ಹಾವೇರಿಯಲ್ಲಿ ಹಾವೆಮುಲ್‌ ಕಚೇರಿ ಬಂದ್‌ ಮಾಡಿ ರೈತರ ಆಕ್ರೋಶ

KannadaprabhaNewsNetwork | Published : Apr 4, 2025 12:46 AM

ಸಾರಾಂಶ

ಸರ್ಕಾರ ಲೀಟರ್‌ ಹಾಲಿಗೆ ₹4 ಏರಿಸಿದರೆ, ಒಕ್ಕೂಟವು ₹3.50 ರುಪಾಯಿ ದರ ಕಡಿತ ಮಾಡಿದೆ. ಇದು ರೈತರಿಗೆ ಮಾಡಿದ ದ್ರೋಹವಾಗಿದೆ ಎಂದು ಹಾಲು ಉತ್ಪಾದಕರು ಆಕ್ರೋಶ ವ್ಯಕ್ತಪಡಿಸಿದರು.

ಹಾವೇರಿ: ಹಾವೇರಿ ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಲೀಟರ್‌ಗೆ ₹3.50 ಕಡಿತ ಮಾಡಿದ ಹಿನ್ನೆಲೆ ಗುರುವಾರ ಇಲ್ಲಿಯ ಹಾವೆಮುಲ್‌ ಆಡಳಿತ ಕಚೇರಿ ಬಾಗಿಲು ಬಂದ್‌ ಮಾಡಿ ರೈತರು ಪ್ರತಿಭಟನೆ ನಡೆಸಿದರು. ನಗರದ ಪಶು ಆಸ್ಪತ್ರೆ ಆವರಣದಲ್ಲಿರುವ ಹಾಲು ಒಕ್ಕೂಟದ ಆಡಳಿತ ಕಚೇರಿ ಎದುರು ಜಮಾಯಿಸಿದ ರೈತರು, ದರ ಕಡಿತ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಪ್ರವೇಶ ದ್ವಾರದ ಬಾಗಿಲು ಬಂದ್‌ ಮಾಡಿ ಚಿಲಕ ಹಾಕಿದರು. ವ್ಯವಸ್ಥಾಪಕ ನಿರ್ದೇಶಕರನ್ನು ರೈತರು ತರಾಟೆಗೆ ತೆಗೆದುಕೊಂಡರು.

ಸರ್ಕಾರ ಲೀಟರ್‌ ಹಾಲಿಗೆ ₹4 ಏರಿಸಿದರೆ, ಒಕ್ಕೂಟವು ₹3.50 ರುಪಾಯಿ ದರ ಕಡಿತ ಮಾಡಿದೆ. ಇದು ರೈತರಿಗೆ ಮಾಡಿದ ದ್ರೋಹವಾಗಿದೆ. ಹಾಲು ಒಕ್ಕೂಟ ಇರುವುದು ರೈತರಿಗೆ ಅನುಕೂಲ ಕಲ್ಪಿಸಲೆಂದೇ ಹೊರತು ಒಕ್ಕೂಟದ ಲಾಭಕ್ಕಾಗಿ ಅಲ್ಲ. ಇದನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹೇಳಿದ್ದಾರೆ. ಆದರೂ ಆಡಳಿತ ಮಂಡಳಿ ರೈತರಿಗೆ ಸಿಗಬೇಕಿದ್ದ ಹಣಕ್ಕೆ ಕತ್ತರಿ ಹಾಕಿರುವುದು ಸರಿಯಲ್ಲ ಎಂದರು.

