ವರದಾ-ಬೇಡ್ತಿ ಯೋಜನೆಗೆ ಅಡ್ಡಿ: ಕಾಗೇರಿ ವಿರುದ್ಧ ರೈತರ ಆಕ್ರೋಶ

KannadaprabhaNewsNetwork |  
Published : Dec 29, 2025, 02:45 AM IST
ಫೋಟೋ : 28ಎಚ್‌ಎನ್‌ಎಲ್1ಹಾನಗಲ್ಲಿನಲ್ಲಿ ವಿಶ್ವನಾಥ ಹೆಗಡೆ ಕಾಗೇರಿ ಹೇಳಿಕೆ ಖಂಡಿಸಿ, ಸರ್ಕಾರಗಳ ನಿರ್ಣಯಕ್ಕೆ ಬೆಂಬಲಿಸಿ ಹೇಳಿಕೆ ನೀಡಿದ ಮಲ್ಲಿಕಾರ್ಜುನ ಹಾವೇರಿ ಹಾಗೂ ಸೋಮಶೇಖರ ಕೋತಂಬರಿ ಮೊದಲಾದವರು. | Kannada Prabha

ಸಾರಾಂಶ

ರಾಜ್ಯದ ಹಿತ ಕಾಯಬೇಕಾದ ಮಾಜಿ ವಿಧಾನಸಭೆ ಅಧ್ಯಕ್ಷರೂ ಆಗಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉತ್ತರ ಕರ್ನಾಟಕದ ರೈತರ ಅನುಕೂಲಕರ ನೀರಾವರಿ ಯೋಜನೆಗೆ ಅಡ್ಡಿ ಮಾಡಲು ಹೊರಟಿರುವುದು ವಿಷಾದದ ಸಂಗತಿ.

ಹಾನಗಲ್ಲ: ರಾಜ್ಯದ ಹಿತ ಕಾಯಬೇಕಾದ ಮಾಜಿ ವಿಧಾನಸಭೆ ಅಧ್ಯಕ್ಷರೂ ಆಗಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉತ್ತರ ಕರ್ನಾಟಕದ ರೈತರ ಅನುಕೂಲಕರ ನೀರಾವರಿ ಯೋಜನೆಗೆ ಅಡ್ಡಿ ಮಾಡಲು ಹೊರಟಿರುವುದು ವಿಷಾದದ ಸಂಗತಿ. ಈ ರಾಜ್ಯದ ಜನತೆ ತಲೆತಗ್ಗಿಸುವಂತಹದ್ದು. ಸಮುದ್ರಕ್ಕೆ ಹೋಗುವ ನೀರನ್ನೂ ರೈತರಿಗೆ ಬೇಡ ಎನ್ನುವ ಅವರ ಸಣ್ಣತನ ನಿಜಕ್ಕೂ ರೈತ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ. ವರದಾ ಬೇಡ್ತಿ ಜೋಡಣೆ ನಮ್ಮ ಹಕ್ಕು ಎಂದು ಹಾವೇರಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹಾಗೂ ವರದಾ ಬೇಡ್ತಿ ಜೋಡಣೆ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎಂ.ಕೋತಂಬರಿ ಜಂಟಿ ಹೇಳಿಕೆ ನೀಡಿ ತೀವ್ರ ಪ್ರತಿಕ್ರಿಯೆ ನೀಡಿದರು.

ಭಾನುವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವರದಾ- ಬೇಡ್ತಿ ಯೋಜನೆ ಸಾಕಾರದಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ಕಾಗೇರಿ ಅವರು ಸರಿಯಾಗಿ ತಿಳಿದುಕೊಳ್ಳಲಿ. ಇಂದಿನ ವೈಜ್ಞಾನಿಕ ಯುಗದಲ್ಲಿ ಅವೈಜ್ಞಾನಿಕವಾದ, ನೀರಾವರಿ ಹಾಗೂ ರೈತ ವಿರೋಧಿ ನೀತಿಯನ್ನೇ ಗಟ್ಟಿಯಾಗಿಟ್ಟುಕೊಂಡು ಹೇಳಿಕೆ ನೀಡುತ್ತಿರುವ ಅವರ ಮನೋಸ್ಥಿತಿಯ ಬಗೆಗೆ ನಮಗೆ ಬೇಸರವಿದೆ. ವರದಾ ಬೇಡ್ತಿ ಜೋಡಣೆ ವಿಷಯದಲ್ಲಿ ಅವರ ಅವೈಜ್ಞಾನಿಕ ಯೋಚನೆಯಿಂದ ಅವರು ಹೊರಬರಲಿ. ತಜ್ಞರು ಯೋಜನಾ ವರದಿಯನ್ನು ಒಪ್ಪಿ ಅದು ಡಿಪಿಆರ್ ನಲ್ಲಿ ಅನುಮೋದನೆಗೆ ಇರುವಾಗ ಇಂತಹ ವಿರೋಧ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಂಥಹ ದೊಡ್ಡ ಸ್ಥಾನ ಅನುಭವಿಸಿದವರಿಂದಲೇ ವ್ಯಕ್ತವಾಗುತ್ತಿರುವುದು ಸರಿ ಅಲ್ಲ. ಅವರೇ ಮುಂದೆ ನಿಂತು ಇಂತಹ ಯೋಜನೆ ಸಾಕಾರಕ್ಕೆ ಸಹಕರಿಸಬೇಕಾಗಿತ್ತು. ಅವರೇ ವಿಧಾನಸಭೆ ಅಧ್ಯಕ್ಷರಾಗಿದ್ದಾಗ ಈ ಯೋಜನೆ ರೂಪಿಸಲು ಮುಂದಾಗಬೇಕಾಗಿತ್ತು. ನೀರಿನ ಮೂಲಗಳು ಸಿಗುವುದೇ ಅಪರೂಪ. ಆದರೆ ಈಗ ವ್ಯತಿರಿಕ್ತವಾಗಿ ವಿರೋಧದ ಹೇಳಿಕೆ ನೀಡಿ ಉತ್ತರ ಕರ್ನಾಟಕದ ರೈತರನ್ನು ಕೆರಳಿಸುತ್ತಿರುವುದು ಕಾಗೇರಿ ಅವರಿಂದ ಒಳ್ಳೆಯ ಬೆಳವಣಿಗೆ ಅಲ್ಲ. ರೈತರ ಭೂಮಿಗೆ ನೀರು ಬೇಕು. ಈ ಯೋಜನೆ ಸಾಕಾರವಾಗಲೇಬೇಕು. ಇದಕ್ಕೆ ಅವರ ಸಹಕಾರವೇ ಇರಬೇಕು ಎಂದರು.

ಈ ಯೋಜನೆಯ ವಿಷಯದಲ್ಲಿ ಇನ್ನೂ ಹಲವು ಚರ್ಚೆಗಳಾಗಬೇಕಾಗಿದೆ. ಇದರಲ್ಲಿ ಸಾಕಷ್ಟು ಬದಲಾವಣೆಗಳೂ ಆಗಬೇಕಾಗಿದೆ. ಹಾವೇರಿ ಜಿಲ್ಲೆಯ ನೀರಾವರಿಗೆ ನೀರು ಕೊಟ್ಟು ಇದನ್ನು ಮುಂದೆ ಒಯ್ಯಬೇಕಾಗಿದೆ. ಇದು ಹತ್ತಾರು ವರ್ಷಗಳ ಹೋರಾಟ. ಈ ನೀರು ನಮ್ಮ ಹಕ್ಕು. ಈ ನೀರನ್ನು ಹೇಗೆ ತರಬೇಕು ಎಂಬುದು ನಮಗೆ ಗೊತ್ತಿದೆ. ಆ ಎದೆಗಾರಿಕೆಯೂ ನಮಗಿದೆ. ಇದರ ವಿರುದ್ಧ ಯಾರೇ ನಿಂತರೂ ನಾವು ಸುಮ್ಮನೇ ಕೂಡ್ರಲ್ಲ. ಸಾಕಷ್ಟು ಹೋರಾಟಗಳಿಂದ ಈ ಯೋಜನೆ ಒಂದು ಹಂತಕ್ಕೆ ಬಂದಿದೆ. ರಾಜ್ಯ ಸರ್ಕಾರ 1 ಸಾವಿರ ಕೋಟಿ ರು. ಹಾಗೂ ಕೇಂದ್ರ ಸರ್ಕಾರ 9 ಸಾವಿರ ಕೋಟಿ ರು. ಈಗ ಬಿಡುಗಡೆಗೆ ಸಿದ್ಧವಾಗಿದೆ. ಈ ಯೋಜನೆ ವೇಗವಾಗಿ ಜಾರಿಯಾಗಲು ಎಲ್ಲರ ಸಹಕಾರವಿರಲಿ. ರೈತರು ಬೀದಿಗಿಳಿಯುವ ಪರಿಸ್ಥಿತಿ ತಂದುಕೊಳ್ಳುವುದು ಬೇಡ. ಕಾಗೇರಿ ಅವರು ಯಾರಿಗೆ ದ್ರೋಹವಾಗುವ ಹೇಳಿಕೆ ನೀಡುತ್ತಿದ್ದಾರೆ ಎಂಬ ಎಚ್ಚರಿಕೆ ಇರಲಿ. ಅಭಿವೃದ್ಧಿ ಬೇಕಾಗಿಲ್ಲ ಎಂದು ಹೇಳುವ ಅವರ ಉದ್ದೇಶವೇ ತಿಳಿಯುತ್ತಿಲ್ಲ. ಇವು ಒಬ್ಬ ನಾಯಕನಿಗೆ ಸಲ್ಲುವ ವಿಚಾರಗಳಲ್ಲ ಎಂದು ಎಚ್ಚರಿಸಿದರು.ಯಾರೇ ಎಷ್ಟೇ ವಿರೋಧಿಸಿದರೂ ಅದಕ್ಕೆ ಬಗ್ಗುವ ಪ್ರಶ್ನೆಯೇ ಇಲ್ಲ. ರೈತ ಸಮುದಾಯದ ಹಿತ ಕಾಯಲು ಬೇಕಾಗುವ ಎಲ್ಲ ಹೋರಾಟದ ಇಚ್ಛಾಶಕ್ತಿ ನಮ್ಮಲ್ಲಿದೆ. ಹಾವೇರಿ ಹಾಗೂ ಉಳಿದ ನಾಲ್ಕಾರು ಜಿಲ್ಲೆಯ ಶಾಸಕರು ಸಂಸದರೂ ಸೇರಿ ಇಡೀ ರಾಜ್ಯದಲ್ಲಿಯೇ ದೊಡ್ಡ ಹೋರಾಟಕ್ಕೆ ಇದು ನಾಂದಿಯಾದೀತು. ಉತ್ತರ ಕರ್ನಾಟಕದ ಇನ್ನೊಂದು ಪ್ರಬಲ ಹೋರಾಟವನ್ನೇ ಎದುರಿಸಬೇಕಾದೀತು. ಈ ಯೋಜನೆಯನ್ನು ವಿರೋಧಿಸುವವರಿಗೆ ನಮ್ಮ ಖಡಾಖಂಡಿತವಾದ ಎಚ್ಚರಿಕೆ ಇದೆ. ಹಾವೇರಿ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು ಒಟ್ಟಾಗಿ ರೈತರ ಹಿತಕ್ಕೆ ಗಟ್ಟಿಯಾಗಿ ನಿಲ್ಲಬೇಕು. ಕಾಗೇರಿ ಅವರು ಇದಕ್ಕೆ ರಾಜಕೀಯ ಬಣ್ಣ ನೀಡಿ ಹೇಳಿಕೆ ನೀಡುತ್ತಿರುವುದನ್ನು ಪ್ರಬಲವಾಗಿ ವಿರೋಧಿಸುತ್ತೇವೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರೊ.ಸಿ. ಮಂಜುನಾಥ, ನಿಜಲಿಂಗಪ್ಪ ಮುದೆಪ್ಪನವರ , ಸೋಮಣ್ಣ ಜಡೆಗೊಂಡರ, ಅಜ್ಜನಗೌಡ ಕರೆಗೌಡ್ರ, ಮೂಕಯ್ಯ ಗುರುಲಿಂಗಣ್ಣನವರ, ಮುಜಾಫರ್ ಹಾವೇರಿ, ಜಾನ ಪುನೀತ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರ ಬೇಕು ಬೇಡಿಕೆ ಸಂಘ ಈಡೇರಿಸಲಿ
ಡ್ರಗ್ ಮಾಫಿಯಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ: ಬೊಮ್ಮಾಯಿ