ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಚಿಕ್ಕೋಡಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಕಾರ್ಖಾನೆ ರೈತ ಸದಸ್ಯ, ಕೇರೂರ ಗ್ರಾಮದ ರೈತ ಮಹಾಂತೇಶ ಅಪ್ಪಾಸಾಬ ಕಾನಡೆ ಅವರು ಕಾರ್ಖಾನೆ ಕಬ್ಬು ಅಭಿವೃದ್ಧಿ ವಿಭಾಗದ ಮಾರ್ಗದರ್ಶನ ಹಾಗೂ ಕಿಸಾನ್ ಬಜಾರ್‌ದ ಸೌಲಭ್ಯಗಳ ಉಪಯೋಗ ಪಡೆದು 2024-25ರ ಸಾಲಿನಲ್ಲಿ ಎಕರೆಗೆ 100 ಟನ್ ಕಬ್ಬು ಬೆಳೆದ ಹಿನ್ನೆಲೆ ಕಾರ್ಖಾನೆ ಆಡಳಿತ ಮಂಡಳಿ ಪರವಾಗಿ ಈಚೆಗೆ ಪ್ರಧಾನ ವ್ಯವಸ್ಥಾಪಕ ಎನ್.ಎಸ್. ಹಿರೇಮಠ ಕಬ್ಬು ಬೆಳೆದ ತೋಟಕ್ಕೆ ಭೇಟಿ ನೀಡಿ ರೈತನನ್ನು ಅಭಿನಂದಿಸಿದರು.ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಎನ್.ಎಸ್. ಹಿರೇಮಠ ಮಾತನಾಡಿ, ಕಾರ್ಖಾನೆ ರೂವಾರಿ ರಾಜ್ಯಸಭೆ ಮಾಜಿ ಸದಸ್ಯ ಹಾಗೂ ಕೆಎಲ್ಇ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹಾಗೂ ನವದೆಹಲಿಯ ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ಮಹಾಮಂಡಳ ನಿರ್ದೇಶಕ ಅಮಿತ ಕೋರೆ ಆಶಯದಂತೆ ಹಾಗೂ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ನಿರ್ದೇಶನದಂತೆ ಕಾರ್ಖಾನೆಯಿಂದ ಕಬ್ಬು ಅಭಿವೃದ್ಧಿ ಯೋಜನೆಗೆ ಒತ್ತು ನೀಡಲಾಗಿದೆ. ಎಕರೆಗೆ 100 ಟನ್ ಕಬ್ಬು ಬೆಳೆಯಲು ಉತ್ತೇಜಿಸಲಾಗುತ್ತಿದೆ ಎಂದು ಹೇಳಿದರು.
ಇಳುವರಿ ಹೆಚ್ಚಾದಲ್ಲಿ ರೈತರಿಗೆ ಹಾಗೂ ಕಾರ್ಖಾನೆಗೂ ಲಾಭವಾಗುತ್ತದೆ. ಹಾಗಾಗಿ, ಎಲ್ಲ ಸದಸ್ಯರು ಕಾರ್ಖಾನೆ ಕಬ್ಬು ಅಭಿವೃದ್ಧಿ ಯೋಜನೆಗಳ ಸದುಪಯೋಗ ಪಡೆದುಕೊಂಡು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಖಾನೆ ಕಬ್ಬು ಅಭಿವೃದ್ಧಿ ಮೇಲ್ವಿಚಾರಕ ರಾಹುಲ್ ಇಚಲಕರಂಜಿ, ಸಚಿನ ಮೋಪಗಾರ, ಕಬ್ಬು ಮೇಲ್ವಿಚಾರಕ ಎನ್.ಐ. ಪಾಟೀಲ, ಸುಭಾಷ ಖೋತ, ಕಿಸಾನ್ ಬಜಾರ್ ಮ್ಯಾನೇಜರ್ ಸಂತೋಷ ಬನಗೆ, ರಮೇಶ ಕಾಟೆ, ಕಬ್ಬು ಅಭಿವೃದ್ಧಿ ಕಚೇರಿ ಗುಮಾಸ್ತ ರಾಹುಲ್ ಬಸ್ತವಾಡೆ ಹಾಗೂ ಸಿಬ್ಬಂದಿ, ಗ್ರಾಮದ ರೈತರು ಇದ್ದರು.