ಕನ್ನಡಪ್ರಭ ವಾರ್ತೆ ರಾಮನಗರ
ಸಂಘದ ಖಜಾಂಚಿ ಎಂ.ಆರ್. ನಾಗರಾಜು, ನಿರ್ದೇಶಕ ಅಶ್ವತ್ಥ, ಮುಖಂಡ ಬೈರಪ್ಪ ಸೇರಿದಂತೆ ರೈತರು, ನಗರಾಭಿವೃದ್ಧಿ ಇಲಾಖೆ ಮೂಲಕ ಸಚಿವ ಭೈರತಿ ಸುರೇಶ್ ಅವರಿಗೆ ಮನವಿ ಸಲ್ಲಿಸಿ ಕರ್ನಾಟಕ ನಗರಾಭಿವೃದ್ಧಿ ಕಾಯ್ದೆ, 1987ರ ಅಡಿಯಲ್ಲಿ ಬಿಡದಿ ಟೌನ್ ಶಿಪ್ ಯೋಜನೆಗಾಗಿ ಫಲವತ್ತಾದ ಕೃಷಿ ಭೂಮಿಯ ಭೂ ಸ್ವಾಧೀನವನ್ನು ಸಂಪೂರ್ಣವಾಗಿ ಕೈ ಬಿಡಬೇಕು. ರೈತರ ಅಹವಾಲು ಆಲಿಸುವ ಸಭೆ ಕರೆಯಬೇಕೆಂದೆು ಒತ್ತಾಯಿಸಿದರು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅನುಷ್ಠಾನಗೊಳಿಸುತ್ತಿರುವ ಬಿಡದಿ ಟೌನ್ ಶಿಪ್ ಯೋಜನೆಗಾಗಿ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ, 1987ರ ಕಲಂ 17(1)ರಡಿ ಉದ್ದೇಶಿತ ಸಮಗ್ರ ಉಪನಗರ ಯೋಜನೆಗಾಗಿ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆಯನ್ನು 2025ರ ಮಾ.12ರಂದು ಪ್ರಕಟಿಸಲಾಗಿದೆ.ಪ್ರಸ್ತುತ ಯೋಜನೆಗೆ ಗುರುತಿಸಿರುವ ಭೈರಮಂಗಲ ಗ್ರಾಮ ಪಂಚಾತಿಯ 10 ಗ್ರಾಮಗಳು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಯ 16 ಗ್ರಾಮಗಳು ಸಂಪೂರ್ಣ ನೀರಾವರಿಯಿಂದ ಕೂಡಿದ ಫಲವತ್ತಾದ ಕೃಷಿ ಭೂಮಿಗಳಾಗಿದ್ದು, ಬಹು ವಾರ್ಷಿಕ ಬೆಳೆಗಳು ಸೇರಿದಂತೆ ಆಹಾರ ಧಾನ್ಯಗಳು, ಹಾಲು, ವಿವಿಧ ರೀತಿಯ ತರಕಾರಿ, ಹಣ್ಣುಗಳನ್ನು ಬೆಳೆಯುತ್ತಿರುವ ಭೂಮಿಗಳಾಗಿವೆ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ಅಧಿಸೂಚನೆಗೆ ಸುಮಾರು 3500ಕ್ಕೂ ಹೆಚ್ಚು ರೈತ ಕುಟುಂಬಗಳು ಆಕ್ಷೇಪಣೆ ಇದೆ ಎಂದು ಭೂ ಸ್ವಾಧೀನಕ್ಕೆ ತಮ್ಮ ವಿರೋಧವನ್ನು ಲಿಖಿತವಾಗಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಚೇರಿ ಎದುರು ಹಲವಾರು ಪ್ರತಿಭಟನೆಗಳನ್ನು ಬೃಹತ್ ಸಂಖ್ಯೆಯಲ್ಲಿ ನಡೆಸಿ ಅನ್ಯಾಯ ಹಾಗೂ ಬಲವಂತದ ಭೂ ಸ್ವಾಧೀನವನ್ನು ಕೈಬಿಡಬೇಕು. ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಡಬೇಕು ಎಂದು ಒತ್ತಾಯಿಸಲಾಗಿದೆ ಎಂದಿದ್ದಾರೆ.