದರೆ ಅಂತಹ ಕಡೆಗಳಲ್ಲಿ ಖಾಸಗಿ ಕೊಳವೆ ಬಾವಿಗಳ ರೈತರಿಗೆ ಸರಿಯಾಗಿ ಹಣ ಪಾವತಿಸಿ ಬಳಸಿಕೊಳ್ಳಬೇಕು. ಇನ್ನೊಂದು ವರ್ಷದಲ್ಲಿ ಜಲ ಜೀವನ್ ಮಿಷನ್ ಯೋಜನೆ ಪೂರ್ಣಗೊಂಡರೆ ಆನಂತರ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಈ ಒಂದು ವರ್ಷ ಬಹಳ ಗಂಭೀರವಾಗಿ ಪರಿಗಣಿಸಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಜೊತೆಗೆ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ತಾಲೂಕು ಆಡಳಿತ ಕ್ರಮವಹಿಸಬೇಕು ಎಂದು ಸೂಚಿಸಿದರು.
ಪ್ರತಿ 15 ದಿನಕ್ಕೊಮ್ಮೆ ಪಿಡಿಒಗಳು ತಮ್ಮ ವ್ಯಾಪ್ತಿಯ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಕುಡಿಯುವ ನೀರಿಗೆ ಸಂಬಂಧಿಸಿದ ಮಾಹಿತಿಯ ವರದಿ ನೀಡಬೇಕು. ಪ್ರತಿ ವಾರಕ್ಕೊಮ್ಮೆ ಪಿಡಿಒಗಳು ಸಭೆ ನಡೆಸಿ ತಾ.ಪಂ.ಇಒ ಅವರಿಗೆ ವರದಿ ಸಲ್ಲಿಸಬೇಕು ಎಂದರು.
86 ನೀರು ಗಂಟಿಗಳು ಕಾಯಂ:ತಾಲೂಕಿನ ಗ್ರಾಪಂಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 86 ಮಂದಿ ನೀರುಗಂಟಿಗಳನ್ನು ಕಾಯಂ ಮಾಡಲಾಗಿದೆ. ಸಿಕ್ಕ ಅವಕಾಶದಲ್ಲಿ ಜನರಿಗೆ ಹೇಗೆಲ್ಲ ಒಳ್ಳೆಯದು ಮಾಡಲು ಸಾಧ್ಯವೋ ಅಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ಕೆಲಸ ಮಾಡಿಕೊಟ್ಟವರನ್ನು ಅವರು ನೆನಪಿಟ್ಟುಕೊಂಡರೆ ನನಗೆ ಅದೇ ದೊಡ್ಡ ಕೊಡುಗೆ ಇದ್ದಂತೆ. ಕೆಲಸ ಮಾಡಿಕೊಟ್ಟವರಿಗೆ ಗ್ರಾಪಂ ನೌಕರರು ಕೃತಜ್ಞರಾಗಿರಬೇಕು ಎಂದರು.
3502 ಜನರಿಗೆ ಮಾಲೀಕತ್ವ:ತಾಲೂಕಿನಲ್ಲಿ 3502ಜನರು ಆಶ್ರಯ ಯೋಜನೆಯಡಿ ಮನೆ ಕಟ್ಟಿದ್ದಾರೆ. ಅವರಿಗೆ ಅಡಮಾನಪತ್ರ ಬಿಡುಗಡೆ ಮಾಡಿ ಮಾಲೀಕತ್ವವನ್ನು ನೀಡಲಾಗಿದೆ. 58 ಸಾವಿರ ಇ-ಸ್ವತ್ತು ಬಾಕಿ ಇದ್ದು ಈ ಪೈಕಿ 16 ಸಾವಿರ ಇ-ಸ್ವತ್ತು ಪೂರ್ಣಗೊಂಡಿದೆ. ಉಳಿದಿರುವ ಇ-ಸ್ವತ್ತುಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಸಾರ್ವಜನಿಕರಿಗೆ ಅಡಚಣೆಯಾಗುವಂತಹ ಸಮಸ್ಯೆಗಳಿಗೆ ಪಿಡಿಒಗಳು ಮೊದಲು ಪರಿಹರ ಒದಗಿಸಬೇಕು ಎಂದರು.
