ಶಂಕರಗುರು ರಬಕವಿ
ಕಲಘಟಗಿ:ಕೃಷಿ ಕ್ಷೇತ್ರದಲ್ಲಿ ಆಧುನೀಕರಣ, ವಿನೂತನ ಸಂಶೋಧನೆ, ರಾಸಾಯನಿಕಗಳ ಬಳಕೆ.. ಹೀಗೆ ಹಲವಾರು ಆಧುನಿಕ ಪದ್ಧತಿ ಬಳಸಿ ಇಳುವರಿ ಪಡೆಯುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ರೈತ ಪರಶುರಾಮ ಎತ್ತಿನಗುಡ್ಡ ಅವರು ತಮ್ಮ ಹೊಲದಲ್ಲಿ ಗೋ ಆಧಾರಿತ ಸಾವಯವ ಕೃಷಿ ಪದ್ಧತಿ ಬಳಸಿ ಅಪರೂಪದ ಗಂಧಸಾಲೆ ಭತ್ತ ಬೆಳೆದಿದ್ದಾರೆ. ಇದರ ಜತೆಗೆ 20ಕ್ಕೂ ಹೆಚ್ಚು ಬೆಳೆಗಳನ್ನು ಸಾವಯವ ಪದ್ಧತಿ ಬಳಸಿ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಲೆನಾಡಿನ ಅಂಚಿನಲ್ಲಿರುವ ತಾಲೂಕಿನ ಸುಳಿಕಟ್ಟಿ ಗ್ರಾಮದ ರೈತ ಪರಶುರಾಮ ತಮಗೆ ಸೇರಿದ 4 ಎಕರೆ ಜಮೀನಿನಲ್ಲಿ 6 ವರ್ಷಗಳಿಂದ ಗೋ ಆಧಾರಿತ ಸಾವಯವ ಕೃಷಿ ಮಾಡುತ್ತಿದ್ದಾರೆ.ಈ ಕೃಷಿ ಪದ್ಧತಿಯಲ್ಲಿ ದೇಸಿ ಆಕಳುಗಳ ಗಂಜಲದಿಂದ ಜೀವಾಮೃತ, ಗಣ ಜೀವಾಮೃತ, ಗೋನಂದಾಜಲ, ಗೋ ಕೃಪಾಮೃತಗಳನ್ನು ಬೆಳೆಗಳಿಗೆ ಔಷಧಿಯನ್ನಾಗಿ ಸಿಂಪಡಿಸುತ್ತಿದ್ದಾರೆ ಮತ್ತು ಗೊಬ್ಬರಗಳ ರೂಪದಲ್ಲಿ ಬೆಳೆಗಳಿಗೆ ಬಳಕೆ ಮಾಡುತ್ತಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಭತ್ತ, ಗೋವಿನ ಜೋಳ, ಸೋಯಾಬಿನ್, ತೊಗರಿ, ಎಳ್ಳು ಬೆಳೆಯುತ್ತಾರೆ. ಹಿಂಗಾರಿಯಲ್ಲಿ ರಾಗಿ, ಸಾಮೆ, ಮಡಿಕೆ, ಹೆಸರು, ಅಲಸಂದಿ, ಉದ್ದು, ಜೋಳ, ಸಾಸಿವೆ, ಅರಿಷಿಣ... ಹೀಗೆ ಹಲವಾರು ಬೆಳೆಗಳನ್ನು ಬೆಳೆಯುತ್ತಾರೆ.ಸುಮಾರು 2 ಎಕರೆಯಲ್ಲಿ 80ಕ್ಕೂ ಹೆಚ್ಚು ಅಲ್ಪಾನ್ಸೋ ಮಾವಿನ ಗಿಡಗಳನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದಿದ್ದಾರೆ. ಈ ಭೂಮಿ ಭತ್ತದ ಬೆಳೆಗೆ ಸೂಕ್ತವಾದ ವಾತಾವರಣ ಹೊಂದಿದೆ. ಆದರೆ, ಈಗ ವಾಣಿಜ್ಯ ಬೆಳೆಗಳ ಭರಾಟೆಯಿಂದ ತುಂಬಾ ಕಡಿಮೆಯಾಗಿ ನಶಿಸಿ ಹೋಗುವ ಹಂತದಲ್ಲಿದೆ. ಇಂತಹ ಸಂದರ್ಭದಲ್ಲೂ ಸುವಾಸನೆಯುಕ್ತ ದೇಸಿ ಗಂಧ ಸಾಲಿ ಭತ್ತವನ್ನು ಯಾವುದೇ ರಾಸಾಯನಿಕ ಬಳಸದೆ ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿರುವುದು ಮತ್ತೊಂದು ವಿಶೇಷ.
