ಕಾರಟಗಿ:
ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟಿಸಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಗುರುವಾರ ಹಿಂದೂ ಸಮಾಜ ಮತ್ತು ಬಸವನಗೌಡ ಯತ್ನಾಳ ಅಭಿಮಾನಿ ಬಳಗದಿಂದ ಪ್ರತಿಭಟನಾ ರ‍್ಯಾಲಿ ನಡೆಯಿತು.ಇಲ್ಲಿನ ಬಸವೇಶ್ವರನಗರ ಬಳಿ ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ಸೇರಿದ ಪ್ರತಿಭಟನಾಕಾರರು ಚೆನ್ನಮ್ಮ ವೃತ್ತಕ್ಕೆ ಪೂಜೆ ಸಲ್ಲಿಸಿ ರ‍್ಯಾಲಿ ಪ್ರಾರಂಭಿಸಿದರು. ಪ್ರತಿಭಟನಾ ಮೆರವಣಿಗೆ ಆರ್.ಜಿ. ಮುಖ್ಯರಸ್ತೆಯ ಮೂಲಕ ನವಲಿ ವೃತ್ತಕ್ಕೆ ಆಗಮಿಸಿ ಅಲ್ಲಿ ಸಭೆಯಾಗಿ ಮಾರ್ಪಟ್ಟಿತು.ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಯತ್ನಾಳ ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಹೊಂದಾಣಿಕೆ ರಾಜಕಾರಣ ಹಾಗೂ ಭ್ರಷ್ಟಚಾರ ಕುಟುಂಬ ರಾಜಕಾರಣ ವಿರೋಧಿಸಿದ್ದಕ್ಕೆ ಅವರನ್ನು ಉಚ್ಚಾಟಿಸಲಾಗಿದೆ. ಇದು ಇಡೀ ಹಿಂದೂಗಳಿಗೆ ಮಾಡಿರುವ ಅಪಮಾನ. ಹೈ ಕಮಾಂಡ್ ನಿರ್ಧಾರದಿಂದ ಲಕ್ಷಾಂತರ ಕಾರ್ಯಕರ್ತರಿಗೆ ನೋವಾಗಿದೆ. ಯತ್ನಾಳ ಅವರನ್ನು ಉಚ್ಚಾಟಿಸಿರುವುದಕ್ಕೆ ಪಕ್ಷ ಪಶ್ಚಾತಾಪ ಪಡೆಯಲಿದೆ ಎಂದರು.
ಹಿಂದೂಗಳ ಪರವಾಗಿ ಸತತವಾಗಿ ಹೋರಾಟ ನಡೆಸಿದ ಯತ್ನಾಳ ಅವರಿಗೆ ಇಂದು ಅನ್ಯಾಯವಾಗಿದೆ. ಅವರಿಗೆ ನೈತಿಕ ಬೆಂಬಲ ತುಂಬಲು ಅವರಿಂದೇ ನಾವಿದ್ದೇವೆ ಎಂದರು.ಹಿಂದುತ್ವದ ಗಟ್ಟಿಧ್ವನಿಯನ್ನು ಉಡುಗಿಸುವ ಹುನ್ನಾರ ನಡೆಸಿ ಯತ್ನಾಳರನ್ನು ಉಚ್ಚಾಟಿಸಿದ್ದಾರೆ. ಬಿಜೆಪಿ ಮತ್ತೊಮ್ಮೆ ಪರಿಶೀಲಿಸಿ ಅವರನ್ನು ಪಕ್ಷಕ್ಕೆ ಕರೆತರಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪಕ್ಷದ ಹೈಕಮಾಂಡ್‌ಗೆ ನೇರವಾಗಿ ಎಚ್ಚರಿಸಿದರು.
ಇದಕ್ಕು ಮುನ್ನ ರಾಜ್ಯ ಹೆದ್ದಾರಿಯ ಮೂಲಕ ಸಾಗಿದ ಬೃಹತ್ ಪ್ರತಿಭಟನಾ ರ‍್ಯಾಲಿ ಹಳೆಬಸ್ ನಿಲ್ದಾಣದ ಮೂಲಕ ನವಲಿ ವೃತ್ತಕ್ಕೆ ಆಗಮಿಸಿ ರಸ್ತೆ ತಡೆ ನಡೆಸಿ ಘೋಷಣೆ ಕೂಗಿತು. ಒಂದು ಗಂಟೆ ರಸ್ತೆ ತಡೆ ನಡೆಸಿದ ಹಿನ್ನಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಸವಾರರು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.ಪ್ರತಿಭಟನೆ ಪರಮೇಶಗೌಡ ಪೊಲೀಸ್‌ಪಾಟೀಲ್, ಬಸವರಾಜ ಎತ್ತಿನಮನಿ, ಕಳಕನಗೌಡ ಪಾಟೀಲ್, ವಿರುಪನಗೌಡ ಖಂಡ್ರಿ, ಬಸವರಾಜ ಕಡೆಮನಿ, ಅಮರೇಶ ಕುಳಗಿ, ಶಿವಾನಂದ ಕನಕಗಿರಿ, ಗುಂಡಪ್ಪ ಕುಳಗಿ, ಪ್ರಭುರಾಜ ಬೂದಿ, ವೀರನಗೌಡ ಮಾ.ಪಾಟೀಲ್, ಶರಣಪ್ಪ ಶಿವಪೂಜಿ, ಸೋಮಶೇಖರಗೌಡ ಮುಷ್ಟೂರ, ದುರುಗೇಶ ಹೊಸ್ಕೇರಾ, ರವಿ ತಿಮ್ಮಾಪುರ, ಮಲ್ಲನಗೌಡ ಮಾ.ಪಾಟೀಲ್, ಪಂಪನಗೌಡ ಮಾ. ಪಾಟೀಲ್, ಶರಣಪ್ಪ ಅಂಗಡಿ, ಪಂಪನಗೌಡ ಜಂತಗಲ್ ಸೇರಿದಂತೆ ಇತರರು ಇದ್ದರು.