ರೈತರು ಆಧುನಿಕ ಪದ್ಧತಿ ಅಳವಡಿಸಿಕೊಳ್ಳಿ: ಸಚಿವ ಖಂಡ್ರೆ ಸಲಹೆ

KannadaprabhaNewsNetwork | Published : Sep 19, 2024 1:47 AM

ಸಾರಾಂಶ

Farmers adopt modern practices: Minister Khandre advises

-35ಕೋಟಿ ವೆಚ್ಚದಲ್ಲಿ ಜಾನುವಾರು ತಳಿ ಸಂವರ್ಧನಾ ತರಬೇತಿ ಕೇಂದ್ರಕ್ಕೆ ಸಚಿವ ಈಶ್ವರ ಖಂಡ್ರೆ ಶಂಕುಸ್ಥಾಪನೆ । ಆಧುನಿಕ ಪದ್ದತಿಯ ಕುರಿ, ಕೋಳಿ ಸಾಕಾಣಿಕೆ ಮಾಡಲಿ

---

ಕನ್ನಡಪ್ರಭ ವಾರ್ತೆ, ಬೀದರ್‌

ಜಿಲ್ಲೆಯ ಆಸುಪಾಸು ಎರಡೆರೆಡು ನದಿಗಳು ಹರಿಯುತ್ತಿದ್ದು ಹಸು, ಎಮ್ಮೆ, ಆಡು, ಕುರಿ ಸಾಕಾಣಿಕೆಗೆ ಉತ್ತಮ ವಾತಾವರಣ ಇದ್ದುದ್ದರಿಂದ ಪಶು ಸಂಪತ್ತನ್ನು ಉಳಿಸಿ ಬೆಳೆಸಬೇಕಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಅವರು ಜಿಲ್ಲಾ ಪಂಚಾಯತ್‌ ಮತ್ತು ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಯೋಗದಲ್ಲಿ ಔರಾದ್‌ ತಾಲೂಕಿನ ಹೆಡಗಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ದೇಶಿಯ ತಳಿಗಳ ಸಂರಕ್ಷಣೆ ಜೊತೆಗೆ ಆಧುನಿಕ ಪದ್ಧತಿ ಮೂಲಕ ಕುರಿ, ಕೋಳಿ, ಮೇಕೆ, ಹಂದಿ ಸಾಕಾಣಿಕೆಯ ತರಬೇತಿಯನ್ನು ರೈತರಿಗೆ ನೀಡಿದರೆ ಅವರ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ. 35ಕೋಟಿ ರು. ವೆಚ್ಚದಲ್ಲಿ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಕಟ್ಟಡಕ್ಕೆ ಹೆಡಗಾಪೂರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಕಾಮಗಾರಿಯು ಕಾಲಮಿತಿಯಲ್ಲಿ ಸುಸಜ್ಜಿತವಾಗಿ ಆಗುತ್ತದೆ. ಇದಕ್ಕೆ ನಬಾರ್ಡ್‌ನಿಂದ ಅನುದಾನ ಬರುತ್ತಿದೆ ಎಂದರು.

ಕೇವಲ ಕಟ್ಟಡ ಆದರೆ ಸಾಲದು ಜೊತೆಗೆ ಇದಕ್ಕೆ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ನೇಮಕಾತಿ ಆಗಬೇಕು. ಹೆಡಗಾಪೂರ ಗ್ರಾಮದ ಗೋಮಾಳದ 33 ಎಕರೆ ಜಮೀನನ್ನು ಈ ಗ್ರಾಮಸ್ಥರು ನೀಡಿದ್ದಾರೆ. ಇದಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದಲೂ ಅನುದಾನ ಒದಗಿಸಲಾಗುವುದು. ರೈತರು ಕೃಷಿ ಜೊತೆಗೆ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಮಾಡಿದರೆ ಅವರ ಆರ್ಥಿಕತೆಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಹಾಲು ಉತ್ಪಾದಕರ ಕಟ್ಟಡ ನಿರ್ಮಾಣ. ಟೆಸ್ಟಿಂಗ್‌ ಮಶೀನ್‌ಗೆ ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗಡೆ ಅವರು ಬೀದರ್‌ ಜಿಲ್ಲೆಗೆ 5 ಕೋಟಿ ರು. ಅನುದಾನ ಕೊಟ್ಟಿದ್ದಾರೆ. ಬೀದರ್‌ ಸಂಸದರ ನಿಧಿಯಿಂದಲೂ ಅನುದಾನ ನೀಡಲಾಗುವುದು. ಕೋಲಾರ ಜಿಲ್ಲೆಯಲ್ಲಿ 10 ಲಕ್ಷ ಲೀಟರ್‌ ಹಾಲು ಉತ್ಪಾದನೆ ಮಾಡುತ್ತಾರೆ. ಮನಸ್ಸು ಮಾಡಿದರೆ, ಜಿಲ್ಲೆಯಲ್ಲಿ 5 ಲಕ್ಷ ಲೀ. ಹಾಲು ಉತ್ಪಾದನೆ ಮಾಡಬಹುದು ಎಂದು ಈಶ್ವರ ಖಂಡ್ರೆ ಹೇಳಿದರು.

ಈ ಸಂದರ್ಭದಲ್ಲಿ ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ, ಶಾಸಕ ಪ್ರಭು ಚವ್ಹಾಣ್‌, ಹೆಡಗಾಪೂರ ಗ್ರಾಪಂ ಅಧ್ಯಕ್ಷೆ ಶೋಭಾವತಿ ಜೇಮ್ಸ್‌ ತಾರೆ, ಬೀದರ್‌ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ. ಸಿಇಒ ಡಾ. ಗಿರೀಶ ಬದೋಲೆ, ಬೆಂಗಳೂರು ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ನಿರ್ದೇಶಕ ಡಾ. ಮಂಜುನಾಥ ಪಾಳೆಗಾರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಚಂದ್ರಕಾಂತ ಪೂಜಾರಿ, ಬೀದರ್‌ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಕೆ.ಸಿ ವೀರಣ್ಣ, ರಾಯಚೂರು ರಾಜ್ಯ ವಲಯ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಜಂಟಿ ನಿರ್ದೇಶಕ (ಪ್ರಭಾರಿ) ಡಾ. ಶರಣಬಸಪ್ಪ ಪಾಟೀಲ್‌, ಬೀದರ್‌ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು (ಆಡಳಿತ) ಡಾ. ನರಸಪ್ಪ ಎ.ಡಿ. ಸೇರಿದಂತೆ ಪಶು ಇಲಾಖೆಯ ಇತರೇ ಅಧಿಕಾರಿಗಳು, ಹೆಡಗಾಪೂರ ಗ್ರಾಮಸ್ಥರು ಇದ್ದರು.

-----

ಫೈಲ್‌ 18ಬಿಡಿ5

Share this article