ಕನ್ನಡಪ್ರಭ ವಾರ್ತೆ ಮಂಗಳೂರು
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ 35ನೇ ಪದವಿ ಪ್ರದಾನ ಸಮಾರಂಭ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಗುರುವಾರ ನಡೆಯಿತು. 89 ಹೋಮಿಯೋಪಥಿ ಪದವೀಧರರು ಮತ್ತು 26 ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.ಕೋಲ್ಕತಾದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಮಿಯೋಪಥಿಯ ಮಾಜಿ ನಿರ್ದೇಶಕ ಡಾ.ಸುಭಾಸ್ ಸಿಂಗ್ ಅವರು ಪದವಿ ಪ್ರದಾನ ನೆರವೇರಿಸಿ, ವೈದ್ಯಕೀಯ ಪದವಿ ಪಡೆಯುವ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಸದಾ ಜಾಗೃತವಾಗಿರಬೇಕು. ಪದವಿ ಪಡೆಯುವುದು ಎಷ್ಟು ಮುಖ್ಯವೋ, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಅತ್ಯಂತ ಜವಾಬ್ದಾರಿಯುತವಾಗಿ ಸೇವೆ ಸಲ್ಲಿಸುವುದು ಕೂಡ ಅಷ್ಟೇ ಮುಖ್ಯ ಎಂದು ಕಿವಿಮಾತು ಹೇಳಿದರು.
ವೈದ್ಯಕೀಯ ಸೇವೆ ಅತ್ಯಂತ ಮಹತ್ವವಾದುದು. ರೋಗಿಗಳ ಸೇವೆಗೆ ವೈದ್ಯರು ಸದಾ ಸಿದ್ಧರಿರಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷ, ಬಿಷಪ್ ಡಾ.ಪೀಟರ್ ಪೌಲ್ ಸಲ್ಡಾನ್ನಾ ಮಾತನಾಡಿ, ಸಮಗ್ರ ಹೋಮಿಯೋಪಥಿ ಅಧ್ಯಯನ ಇಂದಿನ ಅಗತ್ಯತೆಗಳಲ್ಲಿ ಒಂದಾಗಿದೆ. ಈ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ ಎಂದರು.
ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪ್ರವೀಣ್ ಮಾರ್ಟಿಸ್ ಮುಖ್ಯ ಅತಿಥಿಯಾಗಿದ್ದರು. ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಫಾದರ್ ಅಶ್ವಿನ್ ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ ಡಿವಿಜನ್‌ನ ಆಡಳಿತಾಧಿಕಾರಿ ಫಾದರ್ ನೆಲ್ಸನ್ ಧೀರಾಜ್ ಪಾಯ್ಸ್, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಉಪಪ್ರಾಂಶುಪಾಲೆ ಡಾ.ವಿಲ್ಮಾ ಮೀರಾ ಡಿಸೋಜ, ವೈದ್ಯಕೀಯ ಅಧೀಕ್ಷಕ ಡಾ.ಗಿರೀಶ್, ಸಮಾರಂಭದ ಸಂಚಾಲಕಿ ಡಾ.ರೆಶೆಲ್ ನೊರೊನ್ಹ ಇದ್ದರು.ಪದವೀಧರರ ಪರವಾಗಿ ಡಾ.ಆಶಾ ಡಿಸೋಜ ಅನಿಸಿಕೆ ವ್ಯಕ್ತಪಡಿಸಿದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಸ್ವಾಗತಿಸಿದರು. ನಿಯೋಜಿತ ನಿರ್ದೇಶಕ ಫಾದರ್ ಫೌಸ್ಟಿನ್ ಲೂಕಸ್ ಲೋಬೊ ವಂದಿಸಿದರು. ಹೋಮಿಯೋಪಥಿ ಕಾಲೇಜು ಪ್ರಿನ್ಸಿಪಾಲ್ ಡಾ. ಇ.ಎಸ್.ಜೆ. ಪ್ರಭು ಕಿರಣ್ ವಾರ್ಷಿಕ ವರದಿ ಮಂಡಿಸಿ, ಪ್ರಮಾಣ ವಚನ ಬೋಧಿಸಿದರು. ಡಾ.ಸ್ಕಂದನ್ ಎಸ್.ಕುಮಾರ್ ಮತ್ತು ಡಾ.ಆ್ಯಡ್ಲಿನ್ ಆರ್.ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು.