ಹೊಸಪೇಟೆ: ರೈತ ಮತ್ತು ನೇಕಾರರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರೈತ ಪ್ರಾಣ ಕಾಪಾಡುತ್ತಾನೆ, ನೇಕಾರ ಮಾನ ಕಾಪಾಡುತ್ತಾನೆ ಎಂದು ಸಂಶೋಧನಾ ವಿದ್ಯಾರ್ಥಿ ಕುಮಾರ ಗೌರೀಶ ಉದ್ನೂರ ಹೇಳಿದರು.
ರೈತ ಬೆಳೆದ ಹತ್ತಿಯಿಂದ ನೇಕಾರ ಬಟ್ಟೆ ತಯಾರಿಸುತ್ತಾನೆ. ನೇಕಾರರು ಶ್ರಮಜೀವಿಗಳು. ಪುರಾತನ ಕಾಲದಿಂದ ನೇಕಾರಿಕೆ ಮಾಡಿಕೊಂಡು ಬಂದವರು. ಸಾಕಷ್ಟು ಸಮಸ್ಯೆ ಇಂದು ಎದುರಿಸುತ್ತಿದ್ದಾರೆ. ಸರ್ಕಾರದಿಂದ ಸರಿಯಾದ ರೀತಿಯಲ್ಲಿ ಯೋಜನೆ ಮತ್ತು ಸೌಲಭ್ಯ ದೊರೆಯುತ್ತಿಲ್ಲ. ವಿದ್ಯುತ್ ಕಣ್ಣು ಮುಚ್ಚಾಲೆ, ರಾಜಕಾರಣಿಗಳ ನಿರ್ಲಕ್ಷ್ಯ, ಮಳಿಗೆಗಳ ಕೊರತೆ, ಮಾರುಕಟ್ಟೆ ಸಮಸ್ಯೆ, ಮಧ್ಯವರ್ತಿಗಳ ಹಾವಳಿ, ಕೂಲಿಕಾರರ ಸಮಸ್ಯೆ, ಪೆಡಲ್ ತುಳಿಯುತ್ತಾ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ನೇಕಾರಿಕೆಯ ವೃತ್ತಿ ಉಳಿಸುವವರು ಯಾರು? ನೇಕಾರ ಸಮಾಜವೆಂದರೆ ಅದು ಕೇವಲ ಒಂದು ವೃತ್ತಿಯಲ್ಲ. ಅದು ಒಂದು ಜೀವಂತ ಸಂಸ್ಕೃತಿ. ನೇಕಾರರು ಶಾಂತಿಪ್ರಿಯರು. ಕಾಯಕದ ಮೇಲೆ ನಂಬಿಕೆ, ಶ್ರದ್ಧೆ, ನಿಷ್ಠೆಯುಳ್ಳವರು. ಪವಿತ್ರವಾದ ನೇಯ್ಗೆಯಿಂದ ಮಾನವನ್ನು ಉಳಿಸುವ ಮನೋಧರ್ಮ ನೇಕಾರರದ್ದು ಎಂದರು.ನೇಕಾರರು ತಯಾರಿಸುವ ಉಡುಪು, ಸೀರೆಗಳು, ಖಣಗಳು ಪೂರ್ವ ಕಾಲದಿಂದಲೂ ಪ್ರಸಿದ್ಧಿ ಪಡೆದಿವೆ. ಮೊಣಕಾಲ್ಮೂರು, ಕೊಪ್ಪಳದ ಭಾಗದ ನಗರ, ಗುಳೇದ ಗುಡ್ಡ, ಬಾದಾಮಿ, ಕಮಟಗಿ, ಇಳಕಲ್, ರಾಯದುರ್ಗ,ಕಿನ್ನಾಳ ಸೇರಿದಂತೆ ಇತ್ಯಾದಿ ಊರುಗಳು ನೇಯ್ಗೆಗೆ ಹೆಸರುವಾಸಿಯಾಗಿವೆ. ಆಧುನಿಕವಾಗಿ ಜಗತ್ತು ಬೆಳೆದಷ್ಟು, ಹೊಸ ಹೊಸ ಆವಿಷ್ಕಾರ ನೇಯ್ಗೆಯಲ್ಲಿ ನಡೆಯುತ್ತಿವೆ ಎಂದು ಹೇಳಿದರು.
ವಿಭಾಗದ ಮುಖ್ಯಸ್ಥ ಡಾ. ಎಲ್.ಶ್ರೀನಿವಾಸ, ಸಹ ಸಂಚಾಲಕ ಕುಮಾರ್ ಡಿ.ಬಿ. ಸಭೆಯಲ್ಲಿ ಉಪಸ್ಥಿತರಿದ್ದರು.