ಗಂಧಸಾಲೆ ಭತ್ತ ಎಂದರೆ ಅದು ಅತಿ ಸುವಾಸನೆಯುಕ್ತವಾದ ಒಂದು ಅಪರೂಪದ ಭತ್ತದ ತಳಿ. ಈ ಭತ್ತದ ಬೀಜ ಬಿತ್ತಿ ಪೈರು ಬೆಳೆದು ಕದಿರು ಕಟ್ಟಿದಾಗ ಬೀಸುವ ಗಾಳಿ ವಿಶಿಷ್ಟ ಸುಗಂಧವನ್ನು ಸುತ್ತಮುತ್ತ ಹರಡುತ್ತದೆ. ಇದರ ಮೂಲ ತಿಳಿದವರಿಗೆ ಅಕ್ಕಪಕ್ಕದಲ್ಲಿ ಯಾರೋ ಗಂಧಸಾಲೆ ಭತ್ತವನ್ನು ಬೆಳೆದಿದ್ದಾರೆ ಎಂದು ತಕ್ಷಣ ತಿಳಿದುಬಿಡುತ್ತದೆ. ಇನ್ನು ಈ ಭತ್ತ ಬೆಳೆದಾಗ ಪೈರು ಕಟಾವು ಮಾಡಿ ಪ್ರತ್ಯೇಕಿಸಿದರೆ ಆ ಭತ್ತದ ಹುಲ್ಲು ಕೂಡ ಘಮಘಮಿಸುತ್ತದೆ. ಈ ಭತ್ತ ಅಕ್ಕಿಯಾಗಿ ಅನ್ನ, ಪಲಾವ್, ಮೊಸರನ್ನ, ಬಿರಿಯಾನಿ ಮಾಡಿದಾಗ ಅದರಿಂದ ಪಸರಿಸುವ ಸುಮಧುರ ವಾಸನೆ ಗಂಧಸಾಲೆ ಭತ್ತದ ವೈಶಿಷ್ಟ್ಯತೆಯನ್ನು ಎತ್ತಿ ತೋರಿಸುತ್ತದೆ.ಈ ಭತ್ತವು ಪ್ರಕೃತಿ ನೀಡಿದ ಅದ್ಭುತ ಕೊಡುಗೆ. ಅಕ್ಕಿ ಹಳೆಯದಾದಷ್ಟು ಉತ್ತಮ. ಬಾಸುಮತಿ ಅಕ್ಕಿಯು ಗಂಧಸಾಲೆ ಅಕ್ಕಿಯು ಸುವಾಸನೆಯಲ್ಲಿ ಸ್ಪರ್ಧೆಗಿಳಿದರೆ ಗಂಧಸಾಲೆಯ ಅಕ್ಕಿ ಗೆಲ್ಲುವುದು ನಿಶ್ಚಿತ. ಆದರೆ, ಇಂತಹ ಅಪರೂಪದ ಬೆಳೆಗೆ ರೈತರಿಗೆ ತಕ್ಕ ಲಾಭ ದೊರೆಯದೇ ಮಧ್ಯವರ್ತಿಗಳು ಕಡಿಮೆ ಬೆಲೆಗೆ ಖರೀದಿಸಿ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂಬುದು ರೈತರ ಅಭಿಪ್ರಾಯ.ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ
ರಾಜ್ಯದ ಪ್ರಗತಿಪರ ರೈತರು ಸೇರಿ ಸಾಮಾಜಿಕ ಜಾಲತಾಣಗಳ ಮೂಲಕ ಗ್ರೂಪ್ ರಚಿಸಿಕೊಂಡು ಆ ಮೂಲಕ ಇತರ ರೈತರಲ್ಲಿ ನಿರಂತರವಾಗಿ ಸಾವಯವ ಕೃಷಿ ಪದ್ಧತಿ, ಬೆಳೆಯ ಮಹತ್ವ ಕುರಿತು ಹಂಚಿಕೊಳ್ಳುತ್ತಿದ್ದೇವೆ. ಸಾವಯವ ಕೃಷಿ ಮೇಳವನ್ನು ಆಯೋಜಿಸಿ ಜನರಿಗೆ ಸಾವಯವ ಕೃಷಿ ಉತ್ಪನ್ನಗಳ ಬಳಕೆ, ಮಹತ್ವ ಸಾರುತಿದ್ದೇವೆ. ಸಂಘಟನೆ ಮೂಲಕ ಆಗಾಗ ರೈತಪರ ಹೋರಾಟಗಳನ್ನು ಮಾಡಲಾಗುತ್ತಿದೆ ಎಂದು ರೈತ ಪರಶುರಾಮ ಎತ್ತಿನಗುಡ್ಡ ಕನ್ನಡಪ್ರಭಕ್ಕೆ ತಿಳಿಸಿದರು.