ವಿದ್ಯುತ್ ಸಂಪರ್ಕ ಸರಳೀಕರಣ:ನಿವೇಶನ ಅಥವಾ ಜಮೀನಿನಲ್ಲಿ ಮನೆ ನಿರ್ಮಿಸಿ ವಿದ್ಯುತ್ ಸಂಪರ್ಕ ಪಡೆಯಲು ಸೆಸ್ಕ್ ಅಧಿಕಾರಿಗಳು ಗ್ರಾಪಂನಿಂದ ಎನ್‌ಒಸಿ ಅಥವಾ ಗ್ರಾಮ ಆಡಳಿತಾಧಿಕಾರಿಗಳ ದೃಢೀಕರಣವನ್ನು ಕೇಳುತ್ತಿದ್ದರು. ಇದನ್ನು ಸರಳೀಕರಣಗೊಳಿಸಲಾಗಿದೆ. ಯಾವುದೇ ಎನ್‌ಒಸಿ ಹಾಗೂ ದೃಢೀಕರಣವಿಲ್ಲದೆ ಮಾಲೀಕತ್ವದ ದಾಖಲೆಗಳ ಆಧಾರದ ಮೇಲೆ ವಿದ್ಯುತ್ ಸಂಪರ್ಕ ನೀಡುವಂತೆ ಸೆಸ್ಕ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಾರ್ವಜನಿಕರು ನೇರವಾಗಿ ಸೆಸ್ಕ್ ಅಧಿಕಾರಿಗಳ ಬಳಿ ಬಂದರೆ ಗುತ್ತಿಗೆದಾರರನ್ನು ಸಂಪರ್ಕಿಸಿ ಎನ್ನುವ ದೂರುಗಳು ಕೇಳಿಬರುತ್ತಿವೆ. ಈ ರೀತಿಯ ದೂರುಗಳು ಮತ್ತೆ ಕೇಳಿಬಂದರೆ ನಾನು ಸಹಿಸುವುದಿಲ್ಲ. ಸರ್ಕಾರಿ ಹಣ ಎಷ್ಟು ಪಾವತಿಸಬೇಕು ಅಷ್ಟನ್ನು ಮಾತ್ರ ಪಾವತಿಸಿಕೊಂಡು ಕೆಲಸ ಮಾಡಿಕೊಡಿ. ರೈತರನ್ನು ವಿನಾ ಕಾರಣ ಕಚೇರಿಗೆ ಅಲೆದಾಡಿಸಿದರೆ ನಾನು ಸಹಿಸುತ್ತಿಲ್ಲ ಎಂದು ಸೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಶೇ.100ರಷ್ಟು ಕಂದಾಯ ವಸೂಲಿಯಾಗಬೇಕು:
ಗ್ರಾಮ ಪಂಚಾಯ್ತಿಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಅನುದಾನದ ಅಗತ್ಯವೇ ಇಲ್ಲ. ಏಕೆಂದರೆ ನರೇಗಾ ಹಾಗೂ ಕಂದಾಯ ವಸೂಲಿಯಿಂದಲೇ ನಿಮ್ಮ ವ್ಯಾಪ್ತಿಯ ಅಭಿವೃದ್ಧಿ ಕೆಲಸ ಮಾಡಬಹುದು. ಆದರೆ, ಎಲ್ಲಾ ಪಿಡಿಒಗಳು ಕಂದಾಯ ವಸೂಲಿಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಶೇ.100 ರಷ್ಟು ಕಂದಾಯ ವಸೂಲಿ ಮಾಡಬೇಕು. ಕಂದಾಯ ವಸೂಲಿಯಲ್ಲಿ ಯಾರೂ ಹಿನ್ನಡೆ ಇರುತ್ತಾರೋ ಅಂತಹ ಪಿಡಿಒಗೆ ನೋಟಿಸ್ ನೀಡಲು ಇಒ ಅವರಿಗೆ ಸೂಚಿಸಿದರು.5 ಕೋಟಿ ರು. ವೆಚ್ಚದಲ್ಲಿ ಹೊಸ ತಾಪಂ ಕಟ್ಟಡ:
ಬಹಳ ಹಳೆಯದಾದ ಶಿಥಿಲಗೊಂಡಿರುವ ತಾಪಂ ಕಟ್ಟಡವನ್ನು ನೆಲಸಮಗೊಳಿಸಿ ಈ ಜಾಗದಲ್ಲಿ ಹೊಸದಾಗಿ ಸುಮಾರು 5 ಕೋಟಿ ರು. ವೆಚ್ಚದಲ್ಲಿ ಹೊಸ ತಾಲೂಕು ಪಂಚಾಯ್ತಿ ಕಟ್ಟಡ ನಿರ್ಮಿಸಲಾಗುವುದು. ಇದರ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಈಗಾಗಲೇ ಮೊದಲ ಹಂತವಾಗಿ 1.5ಕೋಟಿ ರು. ಹಣ ಬಿಡುಗಡೆಯಾಗಿದೆ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು. ಅದೇ ರೀತಿ ಪಟ್ಟಣದಲ್ಲಿ ಪುರಸಭೆ ಕಚೇರಿ ಕಟ್ಟಡ ಹಾಗೂ ಡಾ.ಅಂಬೇಡ್ಕರ್ ಭವನ ನಿರ್ಮಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದರು.ಸಭೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಜಂಟಿ ಕೃಷಿ ನಿರ್ದೇಶಕ ಹಾಗೂ ತಾಪಂ ಆಡಳಿತಾಧಿಕಾರಿ ಅಶೋಕ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಎಲ್ಲಾ ಗ್ರಾಪಂ ಪಿಡಿಒಗಳು ಇದ್ದರು.