ಕೆ. ರಮೇಶ್ ಬಂಗಾರಪೇಟೆ
ಕೃಷಿ ಹೊಂಡಗಳು ರೈತರಿಗೆ ಜೀವ ಸೆಲೆಯಾಗುವ ಬದಲು ಮೃತ್ಯುಕೂಪವಾಗಿ ಮಾರ್ಪಟ್ಟಿದ್ದರೂ ಇಲಾಖೆ ಅಧಿಕಾರಿಗಳು ಇದನ್ನು ತಡೆಯಲು ಸಂಪೂರ್ಣ ವಿಫಲವಾಗಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಮಕ್ಕಳ ಜೀವ ನುಂಗುವ ಕೃಷಿ ಹೊಂಡಗಳ ಸುತ್ತಲೂ ಕಡ್ಡಾಯ ತಂತಿಬೇಲಿ ಅಳವಡಿಸಬೇಕೆಂದು ಸರ್ಕಾರ ಸೂಚಿಸಿದ್ದರೂ ಯಾವೊಬ್ಬರೂ ನಿಯಮಗಳನ್ನು ಪಾಲಿಸದೆ ಗಾಳಿಗೆ ತೂರಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಕೃಷಿ ಇಲಾಖೆ, ತಾಲೂಕು ಆಡಳಿತದ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಕೂಗು ಕೇಳಿ ಬರುತ್ತಿದೆ.ಕೃಷಿ ಇಲಾಖೆಯ ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಲಾದ ಹೊಂಡಗಳಲ್ಲಿ ನೀರು ಇಂಗದಂತೆ ಪ್ಲಾಸ್ಟಿಕ್ ಕಪ್ಪು ಟಾರ್ಪಲ್‌ನ್ನು ಅಳವಡಿಸಲಾಗುತ್ತಿದೆ. ಆದರೆ ಆ ಕಪ್ಪು ಟಾರ್ಪಲ್ ಮೇಲೆ ಪಾಚಿ ಕಟ್ಟುತ್ತಿರುವುದರಿಂದ ಅವು ಅತ್ಯಂತ ಅಪಾಯಕಾರಿಯಾಗಿ ಮಾರ್ಪಟ್ಟಿವೆ. ಆಕಸ್ಮಿಕವಾಗಿ ಕಾಲುಜಾರಿ ಬಿದ್ದವರು ಮೇಲೆ ಹತ್ತಲು ಯಾವುದೇ ಆಧಾರ ಅಥವಾ ಹಿಡಿತ ಸಿಗದೆ ಹೊಂಡಗಳು ಶವಾಗಾರವಾಗುತ್ತಿವೆ. ಕೇವಲ ಮನುಷ್ಯರಷ್ಟೇ ಅಲ್ಲದೆ ಜಾನುವಾರುಗಳು ಕೂಡ ಈ ಹೊಂಡಗಳಿಗೆ ಬಿದ್ದು ಮೃತಪಡುತ್ತಿರುವುದು ರೈತರಿಗೆ ದೊಡ್ಡ ಆರ್ಥಿಕ ನಷ್ಟ ಉಂಟು ಮಾಡುತ್ತಿದೆ. ಬಾಳಿ ಬದುಕಬೇಕಾದ ಮಕ್ಕಳು ಹೊಂಡ ಮಾಲೀಕರ ನಿರ್ಲಕ್ಷ್ಯದಿಂದ ಕೃಷಿ ಹೊಂಡಗಳಲ್ಲಿ ಆಟವಾಡಲು ಹೋಗಿ ತಮ್ಮ ಜೀವವನ್ನು ಕಳೆದುಕೊಳ್ಳುವಂತಾಗಿದೆ. ತಾಲೂಕಿನಲ್ಲಿ ಎಲ್ಲಿಯೂ ಮಕ್ಕಳು ಬೇಸಿಗೆಯಲ್ಲಿ ಈಜಲು ನೀರಿಲ್ಲದ ಕಾರಣ ಮಕ್ಕಳು ನಿರ್ಜನ ಪ್ರದೇಶಗಳಲ್ಲಿರುವ ಈ ಹೊಂಡಗಳ ಆಳದ ಅರಿವಿಲ್ಲದೆ ಹಾಗೂ ಜಾರು ಬಂಡಿಯಂತಿರುವ ಪ್ಲಾಸ್ಟಿಕ್ ಕಪ್ಪು ಟಾರ್ಪಲ್ ಇರುವ ಹೊಂಡಗಳ ಒಳಗೆ ಬಿದ್ದವರು ಮೇಲೆ ಬರಲಾಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಹೊಂಡಗಳ ಮಾಲೀಕರ ನಿರ್ಲಕ್ಷ್ಯ ಎಂದು ಪರಿಗಣಿಸಿ, ಆ ರೈತರ ಆಸ್ತಿಯನ್ನು ಹರಾಜು ಹಾಕಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವ ಕಾನೂನು ಜಾರಿಯಾಗಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ಸರ್ಕಾರದ ನಿಯಮದ ಪ್ರಕಾರ ಕೃಷಿ ಹೊಂಡ ನಿರ್ಮಿಸಿದ ನಂತರ ಅದರ ಸುತ್ತಲೂ ಕನಿಷ್ಠ 5 ಅಡಿ ಎತ್ತರದ ತಂತಿಬೇಲಿ ಅಳವಡಿಸುವುದು ಕಡ್ಡಾಯವಾಗಿದ್ದರೂ. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಮಾಲೀಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ಜಿಲ್ಲಾದ್ಯಂತ ಸಾವಿರಾರು ಕೃಷಿ ಹೊಂಡಗಳಿದ್ದು, ಅದರಲ್ಲಿ ಶೇ. 50 ರಷ್ಟು ಕೃಷಿ ಹೊಂಡಗಳಿಗೆ ಬೇಲಿಯೇ ಇಲ್ಲ. ಅಪಾಯದ ಮುನ್ಸೂಚನೆ ನೀಡುವ ಫಲಕಗಳು ಇಲ್ಲದಿರುವುದು. ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.ಕೋಟ್:ತಾಲೂಕು ಆಡಳಿತ ಕೃಷಿ ಇಲಾಖೆ ಎಚ್ಚೆತ್ತುಕೊಂಡು ತಾಲೂಕಿನಾದ್ಯಂತ ಇರುವ ಕೃಷಿ ಹೊಂಡಗಳನ್ನು ಸಮಗ್ರವಾಗಿ ಸರ್ವೆ ಮಾಡಿ ಸುರಕ್ಷತೆ ಇಲ್ಲದ ಹೊಂಡಗಳ ಮಾಲೀಕರಿಗೆ ತಕ್ಷಣವೇ ನೋಟಿಸ್ ನೀಡಿ ಬೇಲಿ ಅಳವಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇಂತಹ ಕೃಷಿ ಭಾಗ್ಯಗಳು ಜನ ಸಾಮಾನ್ಯರಿಗೆ ದುರಂತದ ಭಾಗ್ಯಗಳಾಗಿ ಪರಿಣಮಿಸುವುದರಲ್ಲಿ ಸಂಶಯವಿಲ್ಲ.
ದಲಿತ ಮುಖಂಡ.