ಹನೂರು ತಾಲೂಕಿನ ಬಿಆರ್‌ಟಿ ವ್ಯಾಪ್ತಿಯ ವಲಯ ಅರಣ್ಯ ಅಧಿಕಾರಿ ಕಚೇರಿಗೆ ರೈತ ಸಂಘಟನೆ ಭೇಟಿ ನೀಡಿ ಕಾಡಾನೆಗಳು ರೈತರ ಜಮೀನಿಗೆ ಬರದಂತೆ ತಡೆಗಟ್ಟಲು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಹನೂರು
ನಿರಂತರವಾಗಿ ರೈತರ ಜಮೀನುಗಳಲ್ಲಿ ಕಾಡಾನೆಗಳ ದಾಳಿಯಿಂದ ಫಸಲು ನಷ್ಟ ಉಂಟಾಗಿ ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವುದರಿಂದ ಹಿರಿಯ ಅಧಿಕಾರಿಗಳು ಶಾಶ್ವತ ಪರಿಹಾರ ನೀಡಲು ಸ್ಥಳಕ್ಕೆ ಆಗಮಿಸಬೇಕು ಎಂದು ರೈತ ಸಂಘಟನೆ ವತಿಯಿಂದ ಮನವಿ ಮಾಡಲಾಯಿತು. ಹನೂರು ತಾಲೂಕಿನ ಬೈಲೂರು ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಕಾಡಾನೆಗಳು ರೈತರ ಜಮೀನುಗಳಿಗೆ ಬರುವುದನ್ನು ತಪ್ಪಿಸಲು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿ ವಲಯ ಅರಣ್ಯಾಧಿಕಾರಿ ಕಚೇರಿಗೆ ರೈತರ ಸಂಘಟನೆ ಮುಖಂಡರು ಭೇಟಿ ನೀಡಿ ಒತ್ತಾಯಿಸಿದರು.ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ರಾತ್ರಿ ವೇಳೆ ಕಾಡಾನೆಗಳು ಬೈಲೂರು ಹಾಗೂ ಹುಣಸೆಪಾಳ್ಯ ಸೇರಿದಂತೆ ಮಲೆಮಾದೇಶ್ವರ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಬರುವ ರೈತರ ಜಮೀನುಗಳಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಜಮೀನಿನಲ್ಲಿ ಅಲ್ಪಸ್ವಲ್ಪ ನೀರಿನಲ್ಲಿ ಬೆಳೆಯಲಾಗುತ್ತಿರುವ ಫಸಲನ್ನು ರೈತರು ತೆಗೆಯಲು ಆಗದೆ ಕಾಡಾನೆಗಳ ಪಾಲಾಗುತ್ತಿದೆ. ಹೀಗಾಗಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವಿಭಾಗದ ಹಿರಿಯ ಅಧಿಕಾರಿಗಳಾದ ಡಿಸಿಎಫ್ ಬೈಲೂರು ಅರಣ್ಯ ಪ್ರದೇಶದಂಚಿನ ಕಾಡಾನೆಗಳ ಬರುವ ಸ್ಥಳದಲ್ಲಿ ಪರಿಶೀಲನೆ ನಡೆಸಿ ಗೇಟ್ ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ವಾರದಿಂದ ರೈತರು ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬೆಳ್ಳುಳ್ಳಿ ಬಿತ್ತನೆ ಮಾಡಲಾಗುವುದು. ಕಾಡು ಪ್ರಾಣಿಗಳ ದಾಳಿಯಿಂದ ನಷ್ಟ ಉಂಟಾಗುತ್ತದೆ. ಹೀಗಾಗಿ ಸಂಬಂಧಪಟ್ಟ ಅರಣ್ಯ ಹಿರಿಯ ಅಧಿಕಾರಿಗಳು ಕಾಡಾನೆಗಳು ಜಮೀನಿಗೆ ಬರದಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಈ ಭಾಗದಲ್ಲಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಅರಣ್ಯಾಧಿಕಾರಿ ಭರವಸೆ:
ವಲಯ ಅರಣ್ಯ ಅಧಿಕಾರಿ ಪ್ರಮೋದ್ ಮಾತನಾಡಿ, ಹಿರಿಯ ಅಧಿಕಾರಿಗಳಿಗೆ ಕಾಡಾನೆಗಳು ರೈತರ ಜನರಿಗೆ ಬರುವುದನ್ನು ತಿಳಿಸಿ ಸ್ಥಳಕ್ಕೆ ಬರುವಂತೆ ಮನವಿ ಮಾಡಲಾಗುವುದು, ಜೊತೆಗೆ ಶಾಶ್ವತ ಪರಿಹಾರ ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದೇ ವೇಳೆ ರೈತ ಮುಖಂಡರಾದ ಸದಾನಂದ, ಶಿವಮಾದಪ್ಪ, ರಾಜು, ಮಹೇಶ್, ಮಾದೇಶ್ ,ಬಸವರಾಜು, ಪುಟ್ಟಣ, ಶಿವು, ರಾಜು ಇನ್ನಿತರ ರೈತ ಮುಖಂಡರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.