ಕನ್ನಡಪ್ರಭ ವಾರ್ತೆ, ತುಮಕೂರುಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (ಎಸ್.ಕೆ.ಎಂ) ಅವರು ಭಾರತ ಬಿಟ್ಟು ತೊಲಗಿ ನೆನಪಿನಲ್ಲಿ ಕರೆ ನೀಡಿದ್ದ ಜೈಲು ಭರೋ ಚಳುವಳಿ ತುಮಕೂರು ನಗರದಲ್ಲಿ ನಡೆಯಿತು. ಸರ್ಕಾರದ ಜನವಿರೋಧಿ, ರೈತ-ಕಾರ್ಮಿಕ, ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ನಡೆದ ಈ ಹೋರಾಟದಲ್ಲಿ ಪ್ರತಿಭಟನಾಕಾರರು ಸ್ವಾತಂತ್ರ್ಯಟ ಚೌಕದಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ತೆರಳಿ ಕಚೇರಿ ಮುತ್ತಿಗೆಗೆ ಯತ್ನಿಸಿದರು. ಪೊಲೀಸರು ಅವರನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡರು. ಬ್ಯಾರಿಕೇಡ್ ತಳ್ಳಾಟ ನಡೆಸಿದ ಪ್ರತಿಭಟನಾಕಾರರು ಪ್ರಬಲ ಪ್ರತಿರೋಧ ತೋರಿ ಕೇಂದ್ರ – ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳನ್ನು ಖಂಡಿಸಿದರು. ಸರ್ಕಾರಗಳು ಜನ ,ರೈತ-ಕಾರ್ಮಿಕ ವಿರೋಧಿ ನೀತಿಗಳನ್ನು ಬದಲಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರಭಲ ಹೋರಾಟ ನಡೆಸಲು ರೈತ – ಕಾರ್ಮಿಕ ಸಂಘಗಳು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು, ಜಿಲ್ಲೆಯಲ್ಲಿ ರೈತರಿಂದ ಜಮೀನು ಕಸಿದುಕೊಳ್ಳುವ ಕೆಲಸ ನಿಲ್ಲಿಸಬೇಕೆಂದು ಆಗ್ರಹಿಸಿದರು.ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ ಕಾಂಗ್ರೆಸ್ನಲ್ಲಿ ಎರಡು ಪಕ್ಷಗಳಿವೆಯೇ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಿಗದಿಪಡಿಸಿದ ಕನಿಷ್ಠ ವೇತನವನ್ನು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಏಕೆ ಜಾರಿ ಮಾಡುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು. ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ದೊಡ್ಡನಂಜಪ್ಪ ಮಾತನಾಡಿ, ಬೇಗರ್ ಹುಕುಂ ಸಾಗುವಳಿದಾರರ ಸಮಸ್ಯೆಗೆ ಸರ್ಕಾರ ಸ್ಪಂದಿಸಿಲ್ಲ. ಲಂಚ ನೀಡಿದವರಿಗೆ ಪಡಿ ಆಗುತ್ತದೆ, ಇಲ್ಲದವರಿಗೆ ನೆಪಗಳನ್ನು ಸೃಷ್ಟಿಸಲಾಗುತ್ತಿದೆ. ಭೂಮಿ ನೀಡದ ಸರ್ಕಾರ ಭೂಮಿ ಕಸಿಯುತ್ತಿದೆ ಎಂದರು.ಈ ವೇಳೆ ಎಐಟಿಯುಸಿ ಗಿರೀಶ್ , ರಾಜ್ಯ ರೈತ ಸಂಘ ಶಂಕರಪ್ಪ, ಪ್ರಾಂತ ರೈತ ಸಂಘ ಬಿ. ಉಮೇಶ್, ಸಿಐಟಿಯು ಎನ್.ಕೆ. ಸುಬ್ರಮಣ್ಯ, ಅಂಗನವಾಡಿ ನೌಕರರ ಸಂಘದ ಜ. ಕಮಲ, ಸಿಐಟಿಯು ಜಿಲ್ಲಾ ಖಜಾಂಚಿ ಎ. ಲೋಕೇಶ್, ಷಣ್ಮುಖಪ್ಪ, ನಾಗರತ್ನ, ಅಂಗನವಾಡಿ ಕಾರ್ಯಕರ್ತೆಯರಾದ ಅನಸೂಯ, ಸರೋಜಾ, ಮಾರತಿ, ಮಂಜುನಾಥ, ಶ್ರೀನಿವಾಸ್, ಪ್ರಕಾಶ್, ಮಂಜುನಾಥ, ಅಂದಾನಿ, ಕುಮಾರ್, ಚಂದ್ರಶೇಖರ್, ನವಾಜ್, ಭಾಗ್ಯಮ್ಮ, ರಂಗಮ್ಮ, ನೇತ್ರವತಿ, ಗಂಗಮ್ಮ, ಲಕ್ಷ್ಮಿ, ಮಧುಸೂಧನ್, ಉಮೇಶ್, ಕ ಕಲೀಲ್, ಶಂಕರಪ್ಪ ಮುಂದಾಳತ್ವ ವಹಿಸಿದ್ದರು.