ಹಾವೇರಿ ಹಾಲು ಒಕ್ಕೂಟ ಆರಂಭವಾಗಿ ಕೇವಲ ಎರಡು ವರ್ಷಗಳಾಗಿವೆ. ಜಿಲ್ಲೆಯ ರೈತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪ್ರತ್ಯೇಕ ಒಕ್ಕೂಟ ರಚಿಸಲಾಗಿದೆ. ಲೀಟರ್ ಹಾಲಿಗೆ ಸರ್ಕಾರವೇ ₹4 ಹೆಚ್ಚಳ ಮಾಡಿರುವಾಗ ₹3.50 ರುಪಾಯಿ ಕಡಿತ ಮಾಡಿರುವುದು ಯಾಕೆ? ಒಕ್ಕೂಟ ನಷ್ಟದಲ್ಲಿದ್ದರೆ ಬಾಗಿಲು ಮುಚ್ಚಿ. ಇಷ್ಟು ದಿನ ಇಲ್ಲದ ನಷ್ಟ ಈಗ ಏಕೆ ಆಗುತ್ತಿದೆ ಎಂದು ರೈತರು ಪ್ರಶ್ನಿಸಿದರು.ಹಾವೆಮುಲ್ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಗೌಡ ಅವರನ್ನು ರೈತರು ತರಾಟೆಗೆ ತೆಗೆದುಕೊಂಡರು. ಸರ್ಕಾರ ಹಾಲಿನ ದರ ಏರಿಕೆ ಮಾಡಿದ್ದರಿಂದ ಬೇರೆ ಒಕ್ಕೂಟಗಳು ಏರಿಕೆ ಮಾಡಿವೆ. ಆದರೆ, ಹಾವೇರಿಯಲ್ಲಿ ಮಾತ್ರ ದರ ಇಳಿಸಲಾಗಿದೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಆದ್ದರಿಂದ ತಕ್ಷಣ ಮೊದಲು ನೀಡುತ್ತಿದ್ದ ದರಕ್ಕೆ ಹೆಚ್ಚುವರಿಯಾಗಿ ₹4 ಏರಿಕೆ ಮಾಡಿ ರೈತರಿಗೆ ಅನುಕೂಲ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಾನ್ವೇಷಣೆ ಪರೀಕ್ಷೆ

ಹಾವೇರಿ: ನಗರದ ಭಗತ್‌ಸಿಂಗ್‌ ಪಿಯು ಕಾಲೇಜಿನಿಂದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎರಡು ವರ್ಷ ಉಚಿತ ಶಿಕ್ಷಣ ನೀಡಲು ಉದ್ದೇಶಿಸಲಾಗಿದ್ದು, ಏ. 6ರಂದು ಪ್ರತಿಭಾನ್ವೇಷಣೆ ಪರೀಕ್ಷೆ ನಡೆಸಲಾಗುತ್ತಿದೆ.ಕಳೆದ 12 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಭಗತ್‌ಸಿಂಗ್‌ ಕಾಲೇಜು ಪ್ರಸಕ್ತ ಸಾಲಿನಲ್ಲಿ 10 ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಉದ್ದೇಶಿಸಿದೆ. ಅದಕ್ಕಾಗಿ ಏ. 6ರಂದು ನಗರದ ನಡೆಯುವ ಪ್ರತಿಭಾನ್ವೇಷಣೆ ಪರೀಕ್ಷೆಗೆ ಹಾಜರಾಗಲು ಕೋರಿದೆ. ವಿಜ್ಞಾನ, ಗಣಿತ, ಇಂಗ್ಲಿಷ ವ್ಯಾಕರಣಕ್ಕೆ ತಲಾ 20 ಅಂಕ ಇರಲಿದ್ದು, ಒಟ್ಟು 60 ಅಂಕಗಳಿಗೆ ಒಂದು ಗಂಟೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯು ಹಾವೇರಿ ನಗರದಲ್ಲಿರುವ ಭಗತ್‌ಸಿಂಗ್ ಕಾಲೇಜಿನಲ್ಲಿ ಮತ್ತು ಅಕ್ಕಿಆಲೂರಿನ ಭಗತ್‌ಸಿಂಗ್ ಪಿಯು ಕಾಲೇಜಿನಲ್ಲಿ ಕನ್ನಡ, ಇಂಗ್ಲಿಷ್‌ ಮತ್ತು ಉರ್ದು ಭಾಷೆಯಲ್ಲಿ ಏಕಕಾಲಕ್ಕೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ಮೊ. 8139997574, 6363539564 ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ಸಂಸ್ಥೆಯ ಅಧ್ಯಕ್ಷ ಸತೀಶ ಎಂ.ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article