ನರಗುಂದ: ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಲ್‌ಗೆ 2400ರಂತೆ ಮೆಕ್ಕೆಜೋಳವನ್ನು ಖರೀದಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಈಗಾಗಲೇ ಹಲವಾರು ರೈತರ ಮೆಕ್ಕೆಜೋಳ ಖರೀದಿಗಾಗಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ಮೆಕ್ಕೆಜೋಳ ಖರೀದಿ ಮಾತ್ರ ಆಗುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.
ಗದಗ, ಹಾವೇರಿ, ಧಾರವಾಡ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರೈತರು ಗೋವಿನಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕೆಂದು ಉಗ್ರ ಹೋರಾಟ ಮಾಡಲಾಯಿತು. ಹೋರಾಟಕ್ಕೆ ಮಣಿದ ಸರ್ಕಾರ ಖರೀದಿ ಕೇಂದ್ರ ಸ್ಥಾಪನೆಗೆ ಆದೇಶಿಸಿತು.
ವಿವಿಧ ಖಾಸಗಿ ಕಂಪನಿಯವರು ಜತೆ ಮಾತನಾಡಿ ರೈತರ ಗೋವಿನಜೋಳ ಖರೀದಿಸಲು ಸೂಚನೆ ನೀಡಿತು. ನಂತರ ತಾಲೂಕಿನಲ್ಲಿ 189 ರೈತರು ಗೋವಿನಜೋಳ ಮಾರಾಟ ಮಾಡಲು ಹೆಸರು ನೋಂದಣಿ ಮಾಡಿದರು.ತಾಲೂಕಿನಲ್ಲಿ 189 ರೈತರು ಹೆಸರು ನೋಂದಣಿ ಮಾಡಿದ್ದರಲ್ಲಿ 28 ರೈತರ ಗೋವಿನ ಜೋಳವನ್ನು ಮುಂಡರಗಿ ಮೂಲದ ಶುಗರ್ ಫ್ಯಾಕ್ಟರಿಯವರು 1008 ಕ್ವಿಂಟಲ್ ಖರೀದಿಸಿದ್ದಾರೆ. ಉಳಿದ 161 ರೈತರ ಗೋವಿನ ಜೋಳ ಖರೀದಿಗೆ ಮಂಗಳೂರು ಮೂಲದ ಕುಕ್ಕಟ ಪೌಲ್ಟ್ರಿ ಕಂಪನಿಯವರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಖರೀದಿ ಮಾತ್ರ ಮಾಡುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.
28 ರೈತರ ಗೋವಿನಜೋಳ ಖರೀದಿಸಿದ ಶುಗರ್ ಫ್ಯಾಕ್ಟರಿಯವರು ರೈತರಿಗೆ ಹಣ ಸಂದಾಯ ಮಾಡಬೇಕು. ಅದೇ ರೀತಿ ಮಂಗಳೂರು ಮೂಲದ ಕುಕ್ಕಟ ಪೌಲ್ಟ್ರಿ ಕಂಪನಿಯವರು ನೋಂದಣಿ ಮಾಡಿಕೊಂಡ 161 ರೈತರ ಗೋವಿನಜೋಳವನ್ನು ಬೇಗ ಖರೀದಿಸಬೇಕು ಎಂದು ಜಿಲ್ಲಾ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ ಆಗ್ರಹಿಸಿದರು.ಮಂಗಳೂರು ಮೂಲದ ಖಾಸಗಿ ಕಂಪನಿಯವರು ನೋಂದಣಿಯಾದ 161 ರೈತರ ಗೋವಿನಜೋಳವನ್ನು ಬೇಗ ಖರೀದಿ ಮಾಡಿಕೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಕಂಪನಿಯವರಿಗೆ ಪತ್ರ ಬರೆಯಲಾಗಿದೆ ಎಂದು ತಾಲೂಕು ಸಹಕಾರಿ ಮಾರಾಟ ಮಹಾಮಂಡಳಿ ವ್ಯವಸ್ಥಾಪಕ ಸಚಿನ ಪಾಟೀಲ ತಿಳಿಸಿದರು.